ಲಾಕ್‌ಡೌನ್‌ ಹೊತ್ತಲ್ಲಿ ಹಸಿದವರ ಹೊಟ್ಟೆ ತಣಿಸಿದ ಬೆಂಗಳೂರಿನ ಈ ಐಟಿ ಹುಡುಗ..!

ವಾಟ್ಸಾಪ್‌. ವಾಟ್ಸಾಪ್‌ವೊಂದಿದ್ದರೆ ಸಾಕು, ಜಗತ್ತೇ ಬೇಕಿರಲ್ಲ. ಅದರಲ್ಲೂ ಲಾಕ್‌ಡೌನ್‌ ಹೊತ್ತಲ್ಲಿ ಟಿಕ್‌ಟಾಕ್‌, ವಾಟ್ಸಾಪ್‌, ಫೇಸ್‌ಬುಕ್‌ ಬ್ಯುಸಿ ಆಗಿರೋರೇ ಹೆಚ್ಚು. ಆದರೆ ಲಾಕ್‌ಡೌನ್‌ ಹೊತ್ತಲ್ಲಿ ವಾಟ್ಸಾಪ್‌ ಮೂಲಕ ಹಸಿದವರ ಹೊಟ್ಟೆ ತುಂಬಿಸಬಹುದು ಎನ್ನುವುದನ್ನು ತೋರಿಸಿಕೊಂಡಿದ್ದು ಈ ಐಟಿ ಹುಡುಗ.

ಪಾರ್ಟಿ-ಗೀರ್ಟಿ ಅಂತೆಲ್ಲ ಸುತ್ತಾಡ್ತಿದ್ದ ಈ ಹುಡುಗ ಲಾಕ್‌ಡೌನ್‌ ಹೊತ್ತಲ್ಲಿ ಹಸಿದವ ಹೊಟ್ಟೆಯಲ್ಲಿರುವ ಕಾರ್ಮಿಕರಿಗೆ ಏನಾದರೂ ಸಹಾಯ ಮಾಡ್ಬೇಕು ಅಂತ ಅನ್ನಿಸಿತು. ಆಗ ಆ ಐಟಿ ಹುಡುಗ ಮಾಡಿದಿಷ್ಟೇ, ಸೀದಾ ತನ್ನ ಮೊಬೈಲ್‌ ತಗೊಂಡು ಸ್ಟೇಟಸ್‌ ಹಾಕಿದ. ನಾನು ಹಸಿದವರಿಗೆ ದಿನಸಿ ಕೊಡ್ಬೇಕು ಅಂತ ಇದ್ದೀನಿ. ನನ್ನ ಜೊತೆ ನೀವು ಕೈ ಜೋಡಿಸಬಹುದು ಎಂದು ಸ್ಟೇಟಸ್‌ ಹಾಕಿದ.

ಈ ಹುಡುಗ ಸ್ಟೇಟಸ್‌ಗಷ್ಟೇ ಸೀಮಿತ ಆಗಿಲ್ಲ. ಸೀದಾ ಅಂಗಡಿಗೆ ಹೋದ. ದಿನಸಿಗಳನ್ನು ಖರೀದಿಸಿದ. ಯಾರಿಗೆ ಸಹಾಯ ಮಾಡಬೇಕೋ ಅವರ ಕೈಗೆ ದಿನಸಿ ಬ್ಯಾಗ್‌ಗಳನ್ನು ಇಟ್ಟ. ಲಾಕ್‌ಡೌನ್‌ ಹೊತ್ತಲ್ಲಿ ದುಡಿಮೆಯೂ ಇಲ್ಲದೆ ಏನು ಮಾಡಬೇಕು ಅನ್ನೋ ಚಿಂತೆಯಲ್ಲಿದ್ದ ಜನರಿಗೆ ಏನೋ ಸಮಾಧಾನ, ಕೃತಜ್ಞತಾ ಭಾವ.

ಅಂದಹಾಗೆ ಆ ಹುಡುಗನ ಹೆಸರು ಮಂಜೂಷ್‌ ಜೈನ್‌. ಮಾರ್ಚ್‌ ೩೦ರಿಂದ ಶುರು ಮಾಡಿದ ಆಹಾರ ಸಾಮಗ್ರಿ ವಿತರಣೆಯನ್ನ ಈಗಲೂ ಮುಂದುವರಿಸಿದ್ದಾರೆ.

ಬೆಂಗಳೂರಿನ ಬಿಟಿಎಂ ಲೇಔಟ್‌, ಜೆಪಿ ನಗರ, ಅರೆಕೆರೆ ಬನ್ನೇರುಘಟ್ಟ ರೋಡ್‌, ಅಕ್ಷಯ ನಗರ, ವಿಜಯ ಬ್ಯಾಂಕ್‌ ಕಾಲೋನಿ, ಹುಳಿಮಾವು ಹೀಗೆ ಹಲವು ಕಡೆಗಳಲ್ಲಿ ದಿನಸಿ ಬ್ಯಾಗ್‌ಗಳನ್ನು ವಿತರಿಸಿದ್ದಾರೆ.

ಸ್ವಯಂಪ್ರೇರಣೆಯಿಂದ ಇವರ ಅನ್ನದಾಸೋಹ ಕಾರ್ಯದಲ್ಲಿ ಇವರಿಗೆ ಆಪ್ತರು ಕೈ ಜೋಡಿಸಿದ್ದಾರೆ. ಇವರ ವಾಟ್ಸಾಪ್‌ ಸ್ಟೇಟಸ್‌ಗಳನ್ನು ನೋಡಿ, ಇವರ ಕೆಲಸದಿಂದ ಪ್ರೇರಣೆಗೊಂಡು ಪರಿಚಯವೇ ಇಲ್ಲದವರೂ ಕೂಡಾ ಇವರ ಸೇವೆಗೆ ಕಿರುಕಾಣಿಕೆ ನೀಡಿದ್ದಾರೆ.

ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿ ಆಗಿರುವ ಮಂಜೂಷ್‌ ಈಗ ಉದ್ಭವ್‌ ಎನ್ನುವ ಟ್ರಸ್ಟ್‌ನ್ನು ಶುರು ಮಾಡಿದ್ದಾರೆ. ತಮ್ಮ ಸಾಮಾಜಿಕ ಕಾಳಜಿ ಇಲ್ಲಿಗೆ ನಿಲ್ಲದೇ ಇರಲಿ, ನಿರಂತರ ಹರಿಯುವ ನೀರಾಗಲಿ ಎನ್ನುವುದು ಅವರ ಉದ್ದೇಶ.

ನೀವು ಇವರ ಸಮಾಜ ಸೇವೆಗೆ ಕೈಜೋಡಿಸಬಹುದು. ಮಂಜೂಷ್‌ ಅವರ ಮೊಬೈಲ್‌ ಸಂಖ್ಯೆಯನ್ನೂ ಇಲ್ಲಿ ಕೊಡ್ತಿದ್ದೇವೆ. ಮೊಬೈಲ್‌ ಸಂಖ್ಯೆ – 95380 10806

LEAVE A REPLY

Please enter your comment!
Please enter your name here