ಅಮಿತ್ ಷಾ ಭೇಟಿಗೆ ಸಮಯ ಸಿಕ್ಕಿತ್ತಂತೆ.. ಮುಖ್ಯಮಂತ್ರಿಯೇ ಹೋಗಲಿಲ್ಲವಂತೆ..!

ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ಪಡೆಯಲಾಗದೇ ಮುಖ್ಯಮಂತ್ರಿ ಯಡಿಯೂರಪ್ಪ ಎಷ್ಟು ಪರಿತಪಿಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಮುಖ್ಯಮಂತ್ರಿ ಯಡಿಯೂರಪ್ಪಗೆ ಕಳೆದ ಒಂದು ತಿಂಗಳಿಂದ ಕೇಂದ್ರ ಗೃಹ ಸಚಿವರೂ ಆದ ಬೊಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಪಾಯಂಟ್‍ಮೆಂಟ್ ಕೂಡ ಕೊಡದೇ ಸತಾಯಿಸುತ್ತಿದ್ದಾರೆ ಎನ್ನುವುದು ರಾಜ್ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ.ಆದರೆ, ಇದು ಮಾಧ್ಯಮಗಳಲ್ಲಿ ಪ್ರಕಟವಾದ ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಆ ರೀತಿ ನಡೆದಿಲ್ಲ ಎಂದು ಹೇಳಿ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಇವತ್ತು ಅಮಿತ್ ಷಾ ಭೇಟಿಗೆ ನನಗೆ ಅಪಾಯಂಟ್‍ಮೆಂಟ್ ಕೊಟ್ಟಿದ್ದರು. ಆದರೆ, ರಾಯಚೂರಿನಲ್ಲಿ ಹಾಲುಮತ ಸಂಸ್ಕøತಿ ಕಾರ್ಯಕ್ರಮಕ್ಕೆ ಹೋಗಲೇಬೇಕಿದೆ. ಹೀಗಾಗಿ ನಾನೇ ಅಮಿತ್ ಷಾ ಭೇಟಿಯನ್ನು ರದ್ದು ಮಾಡಿದೆ ಎಮದು ಹೇಳಿದ್ದಾರೆ. ನಾಳೆ ಮತ್ತೆ ಅಮಿತ್ ಷಾ ಏನಾದರೂ ಸಮಯ ಕೊಟ್ಟಲ್ಲಿ ದೆಹಲಿಗೆ ಹೋಗುತ್ತೇನೆ ಎಂದಿದ್ದಾರೆ. ಇಲ್ಲದಿದ್ದರೆ, ಜನವರಿ 18ರಂದು ರಾಜ್ಯಕ್ಕೆ ಬಂದಾಗ ಅಮಿತ್ ಷಾರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುತ್ತೇನೆ. ದೆಹಲಿ ಚುನಾವಣೆ ನಂತರ ಸಂಪುಟ ವಿಸ್ತರಣೆ ಸುಳ್ಳು. ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲಾ ಬರೀ ಊಹಾಪೋಹ ಎಂದು ಹೇಳಿದ್ದಾರೆ.

ವಾಸ್ತವಾಂಶ ಏನು..?

ಕರ್ನಾಟಕದಲ್ಲಿ ಸಂಪುಟ ವಿಸ್ತರಣೆ ವಿಚಾರ ಈಗ ಅಮಿತ್ ಷಾಗೆ ಮುಖ್ಯವಾಗಿಲ್ಲ. ಫೆಬ್ರವರಿ 8ರಂದು ನಡೆಯಲಿರುವ ದೆಹಲಿ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಅಮಿತ್ ಷಾ ಅವರು ಫುಲ್ ಬ್ಯುಸಿ ಇದ್ದಾರೆ. ನಿನ್ನೆ ರಾತ್ರಿ 8 ಗಂಟೆಯಿಂದ ಇಂದು ನಸುಕಿನ ಜಾವ 3 ಗಂಟೆಯವರೆಗೆ ಕೋರ್ ಕಮಿಟಿ ಜೊತೆ ಅಮಿತ್ ಷಾ ಬರೋಬ್ಬರಿ 7 ಗಂಟೆಗಳ ಮ್ಯಾರಥಾನ್ ಮೀಟಿಂಗ್ ಮಾಡಿದ್ದಾರೆ. ಇವತ್ತು ಕೂಡ ದೆಹಲಿ ಚುನಾವಣೆ ಸಂಬಂಧ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿಗೆ ಅಮಿತ್ ಷಾ ಅಪಾಯಂಟ್‍ಮೆಂಟ್ ನೀಡಿಲ್ಲ ಎನ್ನುವುದು ದೆಹಲಿಯಿಂದ ಕೇಳಿಬರುತ್ತಿರುವ ಮಾಹಿತಿ.

ಜನವರಿ 18ರಂದು ಅಮಿತ್ ಷಾ – ಯಡಿಯೂರಪ್ಪ ಭೇಟಿ..!

ಸಿಎಎ ಬೆಂಬಲಿಸಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜ್ಯಕ್ಕೆ ಬರಲಿದ್ದಾರೆ. ಆ ದಿನವೇ ಅಮಿತ್ ಷಾ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ, ಅಮಿತ್ ಷಾ ಅನುಮತಿ ಕೊಟ್ಟಲ್ಲಿ ಜನವರಿ 19ರಂದು ಸಂಪುಟ ವಿಸ್ತರಣೆ ಮಾಡಿ, ಜನವರಿ 20ರಂದು ವಿದೇಶಕ್ಕೆ ಹಾರಲು ಮುಖ್ಯಮಂತ್ರಿಗಳು ಸಜ್ಜಾಗಿದ್ದಾರೆ. ಆದರೆ, ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಅಮಿತ್ ಷಾ ಸಮ್ಮತಿ ಸೂಚಿಸುವ ಸಂಭವ ಕಡಿಮೆ ಇದೆ ಎಂಬ ಮಾತು ಕೇಳಿಬಂದಿದೆ.

LEAVE A REPLY

Please enter your comment!
Please enter your name here