ಮೊದಲ ಲಾಕ್‌ಡೌನ್‌ನಲ್ಲೇ ಇದ್ದ ದುಡ್ಡೆಲ್ಲ ಖಾಲಿ ಆಯ್ತು, ಈಗ ಊಟನೂ ಸಿಗ್ತಿಲ್ಲ – ಬೆಂಗಳೂರಿನಿಂದ ನಡೆದೇ ಉತ್ತರಪ್ರದೇಶಕ್ಕೆ ಹೊರಟ ಕಾರ್ಮಿಕರು

ಕಾರ್ಮಿಕರಿಗೆ ಮತ್ತೆ ಕೆಲಸ ಕೊಡಿಸುವ ಸಲುವಾಗಿ ಕಟ್ಟಡ ನಿರ್ಮಾಣ ಮಾಡುವ ಬಿಲ್ಡರ್‌ಗಳ ಜೊತೆಗೆ ಮಾತುಕತೆ ನಡೆಸಿದ್ದಾಗಿ ಹೇಳಿದ್ದ ಕರ್ನಾಟಕ ಸರ್ಕಾರ ಹೊರರಾಜ್ಯಗಳಿಗೆ ಕಾರ್ಮಿಕರನ್ನು ವಾಪಸ್‌ ಕಳುಹಿಸಿಕೊಡಲು ಓಡಾಡುತ್ತಿದ್ದ ವಿಶೇಷ ರೈಲುಗಳನ್ನು ದಿಢೀರ್‌ ರದ್ದುಗೊಳಿಸುವಂತೆ ರೈಲ್ವೆ ಇಲಾಖೆಗೆ ಪತ್ರ ಬರೆದಿತ್ತು. ಸಿಎಂ ಯಡಿಯೂರಪ್ಪ ಸರ್ಕಾರದ ಈ ನಿರ್ಧಾರದ ವಿರುದ್ಧ ಅಕ್ರೋಶ ವ್ಯಕ್ತವಾಗಿದೆ.

ವಿಶೇಷ ಶ್ರಮಿಕ ರೈಲು ರದ್ದಾದ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಿಲುಕಿಕೊಂಡಿರುವ ಉತ್ತರ ಪ್ರದೇಶ ಮೂಲದ ಕಾರ್ಮಿಕರು ನಡೆದುಕೊಂಡೇ ತಮ್ಮ ಊರುಗಳತ್ತ ಹೊರಟಿದ್ದಾರೆ. ಗೂಗಲ್‌ ಮ್ಯಾಪ್‌ ಪ್ರಕಾರ ಬೆಂಗಳೂರಿನಿಂದ ಉತ್ತರಪ್ರದೇಶಕ್ಕೆ ಇರುವ ದೂರ 1,800 ಕಿಲೋ ಮೀಟರ್‌. ಕಾಲ್ನಡಿಗೆಯಲ್ಲಿ ಹೋಗಬೇಕಾದ್ರೆ 363 ಗಂಟೆ ಅಂದರೆ 15ರಿಂದ 16 ದಿನ ಬೇಕು.

ಕಾಲ್ನಡಿಗೆಯಲ್ಲೇ ಉತ್ತರಪ್ರದೇಶಕ್ಕೆ ಹೊರಟಿರುವ ಕಾರ್ಮಿಕರನ್ನು ನೋಡಿದ ಬೆಂಗಳೂರಿನ ಸಹಕಾರ ನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೃಷ್ಣಬೈರೇಗೌಡ ಅವರೊಂದಿಗೆ ಮಾತಾಡಿದರು.

ಯಾವ ಕಡೆ ಹೊರಟ್ಟಿದ್ದೀರಿ ಎಂಬ ಶಾಸಕರ ಪ್ರಶ್ನೆಗೆ ಉತ್ತರಪ್ರದೇಶಕ್ಕೆ ವಾಪಸ್‌ ಹೋಗ್ತಿದ್ದೇವೆ ಎಂದು ಕಾರ್ಮಿಕರು ಎಂದು ಉತ್ತರಿಸಿದ್ದಾರೆ. ಊಟ-ತಿಂಡಿಗೆ ಏನೂ ಇಲ್ಲ. ಇಲ್ಲಿ ಏನು ಮಾಡೋಣ. ನಮ್ಮ ಬಳಿ ದುಡ್ಡು ಇಲ್ಲ. ನಮ್ಮ ಬಳಿ ಇದ್ದ ದುಡ್ಡೆಲ್ಲವೂ ಮೊದಲ ಲಾಕ್‌ಡೌನ್‌ನಲ್ಲೇ ಖಾಲಿ ಆಯಿತು. ಮತ್ತೆ ಲಾಕಡೌನ್‌ ಮಾಡಿದರು. ಮತ್ತೆ ಹದಿನೇಳವರೆಗೆ ಮಾಡಿದ್ದಾರೆ. ಮತ್ತೆ ಲಾಕ್‌ಡೌನ್‌ ಮಾಡಲ್ಲ ಅಂತ ಹೇಗೆ ನಂಬೋದು..? ಕಾಲ್ನಡಿಗೆಯಲ್ಲಿ ಹೇಗೋ ಹೋಗ್ತೀವಿ, ಗೊತ್ತಿಲ್ಲ. ದಿನಕ್ಕೆ ೫೦ ಕಿಲೋ ಮೀಟರ್‌ ನಡೀತಿವೆ. ಇದು ನಮ್ಮ ಹಣೆಬರಹ. ನಮ್ಮ ಬಳಿ ದುಡ್ಡಿಲ್ಲ ಎಂದು ಉತ್ತರಪ್ರದೇಶ ಮೂಲದ ಕಾರ್ಮಿಕರು ಹೇಳಿಕೊಂಡಿದ್ದಾರೆ.

ಈ ವೀಡಿಯೋವನ್ನು ಸ್ವತಃ ಶಾಸಕರೇ ರೆಕಾರ್ಡ್‌ ಮಾಡಿದ್ದು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಾಕಿದ್ದಾರೆ.

 

ಅಲ್ಲದೇ ರಿಯಲ್‌ ಎಸ್ಟೇಟ್‌ ಕಂಪನಿಗಳು ಮಾಲೀಕತ್ವ ಹೊಂದರು ಕಾರ್ಮಿಕರು ಮೆಷಿನ್‌ಗಳಲ್ಲ, ಅವರು ಮನುಷ್ಯರು. ಇಲ್ಲೇ ಉಳಿದುಕೊಂಡು ಕೆಲಸ ಮಾಡಬೇಕಾ ಅಥವಾ ಮತ್ತೆ ತಮ್ಮ ಕುಟುಂಬದವರೊಂದಿಗೆ ಸೇರಿಕೊಳ್ಳಬೇಕಾ ಎಂಬ ಆಯ್ಕೆಯನ್ನು ಅವರಿಗೆ ಬಿಟ್ಟುಬಿಡಿ ಎಂದು ಶಾಸಕರು ಆಗ್ರಹಿಸಿದ್ದಾರೆ.

ಅಲ್ಲದೇ ಮುಖ್ಯ ಕಾರ್ಯದರ್ಶಿ ವಿಜಯ್‌ ಭಾಸ್ಕರ್‌ ಜೊತೆಗೆ ಮಾತಾಡಿರುವ ಕೃಷ್ಣ ಬೈರೇಗೌಡ ಅವರು, ರೈಲು ರದ್ದುಗೊಳಿಸಿರುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಅವರು ಬಡವರಾಗಿರಬಹುದು. ಆದರೆ ಜೀತದಾಳುಗಳಲ್ಲ. ವಿದೇಶದಲ್ಲಿರುವ ಭಾರತೀಯರು ವಾಪಸ್‌ ಆಗಲು ಬಯಸುವಂತೆ ಇವರೂ ತಮ್ಮ ಮನೆಗೆ ವಾಪಸ್‌ ಹೋಗಲು ಬಯಸಿದ್ದಾರೆ. ವಾಪಸ್‌ ಹೋಗಿ ಕುಟುಂಬದೊಂದಿಗೆ ಒಂದಾಗುವ ಹಕ್ಕು ಇದೆ ಎಂದು ಕೃಷ್ಣ ಬೈರೇಗೌಡ ಹೇಳಿದ್ದಾರೆ.

LEAVE A REPLY

Please enter your comment!
Please enter your name here