ದೆಹಲಿ ಚುನಾವಣೆ – ಯಾವ ಸಮುದಾಯ ಆಪ್‌, ಬಿಜೆಪಿ, ಕಾಂಗ್ರೆಸ್‌ ಪರ ವೋಟ್‌ ಹಾಕಿರಬಹುದು..?

ಪ್ರಾತಿನಿಧಿಕ ಚಿತ್ರ

ದೆಹಲಿ ವಿಧಾನಸಭೆಗೆ ಮತದಾನ ಮುಗಿದಿದ್ದು ಫಲಿತಾಂಶಕ್ಕೆ ಇನ್ನು ಮೂರು ದಿನವಷ್ಟೇ ಬಾಕಿ ಇದೆ. ಈ ಮಧ್ಯೆ ಚುನಾವಣೋತ್ತರ ಸಮೀಕ್ಷೆಗಳು ಆಮ್‌ ಆದ್ಮಿ ಪಾರ್ಟಿ ಗೆಲುವಿನ ಬಗ್ಗೆ ಭವಿಷ್ಯ ನುಡಿದಿವೆ. ಅದರಲ್ಲೂ ಇಂಡಿಯಾ ಟುಡೇ-ಆಕ್ಸಿಸ್‌ ಮೈ ಇಂಡಿಯಾ ನಡೆಸಿರುವ ಸಮೀಕ್ಷೆ ಪ್ರಕಾರ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ 60ಕ್ಕೂ ಅಧಿಕ ಸ್ಥಾನಗಳನ್ನು ಗೆದ್ದು ಮಗದೊಮ್ಮೆ ಜಾದು ಮಾಡುವ ನಿರೀಕ್ಷೆ ಇದೆ.

ಪೊರಕೆಯ ಈ ಊಹಿತ ಅಬ್ಬರದ ಹಿಂದಿರುವ ಕಾರಣ ಎಲ್ಲಾ ಸಮುದಾಯದ ಮತಗಳನ್ನು ಸೆಳೆದುಕೊಂಡಿರುವುದು ಎನ್ನಲಾಗಿದೆ.

ಸಮೀಕ್ಷೆ ಪ್ರಕಾರ ಹಿಂದುಳಿದ ವರ್ಗಗಳ ಮತದಾರರಲ್ಲಿ ಶೇಕಡಾ 55ರಷ್ಟು ಮಂದಿ ಆಪ್‌ಗೂ, ಶೇಕಡಾ 38ರಷ್ಟು ಮಂದಿ ಬಿಜೆಪಿಗೂ, ಕಾಂಗ್ರೆಸ್‌ಗೆ ಕೇವಲ ಶೇಕಡಾ 5ರಷ್ಟು ಮತಹಾಕಿದ್ದಾರೆ ಎಂದು ಊಹಿಸಲಾಗಿದೆ.

ಬಾಲ್ಮಿಕಿ ಸಮುದಾಯದಲ್ಲಿ ಅತ್ಯಧಿಕ ಅಂದರೆ ಶೇಕಡಾ 67ರಷ್ಟು ಮಂದಿ ಆಪ್‌ನತ್ತಲ್ಲೂ, ಶೇಕಡಾ 18ರಷ್ಟು ಜನ ಬಿಜೆಪಿಗೂ ಮತ್ತು ಶೇಕಡಾ 9ರಷ್ಟು ಮಂದಿ ಹಸ್ತ ಪಾಳಯದತ್ತ ವಾಲಿದ್ದಾರೆ.

ಪರಿಶಿಷ್ಟ ಜಾತಿ ಮತದಾರರ ಪೈಕಿಯೂ ಆಮ್‌ ಆದ್ಮಿ ಪಾರ್ಟಿ ಅತ್ಯಂತ ಜನಪ್ರಿಯವಾಗಿದೆ ಎಂದು ಸಮೀಕ್ಷೆ ಹೇಳಿದೆ. 65ರಷ್ಟು ಮಂದಿ ಜಾಡೂ ಹಿಡಿದರೆ ಶೇಕಡಾ 24ರಷ್ಟು ಮಂದಿ ಕಮಲ ಮುಡಿದಿದ್ದಾರೆ. ಶೇಕಡಾ 5ರಷ್ಟು ಮತದಾರರು ಮಾತ್ರ ಕಾಂಗ್ರೆಸ್‌ನತ್ತ ಕಣ್ಣೆಟ್ಟಿದ್ದಾರೆ.

ಮುಸ್ಲಿಂ ಮತದಾರರ ಪೈಕಿಯೂ ಆಮ್‌ ಆದ್ಮಿ ಪಾರ್ಟಿಯೂ ಜನಪ್ರಿಯ ಆಗಿದೆ. ಪೌರತ್ವ ಕಾಯ್ದೆ ಪರ ಕೇಜ್ರಿವಾಲ್‌ ವಾದಿಸಿದ್ದರೂ ಚುನಾವಣಾ ಪ್ರಣಾಳಿಕೆಯಲ್ಲಿ ಎನ್‌ಆರ್‌ಸಿ ರದ್ದುಗೊಳಿಸುವ ವಾಗ್ದಾನವನ್ನೂ ಕಾಂಗ್ರೆಸ್‌ ಮಾಡಿದ್ದರೂ ಮುಸ್ಲಿಂ ಮತದಾರರು ಕೇಜ್ರಿಗೆ ಜೈ ಎಂದಿದ್ದಾರಂತೆ. ಶೇಕಡಾ 69ರಷ್ಟು ಮಂದಿ ಆಪ್‌ಗೂ, ಶೇಕಡಾ 9ರಷ್ಟು ಮಂದಿ ಬಿಜೆಪಿಗೂ, ಶೇಕಡಾ 15ರಷ್ಟು ಜನ ಕಾಂಗ್ರೆಸ್‌ಗೆ ಜೈ ಎಂದಿದ್ದಾರಂತೆ.

ಇನ್ನು ಉಳಿದ ಸಮುದಾಯಗಳ ಪೈಕಿ ಆಮ್‌ ಆದ್ಮಿ ಪಾರ್ಟಿ ಕಡೆಗೆ ಶೇಕಡಾ 55ರಷ್ಟು ಮತಗಳು, ಬಿಜೆಪಿಯತ್ತ 36 ಮತ್ತು ಕಾಂಗ್ರೆಸ್‌ನತ್ತ ಕೇವಲ ಶೇಕಡಾ 4ರಷ್ಟು ಮತಗಳು ಬಿದ್ದಿರುವ ನಿರೀಕ್ಷೆ ಇದೆ ಎಂದು ಇಂಡಿಯಾ ಟುಡೇ ಮತ್ತು ಆಕ್ಸಿಸ್‌ ಮೈ ಇಂಡಿಯಾದ ಸಮೀಕ್ಷೆ ಹೇಳಿದೆ.

LEAVE A REPLY

Please enter your comment!
Please enter your name here