ಬೆಂಗಳೂರಲ್ಲಿ ಸಿಎಎ ಸೈಡ್ ಎಫೆಕ್ಟ್ ಶುರು..!

ಬೆಂಗಳೂರಲ್ಲಿ ಸಿಎಎ ಸೈಡ್ ಎಫೆಕ್ಟ್ ಶುರುವಾಗಿದೆ. ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ಆರೋಪದ ಮೇಲೆ ಯಾವುದೇ ದಾಖಲೆ ಪರಿಶೀಲಿಸದೇ ಸುಮಾರು ನೂರಕ್ಕೂ ಹೆಚ್ಚು ಗುಡಿಸಲು, ಶೆಡ್‍ಗಳನ್ನು ಕಳೆದ ಎರಡು ದಿನಗಳಲ್ಲಿ ತೆರವುಗೊಳಿಸಿದ ಘಟನೆ ಮಾರತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಬೆಳ್ಳಂದೂರು ಸಮೀಪದ ಕರಿಯಮ್ಮನ ಅಗ್ರಹಾರದಲ್ಲಿ ನಡೆದಿದೆ.

ನಮ್ಮ ಹತ್ತಿರ ಇರುವ ದಾಖಲೆಗಳನ್ನು ಪರಿಶೀಲಿಸಿ.. ನಾವು ಉತ್ತರ ಪ್ರದೇಶದಿಂದ ಬಂದಿದ್ದೇವೆ. ಅಸ್ಸಾಂನಿಂದ ಬಂದಿದ್ದೇವೆ. ಆರು ತಿಂಗಳ ಹಿಂದೆ ನೆರೆ ಹಾವಳಿಗೆ ತುತ್ತಾದ ಉತ್ತರ ಕರ್ನಾಟಕದಿಂದ ಇಲ್ಲಿ ಬಂದು ನೆಲೆಸಿ, ಕೂಲಿ ನಾಲಿ ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ನಮ್ಮಲ್ಲಿ ಆಧಾರ್ ಕಾರ್ಡ್ ಇದೆ. ರೇಷನ್ ಕಾರ್ಡ್ ಇದೆ, ವೋಟರ್ ಐಡಿ ಇದೆ. ನಾವು ಭಾರತೀಯರು.. ದಯವಿಟ್ಟು ಪರಿಶೀಲಿಸಿ ಎಂದು ಗೋಳಿಡುತ್ತಾ ಕೇಳಿಕೊಳ್ಳುತ್ತಿದ್ದರು ಯಾರ ಮನವೂ ಕರಗಲಿಲ್ಲ. ನೋಡನೋಡುತ್ತಿದ್ದಂತೆ ನೂರಕ್ಕು ಹೆಚ್ಚು ಶೆಡ್‍ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿಯೇಬಿಟ್ಟರು. ಇದೀಗ ನೂರಾರು ಭಾರತೀಯ ಕುಟುಂಬಗಳು ಬೀದಿಗೆ ಬಿದ್ದಿವೆ.

ದಾಖಲೆ ಪರಿಶೀಲಿಸಿ ತೆರವು ಮಾಡಿದ್ದರೆ ಯಾರು ಬೇಡ ಎನ್ನುತ್ತಿರಲಿಲ್ಲ. ಆದರೆ, ಯಾವುದೇ ಮುನ್ಸೂಚನೆ ಕೊಡಲಿಲ್ಲ. ನೊಟೀಸ್ ಸರ್ವ್ ಮಾಡಲಿಲ್ಲ. ಪೊಲೀಸರು ಬಂದ್ರು. ಜೆಸಿಬಿಗಳನ್ನು ತರಿಸಿದ್ರು. ಶೆಡ್‍ನಲ್ಲಿದ್ದ ಸರಕು ಸರಂಜಾಮು ತೆಗೆದುಕೊಳ್ಳಲು ಸಹ ಬಿಡಲಿಲ್ಲ. ಜೆಸಿಬಿಗಳ ಮೂಲಕ ನಮ್ಮ ಬದುಕನ್ನು ನಾಶ ಮಾಡಿದ್ರು ಅಂತಾ ಗೋಳಿಡುತ್ತಾರೆ ಇಲ್ಲಿ ನೆಲೆಸಿದ್ದ ಮಂದಿ

ಅಂದ ಹಾಗೆ, ಇಲ್ಲಿ ನೆಲೆಸಿದ್ದವರ ಪೈಕಿ ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದವರು ಇರಬಹುದು. ಆದರೆ, ಅವರ ಜೊತೆ ಜೊತೆಗೆ ಬಡ ಭಾರತೀಯರು ಇದ್ದರು. ಯಾವುದೇ ದಾಖಲೆ ಪರಿಶೀಲಿಸದೇ ಹೀಗೆ ಬಡವರ ಬದುಕು ನಾಶ ಪಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ. ಪೊಲೀಸರರು ಖುದ್ದಾಗಿ ನಿಂತು ಮಾಡಿಸಿದ ತೆರವು ಕಾರ್ಯಾಚರಣೆಯೇ ಅಕ್ರಮ.. ತೆರವು ಕಾರ್ಯಾಚರಣೆಗೆ ಅನುಮತಿ ನೀಡಿದ್ದು ಯಾರು..? ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಇಲ್ಲಿ ನೆಲೆಸಿದ್ದವರು ಮಾಡೋದು ಹೌಸ್ ಕೀಪಿಂಗ್, ಕ್ಲೀನಿಂಗ್, ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಗಳು. ದಿನವು ಬೆವರು ಸುರಿಸಿದರೇನೆ.. ಅವತ್ತಿನ ಊಟ.. ಇಲ್ಲ ಎಂದರೇ ಹಸಿವೇ ಜೀವನ. ಈಗ ಬದುಕೇ ನಾಶ ಆಗಿದೆ.

LEAVE A REPLY

Please enter your comment!
Please enter your name here