ಉತ್ತರ ಪ್ರದೇಶ ಚುನಾವಣೆ ಕೇವಲ ಒಂದು ತಿಂಗಳು ಇರುವ ಹೊತ್ತಲ್ಲೇ, ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ಸಚಿವರು ಹಾಗೂ ಶಾಸಕರು ರಾಜೀನಾಮೆ ನೀಡಿ ಬಿಜೆಪಿಯಿಂದ ಹೊರಬಂದಿದ್ದರು. ಇದೀಗ ಆ ಇಬ್ಬರು ಹಿಂದುಳಿದ ವರ್ಗಗಳ ಸಚಿವರು ಹಾಗೂ ಶಾಸಕರು ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ತೊರೆದು ಹೊರಬಂದಿದ್ದ ಉತ್ತರ ಪ್ರದೇಶದ ಪ್ರಮುಖ ಹಿಂದುಳಿದ ನಾಯಕರುಗಳಾದ ಸ್ವಾಮಿಪ್ರಸಾದ್ ಮೌರ್ಯ ಹಾಗೂ ಧರಮ್ ಸಿಂಗ್ ಸೈನಿಯವರೊಂದಿಗೆ ಬಿಜೆಪಿಯ ಶಾಸಕರುಗಳಾದ ರೋಷನ್ಲಾಲ್ ವರ್ಮಾ, ಬ್ರಿಜೇಶ್ ಪ್ರಜಾಪತಿ, ಮುಖೇಶ್ ವರ್ಮಾ, ವಿನಯ್ ಶಾಕ್ಯ ಹಾಗೂ ಭಗವತಿ ಶಾಕ್ಯರ್ ಹಾಗೂ ಅಪ್ನಾದಲ್ ಪಕ್ಷದ ಶಾಸಕ ಚೌದ್ರಿ ಅಮರ್ ಸಿಂಗ್ ಇಂದು ಸಮಾಜವಾದಿ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಮಾಜವಾಧಿ ಪಕ್ಷದ ಪ್ರಮುಖ ನಾಯಕ ಅಖಿಲೇಶ್ ಯಾದವ್ ಅವರು ಇನ್ನೂ ಶುಕ್ರವಾರದ ವರೆಗೆ ಕಾಯಿರಿ ಎನ್ನುವ ಸಂದೇಶವನ್ನೂ ನೀಡಿದ್ದಾರೆ. ಆ ಮೂಲಕ ಮತ್ತಷ್ಟು ಜನ ಸಚಿವರು ಹಾಗೂ ಶಾಸಕರು ಬಿಜೆಪಿ ತೊರೆದ ಸಮಾಜವಾದಿ ಪಕ್ಷ ಸೇರ್ಪಡೆಯಾಗುತ್ತಾರೆ ಎನ್ನುವ ಸುಳಿವು ನೀಡಿದ್ದಾರೆ.
ಚುನಾವಣಾ ಆಯೋಗವು ಪಂಚ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಆದರೆ, ಇಂದು ಸಮಾಜವಾಧಿ ಪಕ್ಷವು ಅಪಾರ ಜನರನ್ನು ಸೇರಿಸಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿರುವವರನ್ನು ಪರಿಚಯ ಕಾರ್ಯಕ್ರಮವನ್ನು ಮಾಡಿದರು.