ತಾಯಿ ಮೊಬೈಲ್ ಕೊಡಿಸಲಿಲ್ಲ ಎಂದು ನೊಂದ ಬಾಲಕಿ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಣ್ಣೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಜನಿ (17) ಮೂರು ದಿನಗಳ ಹಿಂದೆ ಕೃಷಿಹೊಂಡಕ್ಕೆ ಬಿದ್ದು ಆತ್ಮಹತ್ಯೆ ಶರಣಾಗಿದ್ದಾಳೆ. ಇಂದು ಸೋಮವಾರ ಕೃಷಿಹೊಂಡದಿಂದ ಮೃತದೇಹ ತೇಲಿಬಂದ ಬಳಿಕ ಬಾಲಕಿ ರಜನಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಮೇ 21 ರಂದು ಬೆಳಿಗ್ಗೆ ತಾಯಿಯೊಂದಿಗೆ ಮುನಿಸಿಕೊಂಡಿದ್ದ ಬಾಲಕಿ ರಜನಿ ಮನೆಬಿಟ್ಟು ಹೋಗಿದ್ದಳು. ಮಗಳು ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ತಾಯಿ ಮುನಿರತ್ನಮ್ಮ ಸುಮ್ಮನಿದ್ದರು. ಇಂದು ಬೆಳಿಗ್ಗೆ ಮನೆ ಸಮೀಪದ ತೋಟದಲ್ಲಿ ರಜನಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕಳೆದ 15 ವರ್ಷಗಳ ಹಿಂದೆ ಪತಿ ವೆಂಕಟೇಶ್ ಹಾಗೂ 16 ವರ್ಷದ ಹಿಂದೆ ಮಗ ಮಂಜು ಅವರನ್ನು ಮುನಿರತ್ನಮ್ಮ ಅವರು ಕಳೆದುಕೊಂಡಿದ್ದರು. ಇದೀಗ, ಇದ್ದ ಒಬ್ಬ ಮಗಳೂ ದುಡುಕಿನ ನಿರ್ಧಾರದಿಂದ ಸಾವನ್ನಪ್ಪಿದ್ದಾಳೆ. ಶಿಡ್ಲಘಟ್ಟ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.