2 ಸಾವಿರ ರೂಪಾಯಿ ನೋಟು ವಾಪಸ್​ – ಕಪ್ಪು ಬಿಳಿಯಾಗಲು ಸಿಕ್ಕಿತೇ ಸುಲಭದ ಅವಕಾಶ..? – ಕೆಲವು ಪ್ರಶ್ನೆಗಳು

ಹಾಗಾದರೆ 3 ಲಕ್ಷದ 62 ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ಯಾರದ್ದು..?

ಅಕ್ಟೋಬರ್​ 1ರಿಂದ 2 ಸಾವಿರ ರೂಪಾಯಿ ಮುಖಬೆಲೆಯ ನೋಟು ನಿಷೇಧವಾಗಲಿದೆ.

ಸೆಪ್ಟೆಂಬರ್​ 30ರೊಳಗೆ ದೇಶದ ಎಲ್ಲ ಬ್ಯಾಂಕುಗಳ ಶಾಖೆಗಳು ಮತ್ತು ಆರ್​ಬಿಐನ ಶಾಖೆಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯ ಅವಕಾಶ ಇದೆ.

ಸೆಪ್ಟೆಂಬರ್​ 30ರೊಳಗೆ ಗ್ರಾಹಕರು ತಮ್ಮ ಬ್ಯಾಂಕ್​ ಖಾತೆಗಳಲ್ಲಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಠೇವಣಿ ರೂಪದಲ್ಲಿ ಜಮೆ ಮಾಡಲು ಅವಕಾಶ ನೀಡಲಾಗಿದೆ.

ಮೇ 23ರಿಂದ ಅಂದರೆ ನಾಳೆ ಮಂಗಳವಾರದಿಂದ ನೋಟುಗಳ ವಿನಿಮಯ ಮತ್ತು ಠೇವಣಿ ರೂಪದಲ್ಲಿ ಜಮೆಗೆ ಅವಕಾಶವಿದೆ.

ಸುತ್ತೋಲೆಯಲ್ಲಿ ಏನಿದೆ..?

ದೇಶದ ಅತೀ ದೊಡ್ಡ ಸರ್ಕಾರಿ ಸ್ವಾಮ್ಯದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಮೇ 20ರಂದು ತಮ್ಮ ಶಾಖೆಗಳಿಗೆ ಹೊರಡಿಸಿರುವ ಸುತ್ತೋಲೆ ಕೆಲವು ಮೂಲಭೂತ ಪ್ರಶ್ನೆಯನ್ನು ಹುಟ್ಟುಹಾಕಿದೆ.

2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯಕ್ಕೆ ಗ್ರಾಹಕರು ಯಾವುದೇ ದಾಖಲೆಯನ್ನಾಗಲೀ, ಯಾವುದೇ ಅರ್ಜಿಯನ್ನಾಗಲೀ ಬ್ಯಾಂಕ್​ ಶಾಖೆಗಳಲ್ಲಿ ಸಲ್ಲಿಸುವ ಅಗತ್ಯವಿಲ್ಲ.

ದಾಖಲೆ ಸಲ್ಲಿಸದೇ ಮತ್ತು ಫಾರಂ ಭರ್ತಿ ಮಾಡದೆಯೇ ಗರಿಷ್ಠ 20 ಸಾವಿರ ರೂಪಾಯಿ ಮೊತ್ತದ 2 ಸಾವಿರ ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬಹುದು.

ಜಮೆ ಮಾಡುವಾಗ ಮಾತ್ರ  ಕೈವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ನಿಯಮಗಳನ್ನು ಪಾಲಿಸಿ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಠೇವಣಿ ರೂಪದಲ್ಲಿ ಜಮೆ ಮಾಡಬಹುದು. ಜಮೆ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ.

ಆರ್​ಬಿಐ ಏನು ಹೇಳಿತ್ತು..?

ಮೇ 19ರಂದು ನೋಟು ವಾಪಸ್​ ಪಡೆಯುವ ಸುತ್ತೋಲೆಯಲ್ಲಿ ಆರ್​ಬಿಐ  ಮಾಹಿತಿ ಪ್ರಕಾರ ದೇಶದಲ್ಲಿ ಚಲಾವಣೆಯಲ್ಲಿರುವ 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಒಟ್ಟು ಮೊತ್ತ ಬರೋಬ್ಬರೀ 3 ಲಕ್ಷದ 62 ಸಾವಿರ ಕೋಟಿ ರೂಪಾಯಿ.

ಅಂದರೆ ಒಟ್ಟು ನಗದು ಚಲಾವಣೆಯಲ್ಲಿ ಶೇಕಡಾ 10.8ರಷ್ಟು ಪಾಲು 2 ಸಾವಿರ ರೂಪಾಯಿ ನೋಟಿನದ್ದೇ.

ಜೊತೆಗೆ 2 ಸಾವಿರ ರೂಪಾಯಿ ನೋಟನ್ನು ದಿನನಿತ್ಯದ ವ್ಯವಹಾರದಲ್ಲಿ ಬಳಸಲಾಗುತ್ತಿಲ್ಲ ಎಂದು ಆರ್​ಬಿಐ ಹೇಳಿದೆ. ಅಂದರೆ ಜನಸಾಮಾನ್ಯರ ಬಳಿ 2 ಸಾವಿರ ರೂಪಾಯಿ ನೋಟು ಇಲ್ಲ ಎಂದಾಯಿತು.

ಕೆಲವು ಪ್ರಶ್ನೆಗಳು:

1. 3 ಲಕ್ಷದ 62 ಸಾವಿರ ಕೋಟಿ ರೂಪಾಯಿ ಮೊತ್ತದ 2 ಸಾವಿರ ರೂಪಾಯಿ ನೋಟು ಯಾರ ಬಳಿ ಇತ್ತು ಎಂಬ ಮಾಹಿತಿ ಕೇಂದ್ರ ಸರ್ಕಾರಕ್ಕೆ ಹೇಗೆ ಸಿಗುತ್ತದೆ..?

2. ವಿನಿಮಯಕ್ಕೆ ದಾಖಲೆ ಸಲ್ಲಿಕೆ ಅಗತ್ಯವಿಲ್ಲ ಎಂದು ಸ್ವತಃ ಬ್ಯಾಂಕ್​ಗಳೇ ಹೇಳಿರುವಾಗ ವಿನಿಮಯ ಮೂಲಕವೇ ಕಪ್ಪು ಹಣದ ರೂಪದಲ್ಲಿರುವ 2 ಸಾವಿರ ರೂಪಾಯಿ ನೋಟನ್ನು ಬಿಳಿ ಮಾಡಿಕೊಳ್ಳಲು ಅವಕಾಶ ಕೊಟ್ಟಂತೆ ಅಲ್ಲವೇ..?

3. 2016ರಲ್ಲಿ ಮಾಡಲಾದ ನೋಟು ನಿಷೇಧದ ವೇಳೆ ನೋಟುಗಳ ವಿನಿಮಯಕ್ಕೂ ದಾಖಲೆ ಸಲ್ಲಿಸುವುದು ಅನಿವಾರ್ಯವಾಗಿತ್ತು. ಹಾಗಾದರೆ ಈಗ ಆ ನಿಯಮದಿಂದ ವಿನಾಯಿತಿ ಕೊಟ್ಟಿದ್ದು ಯಾರಿಗೆ ಲಾಭ ಮಾಡಿಕೊಡಲು..?

4. ದಾಖಲೆಗಳಿಲ್ಲದೇ ಯಾರು ಬೇಕಾದರೂ 2 ಸಾವಿರ ರೂಪಾಯಿ ನೋಟನ್ನು ವಿನಿಮಯ ಮಾಡಿಕೊಳ್ಳಬಹುದು ಎನ್ನುವುದಾದರೆ ಬೇನಾಮಿ ನೋಟು ವಿನಿಮಯಕ್ಕೆ ಸ್ವತಃ ಸರ್ಕಾರವೇ ಪ್ರೋತ್ಸಾಹ ಕೊಟ್ಟಂತೆ ಅಲ್ಲವೇ..?

5. ನೋಟು ವಿನಿಮಯಕ್ಕೆ ಮಿತಿ ಹೇರಿದ್ದರೂ ದಾಖಲೆ ಅಗತ್ಯವಿಲ್ಲ ಎಂದಿರುವ ಕಾರಣ ಠೇವಣಿ ರೂಪದಲ್ಲಿ ಯಾಕೆ ಜಮೆ ಮಾಡುತ್ತಾರೆ..?

6. ದಾಖಲೆಗಳಿಲ್ಲದೇ ನೋಟು ವಿನಿಮಯಕ್ಕೆ ಅವಕಾಶ ಕೊಟ್ಟರೇ ಕೇಂದ್ರ ಸರ್ಕಾರಕ್ಕೆ ತೆರಿಗೆ ವಂಚನೆ ಅಥವಾ ಕಪ್ಪು ಹಣ ಕೂಡಿಟ್ಟಿರುವ ಮಾಹಿತಿ ಹೇಗೆ ಸಿಗುತ್ತದೆ..?