ಡಿ ಕೆ ಶಿವಕುಮಾರ್. ದೊಡ್ಡ ಆಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಹಿಡಿಯಲು ಹೊರಟಿರುವ ಕಾಂಗ್ರೆಸ್ ಕಟ್ಟಾಳು. ಡಿಕೆಶಿಗೆ ಅನ್ವರ್ಥನಾಮವೇ ಕನಕಪುರ ಬಂಡೆ.
೫೭ ವರ್ಷದ ಕನಕಪುರ ಕ್ಷೇತ್ರದ ಈ ಶಾಸಕ, ಮಾಜಿ ಸಚಿವನಿಗೆ ಬಂಡೆ ಎಂಬ ಬಿರುದು-ಬಾವಲಿ ಸುಖಾಸುಮ್ಮನೆ ಅಂಟಿಕೊಂಡಿದ್ದಲ್ಲ. ಯಾರೋ ಧಮಾರ್ಥ ಕೊಟ್ಟಿದ್ದೂ ಅಲ್ಲ. ಗೌಡ ಸಮುದಾಯದ ಪ್ರಶ್ನಾತೀತ ನಾಯಕರೆಂದೇ ಕರೆಸಿಕೊಳ್ಳುವ ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಸುಪುತ್ರ ಕುಮಾರಸ್ವಾಮಿಯನ್ನು ರಾಜಕೀಯವಾಗಿ ರಾಮನಗರದಲ್ಲಿ ಎದುರು ಹಾಕಿಕೊಂಡೇ ಬೆಳೆದು ಬಂದ ಡಿಕೆಶಿ ಬಂಡೆ ಆಗಿದ್ದು ಇತ್ತೀಚಿನ ದಿನಗಳಲ್ಲಿ, ಅದೂ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರೆಂಬ ಇಬ್ಬರೂ ರಾಜಕೀಯ ಚಾಣಾಕ್ಯ ಜೋಡಿಗಳ ಎದುರು ಎದೆಯೆಬ್ಬಿಸಿ ನಿಂತಾಗ.
ಕರ್ನಾಟಕದ ರಾಜಕೀಯಕ್ಕಷ್ಟೇ ಸೀಮಿತರಾಗಿದ್ದ ಡಿಕೆಶಿ ರಾಷ್ಟ್ರ ರಾಜಕಾರಣದ ಮುನ್ನೆಲೆಗೆ ಬಂದಿದ್ದು 2017ರಲ್ಲಿ. ಗುಜರಾತ್ನ ಕಾಂಗ್ರೆಸ್ ಶಾಸಕರಿಗೆ ಆಶ್ರಯ ಕೊಟ್ಟ ಗಳಿಗೆ ಬಂಡೆಯ ಬದುಕನ್ನೇ ಬದಲಿಸಿತು. ಮೋದಿ-ಶಾ ಎದುರು ಯಾರೂ ಮಾತಾಡಲು ಸಾಧ್ಯವೇ ಇಲ್ಲ, ಅವರಿಬ್ಬರನ್ನು ಎದುರು ಹಾಕಿಕೊಂಡು ರಾಜಕೀಯ ಮಾಡುವುದು ಅಸಾಧ್ಯದ ಮಾತು ಎನ್ನುತ್ತಿದ್ದ ಕಾಲದಲ್ಲಿ ತನ್ನ ತಾಕತ್ತನ್ನು ಸಾಣೆಗೆ ಹಚ್ಚಿ ತಮ್ಮ ದೆಹಲಿಯ ನಾಯಕರು ಮಾತ್ರವಲ್ಲದೇ ಉಳಿದಿವರಿಗೂ ತೋರಿಸಿಕೊಟ್ಟಿದ್ದರು.
ಹಾಗೆ ನೋಡಿದರೆ ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆಯಲ್ಲಿನ ಸೋನಿಯಾ ಗಾಂಧಿ ಪರಮಾಪ್ತ ಅಹ್ಮದ್ ಪಟೇಲ್ ರೋಚಕ ಗೆಲುವು ಅದು ಪಕ್ಷದ ಗೆಲುವಲ್ಲ, ಅದು ಮೋದಿ-ಶಾ ಜೋಡಿಯ ವಿರುದ್ಧ ಡಿಕೆಶಿಯ ಜಯಘೋಷ. ಆ ಚುನಾವಣೆಗೂ ಮೊದಲೇ ಗುಜರಾತ್ನ ಕಾಂಗ್ರೆಸ್ ಶಾಸಕರಿಗೆ ಆಮಿಷಗಳ ಮೇಲೆ ಆಮಿಷಗಳನ್ನೊಡ್ಡಿದ್ದ ಬಿಜೆಪಿ ಹಸ್ತ ಹಾದಿಯನ್ನೇ ದುಸ್ತರವನ್ನಾಗಿಸಿತ್ತು. ಒಬ್ಬೊಬ್ಬರೇ ಕೈ ಶಾಸಕರು ರಾಜೀನಾಮೆ ಕೊಡುತ್ತಾ ಬಂದರು. ಚುನಾವಣೆ ಹೊತ್ತಿಗೆ ಕೈ ಪಾಳಯ ಖಾಲಿ ಆಗುವ ಭೀತಿಯಲ್ಲಿತ್ತು. ಆಗ ರಾಜಕೀಯ ತಂತ್ರಗಾರಿಕೆ ಭಾಗವಾಗಿ ಗುಜರಾತ್ನ ಶಾಸಕರನ್ನು ತುಂಬಿಸಿಕೊಂಡು ಕರೆದುಕೊಂಡು ಬಂದಿದ್ದು ಬೆಂಗಳೂರು ಹೊರವಲಯ ಬಿಡದಿಯಲ್ಲಿರುವ ಈಗಲ್ಟನ್ ರೆಸಾರ್ಟ್ಗೆ.
ಗುಜರಾತ್ ಶಾಸಕರ ಕಾವಲಿಗೆ ನಿಂತಿದ್ದ ಬಂಡೆ ಮೇಲೆ ಬಂಡೆಯೇ ಬಂದೆರಗಿ ಆಗಿತ್ತು. ಬೆಳಗಾಗುತ್ತಿದ್ದಂತೆ ಆದಾಯ ತೆರಿಗೆ ಅಧಿಕಾರಿಗಳು ಈಗಲ್ಟನ್ ರೆಸಾರ್ಟ್ನಲ್ಲಿ ಡಿಕೆಶಿ ಇದ್ದ ಕೋಣೆಯಿಂದ ಹಿಡಿದು ಬೆಂಗಳೂರು, ಕನಕಕಪುರದಲ್ಲಿರುವ ಮನೆಗಳು, ದೆಹಲಿಯಲ್ಲಿರುವ ತನ್ನ ಮತ್ತು ಸ್ನೇಹಿತರ ಫ್ಲ್ಯಾಟ್ಗಳು, ಮೈಸೂರಲ್ಲಿರುವ ಮಾವನ ಮನೆ ಹೀಗೆ ಬಂಡೆ ಜೊತೆಗೆ ನಂಟಿರುವ ಕಡೆಗಳಲ್ಲಿ ಪಾತಾಳಕ್ಕಿಳಿದು ತಲಾಶ್ ನಡೆಸಿದರು. ರೆಸಾರ್ಟ್ನಲ್ಲಿ ಚೀಟಿ ಹರಿದು ಹಾಕುತ್ತಿದ್ದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು ಡಿಕೆಶಿ.
ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ದೆಹಲಿಯ ಫ್ಲ್ಯಾಟ್ಗಳಲ್ಲಿ ಸಿಕ್ಕ 8.9 ಕೋಟಿ ರೂಪಾಯಿ ಡಿಕೆಶಿಗೆ ತಿಹಾರ್ ಜೈಲಿನ ದರ್ಶನ ಮಾಡಿಸಿತು. ದೆಹಲಿಯ ತುಘಲಕ್ ಲೇನ್ ಪೊಲೀಸ್ ಸ್ಟೇಷನ್ನಲ್ಲಿ ರಾತ್ರಿಗಳನ್ನೂ ಕಳೆದ ಡಿಕೆ ಮೊದಲ ಬಾರಿಗೆ ಆಗಿದ್ದು ಬಂಧೀಖಾನೆ ಸಚಿವರು ಎನ್ನುವುದನ್ನು ಮರೆಯುವಂತಿಲ್ಲ. ಕಾರಾಗೃಹದಿಂದ ಹೊರಗೆ ಕಾಲಿಟ್ಟ ಡಿಕೆ ಅಷ್ಟೊತ್ತಿಗಾಗಲೇ ಕರ್ನಾಟಕ ರಾಜಕೀಯದಲ್ಲಿ ತಮ್ಮ ಪ್ರಭಾವಳಿಯನ್ನು ಮತ್ತಷ್ಟು ಉದ್ದೀಪನಗೊಳಿಸಿಕೊಂಡಿದ್ದರು.
ಬದ್ಧವೈರಿ ಆಗಿದ್ದ ದೇವೇಗೌಡರ ಪುತ್ರನೊಂದಿಗೆ ಜೋಡೆತ್ತಾಗಿ ಸಮ್ಮಿಶ್ರ ಸರ್ಕಾರದಲ್ಲಿ ಹೆಗಲು ಕೊಟ್ಟ ಡಿಕೆಶಿ ಪರ್ಯಾಯ ಒಕ್ಕಲಿಗ ನಾಯಕನಾಗಿಯೂ ಹೊರಹೊಮ್ಮಿದರು. ಅತಂತ್ರ ವಿಧಾನಸಭೆಯಿಂದ ಹುಟ್ಟಿಕೊಂಡ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಆರಂಭದಲ್ಲಿ ಭದ್ರವಾಗಿದ್ದು ಮತ್ತು 14 ತಿಂಗಳ ಮಟ್ಟಿಗಾದರೂ ಉಸಿರಾಡಿಕೊಂಡಿದ್ದು ಇದೇ ಡಿಕೆಶಿಯಿಂದ ಎಂದರೆ ತಪ್ಪಲ್ಲ. ಯಡಿಯೂರಪ್ಪ ರಾಜೀನಾಮೆ ಕೊಟ್ಟು ಕುಮಾರಸ್ವಾಮಿ ಸಿಎಂ ಪ್ರಮಾಣವಚನ ಸ್ವೀಕರಿಸಿ ವಿಶ್ವಾಸಮತ ಸಾಬೀತುಪಡಿಸುವ ವೇಳೆ ಕೈಗೆ ಸಿಗದೇ ಹೋಗಿದ್ದ ಆನಂದ್ ಸಿಂಗ್, ಪ್ರತಾಪ್ಗೌಡ ಪಾಟೀಲ್ರಂತಹ ಶಾಸಕರನ್ನು ಕರೆತಂದು ಸರ್ಕಾರವನ್ನು ಉಳಿಸಿಕೊಂಡರು.
ಬಳಿಕ ಮುಂಬೈನ ಮಹಾಡ್ರಾಮಾ. ರಾಜೀನಾಮೆ ಕೊಟ್ಟು ಮಹಾರಾಷ್ಟ್ರದ ರಾಜಧಾನಿಯ ಐಷಾರಾಮಿ ಹೋಟೆಲ್ನಲ್ಲಿ ಕುಳಿತಿದ್ದ ಶಾಸಕರನ್ನು ಕರೆತರಲು ಡಿಕೆಶಿ ಹೋಟೆಲ್ ಎದುರು ಧರಣಿ ಮಾಡಿದರು. ಮಳೆಯನ್ನೂ ಲೆಕ್ಕಿಸಲಿಲ್ಲ, ಪೊಲೀಸರಿಗೂ ಕ್ಯಾರೇ ಎನ್ನಲಿಲ್ಲ. ಈ ಮೂಲಕ ಒಕ್ಕಲಿಗ ಸಮುದಾಯ ಸಿಎಂಯೊಬ್ಬರ ರಾಜಕೀಯ ಹಿತ ಕಾಯ್ದ ಹೆಗ್ಗಳಿಕೆಯ ಜೊತೆ ಆಯಿತು.
ಡಿಕೆಶಿ ಉಪ ಚುನಾವಣೆಯ ಚಾಣಾಕ್ಯ. ಬಂಡೆ ಉಸ್ತುವಾರಿ ವಹಿಸಿದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋತ ಉದಾಹರಣೆಗಳೇ ಇಲ್ಲ. ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ರೆಡ್ಡಿಗಳ ಕೋಟೆಯಲ್ಲಿ ಉಗ್ರಪ್ಪ ಗೆದ್ದಿದ್ದರ ಹಿಂದೆ ಡಿಕೆ ಪಾತ್ರವೂ ಇದೆ.
2017 ರ ಅಂತ್ಯದ ವೇಳೆಗೆ ಗುಜರಾತ್ ರಾಜಕೀಯ ಮುನ್ನುಡಿ ಬರೆದು ಆಮೇಲೆ ಘಟಿಸಿದ ಘಟನಾವಳಿಗಳಲ್ಲಿ ಡಿಕೆಶಿ ತೋರಿದ ಭಂಡತನ ಕಾಂಗ್ರೆಸ್ಗೆ ಇಂಥಹ ನಾಯಕನೊಬ್ಬನ ಅನಿವಾರ್ಯತೆ ತುರ್ತಾಗಿದೆ ಎಂಬುದನ್ನು ಸಾರಿ ಹೇಳುತ್ತಿತ್ತು. ಕರ್ನಾಟಕವೂ ಸೇರಿದಂತೆ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಪಕ್ಷಗಳ ದೊಡ್ಡ ದೊಡ್ಡ ನಾಯಕರೆಲ್ಲ ಭ್ರಷ್ಟಾಚಾರದ ಆರೋಪಗಳನ್ನು ಹೊತ್ತು ಬಿಜೆಪಿಗೆ ವಲಸೆ ಹೋಗಿ ಬಚಾವ್ ಆಗುತ್ತಿದ್ದಾರೆ ಎಂಬ ವಿಶ್ಲೇಷಣೆಗಳ ಹೊತ್ತಲ್ಲೂ ಡಿಕೆಶಿ ತಮ್ಮ ಪಕ್ಷದ ಬದ್ಧತೆಯನ್ನೇ ಎದೆಗಂಟಿಸಿಕೊಂಡಿದ್ದರು. ಬಿಜೆಪಿಯಿಂದ ನನಗೂ ಆಫರ್ ಬಂದಿತ್ತು ಎಂದು ಡಿಕೆಶಿ ಹೇಳಿದ್ದು ಉಂಟು, ಆ ಮಾತಲ್ಲಿ ಸುಳ್ಳೂ ಇಲ್ಲ.
ಸಂಕಷ್ಟದಲ್ಲಿ ಸಂದರ್ಭದಲ್ಲಿ ಪಕ್ಷದ ತಲೆಕಾಯ್ದ ಡಿ ಕೆ ಶಿವಕುಮಾರ್ ಅವರ ಹೆಬ್ಬಯಕೆಯಂತೆ ಕೆಪಿಸಿಸಿ ಸಾರಥ್ಯ ಸಿಕ್ಕಿದೆ. ಇನ್ನು ಮೂರು ವರ್ಷ ಡಿಕೆಶಿಯ ಹುಕುಂನಂತೆ ಪಕ್ಷ ನಡೆಯಬೇಕಾಗುತ್ತದೆ. 2023 ರ ವೇಳೆ ನಡೆಯುವ ಚುನಾವಣೆಗೆ ಪಕ್ಷವನ್ನು ಹುರಿಗೊಳಿಸುವುದು ಡಿಕೆಶಿಯ ಸವಾಲು.