ಸಂಸದೆ ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ ಮತ್ತು ವೈರಲ್‌ ಆದ ಅದೊಂದು ಆಡಿಯೋ..! ಅಸಲಿ ಕಹಾನಿ ಏನಿರಬಹುದು..?

ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ತಮಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಅವರೇ ೨ ನಿಮಿಷ ೪೭ ಸೆಕೆಂಡ್‌ಗಳ ಹೇಳಿಕೆಯ ವೀಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.

ಅವರ ಹೇಳಿಕೆಯ ಪೂರ್ಣ ಹೇಳಿಕೆ ಹೀಗಿದೆ.

ʻನಿರಂತರವಾಗಿ ನನ್ನ ಕೆಲಸದಲ್ಲಿ ಜನರ ಕೆಲಸದಲ್ಲಿ ಯಾರಿಗೆ ಊಟ ಇಲ್ಲವೋ ಅವರಿಗೆ ಉಚಿತ ಅಕ್ಕಿ-ಧಾನ್ಯಗಳನ್ನು ಕೊಡುವ ಕೆಲಸ ಮಾಡುತ್ತಿದ್ದೇನೆ. ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಮೊನ್ನೆ ಮಸ್ಕತ್‌ನಲ್ಲಿ (ಮಸ್ಕತ್‌ ಅಲ್ಲ ಕುವೈತ್‌, ಹಲ್ಲೆಯ ವೀಡಿಯೋ ಟ್ವೀಟ್‌ನಲ್ಲಿ ಸಂಸದರು ಕುವೈತ್‌ನಲ್ಲಿ ಎಂದು ಹೇಳಿದ್ದಾರೆ) ಕೇರಳ ಹಿಂದೂ ಡ್ರೈವರ್‌ಗೆ ನಮ್ಮ ಕಾರ್ಯಕರ್ತನಿಗೆ ಜೆಹಾದಿಗಳು ಕಪಾಳ ಮೋಕ್ಷ ಮಾಡಿದ್ದರು. ಅದರ ವಿರುದ್ಧ ಸಿಡಿದೇಳುವ ಕೆಲಸವನ್ನು ಮಾಡಿದೆ. ಅಮಿತ್‌ ಶಾ ಅವರಿಗೆ ಪತ್ರವನ್ನು ಬರೆದ ಮೇಲೆ ಸುಮಾರು ನೂರಾರು ನನಗೆ ಬೆದರಿಕೆಯ ಮತ್ತು ಅಶ್ಲೀಲ ಕರೆಗಳು ಬಂದವು. ನಿನ್ನೆ ಬೆಳಗ್ಗೆ ನನಗೊಬ್ಬ ಫೋನ್‌ ಮಾಡಿದ್ದ. ಒಬ್ಬರಲ್ಲ ಹಲವಾರು ಜನ ನಿರಂತರವಾಗಿ ಫೋನ್‌ ಮಾಡಿ ಅನಾವಶ್ಯಕ ಮಾತಾಡಿದರು. ನಿನ್ನೆ ಫೋನ್‌ ಮಾಡಿದಾಗ ದುರುದ್ದೇಶವಾಗಿ ಮಾತಾಡಿದರು ಎನ್ನುವುದು ಸಾಬೀತಾಗಿದೆ. ಈ ಫೋನ್‌ನ ಹಿಂದೆ ಮತ್ತು ಮುಂದೆ ಯಾರಿಗೂ ಗೊತ್ತಿಲ್ಲ. ನೂರಾರು ಕರೆಗಳು ಬೆಳಗ್ಗಿನ ಜಾವ ಏಳು ಗಂಟೆಗೆ ಬಂದ ಮೇಲೆ ಅವನು ಮಾಡಿದ ಕರೆಗೆ ನನಗೆ ಗೊತ್ತಿಲ್ಲಪ್ಪ ಎಂದು ಹೇಳಿದೆ ನಾನು. ಕಳೆದ ಒಂದು ಒಂದೂವರೆ ತಿಂಗಳಿಂದ ಒಂದು ದಿನವೂ ನಾನು ವಿಶ್ರಾಂತಿ ಇಲ್ಲದೇ ಕೆಲಸ ಮಾಡಿದರು ಕೂಡಾ ಅನಾವಶ್ಯಕವಾದ ವಿಚಾರಗಳು ನಿನ್ನೆ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ವು. 

ನನಗೇನೂ ಬೇಸರವಿಲ್ಲ. ಜೆಹಾದಿಗಳು ಹೇಗೆ ನನಗೆ ಕರೆ ಮಾಡುತ್ತಿದ್ದಾರೆ, ಈ ಒಂದು ವಾಯ್ಸ್‌ ರೆಕಾರ್ಡ್ ಬಂದ ಮೇಲೆ ದುಬೈನಿಂದ ಮಸ್ಕತ್‌ನಿಂದ ಸುಮಾರು ನೂರಕ್ಕಿಂತಲೂ ಹೆಚ್ಚು ಫೋನ್‌ಗಳು ಬಂದ್ವು. ನಿನಗೆ ನನ್ನ ವಿರುದ್ಧ ಮಾತಾಡೋಕೆ ಬರುತ್ತೆ, ಇದು ನಿನಗೆ ಗೊತ್ತಿಲ್ವಾ..? ಎನ್ನುವಂತಹ ಅಶ್ಲೀಲವಾದ ಕರೆಗಳು ಮತ್ತು ಬೆದರಿಕೆ ಕರೆಗಳು ಬಂದವು. ಯಾರು ಈ ನ್ಯೂಸ್‌ನ್ನು, ವಾಯ್ಸ್‌ ರೆಕಾರ್ಡ್‌ನ್ನು ಫಾರ್ವಡ್‌ ಮಾಡಿದ್ದೀರಿ ಇದರ ಹಿಂದೆ ಮತ್ತು ಮುಂದೆಯನ್ನ ಅರ್ಥ ಮಾಡ್ಕೋಬೇಕು. ಯಾರು ಇದನ್ನು ಚಾಲನೆಗೆ ಬಿಟ್ಟಿದ್ದಾರೆ ಅವರು ಯಾವತ್ತೂ ನನ್ನ ಓಪಿನಿಯನ್‌ನ್ನು ಕೇಳಿಲ್ಲ. ನನ್ನ ವಿಚಾರವನ್ನು ಕೇಳಿಲ್ಲ. ಉಡುಪಿ-ಚಿಕ್ಕಮಗಳೂರಿನ ಸಂಸದೆಯಾಗಿ ನಾನು ಕೆಲಸ ಮಾಡುತ್ತಿದ್ದೇನೆ. ನನ್ನ ಮತದಾರರಿಗೆ ಅಗೌರವ ಬರುವ ಕೆಲಸವನ್ನು ಮಾಡಿಲ್ಲ. ಯಾರ್ಯಾರೋ ಲಾಕ್‌ಡೌನ್‌ನಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದಾರೋ ಗೊತ್ತಿಲ್ಲ, ಆದರೆ ನಾನು ವಿಶ್ರಾಂತಿ ತೆಗೆದುಕೊಂಡಿಲ್ಲ.

ಅದಕ್ಕಾಗಿ ಈ ವಿಚಾರದ ಹಿಂದೆ ಮತ್ತು ಮುಂದೆಯನ್ನ ಜನ ಅರ್ಥ ಮಾಡ್ಕೋಬೇಕು. ಹೇಗೆ ಜೆಹಾದಿಗಳು ಕಳೆದ ಎರಡ್ಮೂರು ವರ್ಷದಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆ. ನಿನ್ನೆ ಕೂಡಾ ಒಂದು ನಂಬರ್‌ನ್ನು ಕಳುಹಿಸಿಕೊಡ್ತೀನಿ. ಆ ನಂಬರ್‌ನಲ್ಲಿ ಎಷ್ಟು ಕೆಟ್ಟದಾಗಿ ಮಾತಾಡಿದ್ರು, ಪೊಲೀಸ್ರಿಗೆ ಕೊಟ್ಟರೂ ಕೂಡಾ ಎರಡು ಎರಡುವರೆ ವರ್ಷದಲ್ಲಿ ಒಂದೇ ಒಂದು ಫೋನ್‌ನ್ನು ಪತ್ತೆ ಮಾಡಲು ಆಗ್ಲಿಲ್ಲ, ಯಾಕೆಂದ್ರೆ ಇಂಟರ್‌ನೆಟ್‌ ಫೋನ್‌ನ್ನು ಪತ್ತೆ ಮಾಡಲು ಆಗಲ್ಲ ಎನ್ನುವಂತಹ ಸಬೂಬನ್ನು ಅವರು ಕೊಡ್ತಿದ್ದಾರೆ. ದೆಹಲಿಯಲ್ಲಿ ಹೇಳಿದ್ದೀನಿ, ಇಲ್ಲಿ ಹೇಳಿದ್ದೀನಿ. ಇದನ್ನು ಕಾರ್ಯಕರ್ತರು ಅರ್ಥಮಾಡ್ಕೋಬೇಕು ಎನ್ನುವಂತಹ ವಿನಾಯ್ತಿಯನ್ನು ಮಾತ್ರ ನಾನು ಮಾಡ್ತಾ ಇದ್ದೀನಿʼ

ಇದು ಶೋಭಾ ಕರಂದ್ಲಾಜೆ ಅವರ ಮಾತಿನ ಸಂಪೂರ್ಣ ಮಾಹಿತಿ.

ಸಂಸದೆ ಶೋಭಾ ಕರಂದ್ಲಾಜೆ ಮತ್ತು ಉಡುಪಿ ಜಿಲ್ಲೆಯ ವ್ಯಕ್ತಿಯೊಬ್ಬರ ನಡುವೆ ನಡೆದಿರುವ, ವೈರಲ್‌ ಆಗಿರುವ ಆಡಿಯೋದ ಸಾರಾಂಶವನ್ನು ತಿಳಿಸ್ತೇವೆ.

ಕರೆ ಮಾಡಿದವರು: ಹಲೋ…

ಸಂಸದೆ ಶೋಭಾ ಕರಂದ್ಲಾಜೆ: ಹಲೋ

ಕರೆ ಮಾಡಿದವರು: ನಮಸ್ತೇ ಮೇಡಂ

ಸಂಸದೆ ಶೋಭಾ ಕರಂದ್ಲಾಜೆ : ಹೇಳಿ

ಕರೆ ಮಾಡಿದವರು: ಉಡುಪಿಯಲ್ಲಿ ಮಧ್ಯಾಹ್ನ ೧ ಗಂಟೆಯವರೆಗೆ ಮಾತ್ರನಾ ಲಾಕ್‌ಡೌನ್‌ ರಿಲೀಫ್‌..?

ಸಂಸದೆ ಶೋಭಾ ಕರಂದ್ಲಾಜೆ : ನನಗೆ ಕರೆಕ್ಟಾಗಿ ಗೊತ್ತಿಲ್ಲರೀ..

ಕರೆ ಮಾಡಿದವರು : ಡಿಸಿಯವರು ಮಧ್ಯಾಹ್ನ ೧ ಗಂಟೆವರೆಗೆ ಆರ್ಡರ್‌ ಮಾಡಿದ್ದಾರಂತೆ. ನ್ಯೂಸ್‌ನಲ್ಲಿ ಸಂಜೆ ೭ ಗಂಟೆವರೆಗೂ ಓಪನ್‌ ಮಾಡಬಹುದು ಎಂದು ಹೇಳ್ತಾರೆ. ಗೊತ್ತಾಗ್ಲಿಲ್ಲ, ಅದಕ್ಕೆ ನಿಮಗೆ ಫೋನ್‌ ಮಾಡಿದ್ದು, ಸಂಸದೆಯಲ್ವಾ ನೀವು..

ಸಂಸದೆ ಶೋಭಾ ಕರಂದ್ಲಾಜೆ: ನೀವು ತಿಳ್ಕೊಳ್ಳಿ

ಕರೆ ಮಾಡಿದವರು: ನಿಮಗೆ ಗೊತ್ತಿಲ್ವಾ..? ಮೇಡಂ ಹೇಗೆ ಅಂತ. ನಿಮಗೆ ಇನ್ಫಾರ್ಮ್‌ ಇಲ್ವಾ ಸಂಸದೆಯಾಗಿ.

ಸಂಸದೆ ಶೋಭಾ ಕರಂದ್ಲಾಜೆ : ಇಲ್ಲ

ಕರೆ ಮಾಡಿದವರು: ನಿಮ್ಮ ಸರ್ಕಾರ ಅಲ್ವಾ ಆಡಳಿತದಲ್ಲಿರುವುದು.

ಸಂಸದೆ ಶೋಭಾ ಕರಂದ್ಲಾಜೆ : ಸರ್ಕಾರ ಯಾರಾದ್ರೇನೂ ನೋಡ್ಕೊಂಡು ತಿಳ್ಕೊಂಡು..

ಕರೆ ಮಾಡಿದವರು: ಜನಪ್ರತಿನಿಧಿ ಆದವರಿಗೆ ಗೊತ್ತಿರಬೇಕಲ್ವಾ ಮೇಡಂ…?

ತಮಗೆ ಜೀವ ಬೆದರಿಕೆ ಇದೆ ಎಂದು ಶೋಭಾ ಕರಂದ್ಲಾಜೆ ಕೊಟ್ಟ ವೀಡಿಯೋ ಹೇಳಿಕೆಯಲ್ಲಿ ಹೇಳಿದ ನಿನ್ನೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಆಡಿಯೋ ಇದೇ ಇರಬಹುದು. ಜೊತೆಗೆ ಇದು ನಿನ್ನೆ ಅಥವಾ ಮೊನ್ನೆಯ ವೀಡಿಯೋ ಸಂಭಾಷಣೆ ಆಗಿರುವ ಸಾಧ್ಯತೆಯೇ ಹೆಚ್ಚು. ಯಾಕೆಂದರೆ ಲಾಕ್‌ಡೌನ್‌ ಮೂರನೇ ಹಂತದ ಸಡಿಲಿಕೆ ಬಳಿಕ ಮೇ ೩ರಂದು ಭಾನುವಾರ ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್‌ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟನ್ನು ಬೆಳಗ್ಗೆ ೭ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದ್ದರು.

ನಿನ್ನೆಯಿಂದ ಈ ಆಡಿಯೋ ವೈರಲ್‌ ಆದ ಬಳಿಕವಷ್ಟೇ ಸಂಸದರು ಇವತ್ತು ವೀಡಿಯೋ ಸಂದೇಶ ಬಿಟ್ಟಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಮಾನ್ಯ ಸಂಸದರು ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಾಕಿರುವ ಪೋಸ್ಟ್‌ಗಳನ್ನು ಗಮನಿಸಿದರೆ ಶೋಭಾ ಕರಂದ್ಲಾಜೆ ತಮ್ಮ ಕ್ಷೇತ್ರವಾಗಿರುವ ಉಡುಪಿ-ಚಿಕ್ಕಮಗಳೂರು ಓಡಾಡಿದ್ದು ನಾಲ್ಕೈದು ದಿನ ಮಾತ್ರ. ಉಳಿದಂತೆ ಸಂಸದೆ ಬೆಂಗಳೂರಲ್ಲೇ ಇದ್ದಾರೆ.

ಸಂಸದರು ಕರ್ನಾಟಕದ ಸೈಬರ್‌ ಪೊಲೀಸರ ತನಿಖಾ ಸಾಮರ್ಥ್ಯದ ಮೇಲೂ ತಮ್ಮ ಅನುಮಾನ ವ್ಯಕ್ತಪಡಿಸಿದ್ದಾರೆ. ಎರಡು-ಎರಡೂವರೆ ವರ್ಷಗಳ ಹಿಂದೆ ತಮಗೆ ಬೆದರಿಕೆ ಹಾಕಿದ್ದು ಯಾರು ಎನ್ನುವುದನ್ನು ಪೊಲೀಸರಿಗೆ ಕಂಡು ಹಿಡಿಯಲು ಆಗಿಲ್ಲ ಎನ್ನುವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇರಳ ಮೂಲದ ಪ್ರವೀಣ್‌ ಮೇಲೆ ನಡೆದಿದ್ದ ಹಲ್ಲೆ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಶೋಭಾ ಕರಂದ್ಲಾಜೆ ಬರೆದಿರುವ ಪತ್ರ. ಈ ಪತ್ರವನ್ನು ಕರಂದ್ಲಾಜೆ ಬರೆದಿರುವುದು ಮೇ ಮೂರರಂದು.

LEAVE A REPLY

Please enter your comment!
Please enter your name here