ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಬಿ ಮಸೂದ್ ಮತ್ತು ಮೊಹಮ್ಮದ್ ಫಾಜಿಲ್ ಅವರ ಕುಟುಂಬಕ್ಕೆ ತಲಾ 30 ಲಕ್ಷ ರೂಪಾಯಿ ಪರಿಹಾರವನ್ನು ಮುಸ್ಲಿಂ ಸಂಘಟನೆಗಳು ಘೋಷಣೆ ಮಾಡಿವೆ.
ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಕೇಂದ್ರ ಸಮಿತಿಯ ಅಧ್ಯಕ್ಷ ಮಹಮ್ಮದ್ ಮಸೂದ್ ಅವರ ಮನೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತ್ರಸ್ತರ ಮನೆಗಳಿಗೆ ಭೇಟಿ ನೀಡದಿರುವ ಬಗ್ಗೆ ಈ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ಸಮಿತಿಯಿಂದ ಪರಿಹಾರವನ್ನು ನೀಡಲು ಮತ್ತು ಎರಡು ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಕಾನೂನು ನೆರವು ನೀಡಲು ಸಭೆ ನಿರ್ಧರಿಸಿದೆ.
ದ.ಕ.ಜಿಲ್ಲೆಯಲ್ಲಿ ನಡೆದ ಕೊಲೆ ಪ್ರಕರಣದ ಹಿನ್ನಲೆಯಲ್ಲಿ ದ.ಕ.ಜಿಲ್ಲಾಡಳಿತ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದ ಶಾಂತಿ ಸಭೆಯನ್ನು ಮುಸ್ಲಿಂ ಸಂಘಟನೆಗಳು ಬಹಿಷ್ಕರಿಸಿವೆ. ಹಾಗೆಯೇ, ಸಂಘ ಪರಿವಾರದ ಪ್ರಮುಖ ನಾಯಕರು ಕೂಡ ಈ ಶಾಂತಿ ಸಭೆಗೆ ಗೈರಾಗಿದ್ದರು.
10 ದಿನಗಳಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಮೂರು ಕೊಲೆಗಳ ಹಿನ್ನೆಲೆಯಲ್ಲಿ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಜಿಲ್ಲಾಧಿಕಾರಿ ಕೆವಿ ರಾಜೇಂದ್ರ ಮತ್ತು ಇತರ ಅಧಿಕಾರಿಗಳು ಶಾಂತಿ ಸಭೆ ಕರೆದಿದ್ದರು. ಶೀಘ್ರವೇ ಮತ್ತೊಂದು ಸಭೆ ಕರೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಮ್ಮದ್ ಮಸೂದ್ ಅವರ ಮನೆಯಲ್ಲಿ ನಡೆದ ತುರ್ತು ಸಭೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಕೆ. ಅಶ್ರಫ್, ಹನೀಫ್ ಹಾಜಿ ಬಂದರ್, ಸೈಯದ್ ಅಹ್ಮದ್ ಬಾಷಾ ತಂಙಳ್ ಮತ್ತಿತರರು ಉಪಸ್ಥಿತರಿದ್ದರು.
ದ.ಕ.ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ, ಮುಸ್ಲಿಂ ವರ್ತಕರ ಸಂಘ, ಮುಸ್ಲಿಂ ಜಸ್ಟೀಸ್ ಫೋರಂ ಕರ್ನಾಟಕ ಮತ್ತಿತರ ಸಂಘಟನೆಗಳು ಶಾಂತಿ ಸಭೆಯನ್ನು ಬಹಿಷ್ಕರಿಸಿದ್ದವು.