ಕಾವೇರಿ ಕರೆಯುತ್ತಿದೆ ಸದ್ಗುರು ಫೌಂಡೇಶನ್ ಗೆ ಹೈಕೋರ್ಟ್‌ ಖಡಕ್ ಪ್ರಶ್ನೆಗಳ ಸುರಿಮಳೆ..!

ಕಾವೇರಿ ನದಿ ಸಂರಕ್ಷಣೆಯ ಹೆಸರಲ್ಲಿ ಕಾವೇರಿ ಕರೆಯುತ್ತಿದೆ ಎಂಬ ಘೋಷಣೆಯಡಿ ನಿಧಿ ಸಂಗ್ರಹ ಮಾಡಿದ್ದ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವಗೆ ಇವತ್ತು ಹೈಕೋರ್ಟ್ ಚಾಟಿ ಬೀಸಿದೆ.

ಕಾವೇರಿ ಕರೆಯುತ್ತಿದೆ ಯೋಜನೆಯಡಿ ಸಾರ್ವಜನಿಕರಿಂದ ಸಂಗ್ರಹಿಸಲಾಗಿರುವ ನಿಧಿಯ ಮೊತ್ತದ ಬಗ್ಗೆ ಬಹಿರಂಗಪಡಿಸುವಂತೆ ಮತ್ತು ನಿಧಿಯನ್ನು ಹೇಗೆ ಸಂಗ್ರಹಿಸಲಾಯಿತು ಎಂಬ ಬಗ್ಗೆ ವಿವರಗಳನ್ನು ಸಲ್ಲಿಸುವಂತೆ

ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಭಯ್ ಓಕಾ ಮತ್ತು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಆದೇಶಿಸಿದೆ.

ವಕೀಲ ಅಮನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ವೇಳೆ ಹೈ ಕೋರ್ಟ್ ಸದ್ಗುರು ನೇತೃತ್ವದ ಇಶಾ ಫೌಂಡೇಶನ್ ವಿರುದ್ಧ ಆಯ್ತು.

ನೀವು ಆಧ್ಯಾತ್ಮಿಕ ಸಂಸ್ಥೆಯೆಂಬ ಮಾತ್ರಕ್ಕೆ ಕಾನೂನಿನ ವ್ಯಾಪ್ತಿಗೆ ಒಳ ಪಡಲ್ಲ ಎಂಬ ಭಾವನೆಯನ್ನು ಇಟ್ಟುಕೊಳ್ಳಬೇಡಿ. ಜಾಗೃತಿಯನ್ನು ಮೂಡಿಸುವುದು ತಪ್ಪಲ್ಲ ಆದರೆ ಬಲವಂತವಾಗಿ ನಿಧಿಯನ್ನು ಸಂಗ್ರಹಿಸುವುದು ತಪ್ಪು

ಎಂದು ಪೀಠ ಆಯ್ತು.

ನೀವು ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ನಿಧಿಯನ್ನು ಪಡೆಯಲು ಹಕ್ಕುದಾರರ ಅಲ್ಲ. ಯಾವ ಅಧಿಕಾರದಡಿ ನೀವು ರೈತರಿಂದ ಹಣವನ್ನು ಸಂಗ್ರಹಿಸುತ್ತಿದ್ದೀರಿ..? ನಿಮ್ಮದು ನಿಯಮಗಳ ಪ್ರಕಾರ ನೋಂದಣಿಯಾದ ಸಂಸ್ಥೆಯೇ ಅಲ್ಲ.

ಆಧ್ಯಾತ್ಮಿಕ ವಿಚಾರಗಳು ಕೂಡ ಕಾನೂನಿನ ವ್ಯಾಪ್ತಿಗೆ ಒಳಪಡುತ್ತವೆ. ಆಧ್ಯಾತ್ಮಿಕತೆಯ ಹೆಸರಲ್ಲಿ ನೀವು ಮಾಡುತ್ತಿರುವುದಾದರೂ ಏನು..?

ಎಂದು ಇಶಾ ಫೌಂಡೇಶನ್ ಪರ ವಕೀಲರಿಗೆ ಮುಖ್ಯ ನ್ಯಾಯಮೂರ್ತಿ ಓಕಾ ಚಾಟಿ ಬೀಸಿದರು.‌

 

ಇದೇ ವೇಳೆ ಕರ್ನಾಟಕ ಸರ್ಕಾರಕ್ಕೂ ನ್ಯಾಯಮೂರ್ತಿ ಓಕೆ ಪ್ರಶ್ನೆಗಳನ್ನು ಕೇಳಿದರು.

ಬಲವಂತವಾಗಿ ನಿಧಿಗಳನ್ನು ಸಂಗ್ರಹಿಸಲಾಗುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅದರ ಬಗ್ಗೆ ತನಿಖೆ ನಡೆಸುವುದು ರಾಜ್ಯ ಸರ್ಕಾರದ ಕರ್ತವ್ಯವಲ್ಲವೇ..?

ಎಂದು ಪ್ರಶ್ನಿಸಿದರು.

ನೀವು ಏನು ತನಿಖೆಯನ್ನು ಮಾಡಿದ್ದೀರಿ..? ಇಶಾ ಫೌಂಡೇಶನ್ ಹಣ ಸಂಗ್ರಹಿಸುತ್ತಿರುವ ಬಗ್ಗೆ ನೀವು ತನಿಖೆ ಮಾಡಬೇಕಿತ್ತು…? ಕೇವಲ ಆಧ್ಯಾತ್ಮಿಕ ಕಾರ್ಯಗಳ ಕಾರಣಕ್ಕಾಗಿ ರಾಜ್ಯ ಸರ್ಕಾರ ಪ್ರಭಾವಕ್ಕೆ ಒಳಗಾಗುವುದು ಸರಿಯಲ್ಲ..?

ಎಂದು ಮುಖ್ಯನ್ಯಾಯಮೂರ್ತಿ ಓಕಾ ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ತಲಕಾವೇರಿಯಿಂದ ತಿರುವಾರೂರುವರೆಗೆ ಸುಮಾರು 639 ಕಿಲೋಮೀಟರ್ ವ್ಯಾಪ್ತಿಯಲ್ಲಿ 253 ಕೋಟಿ ಮರಗಿಡಗಳನ್ನು ನೆಡುವುದಾಗಿ ಇಶಾ ಫೌಂಡೇಶನ್ ಘೋಷಿಸಿಕೊಂಡಿದೆ. ಯೋಜನೆಯಡಿ ಪ್ರತಿ ಮರಕ್ಕೆ 42 ರೂಪಾಯಿಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿದೆ. ಅಂದರೆ ಬರೋಬ್ಬರಿ 10,626 ಕೋಟಿ ರೂಪಾಯಿ. ಇದು ದೊಡ್ಡ ಹಗರಣ

ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಕಾವೇರಿ ಕೊಳ್ಳದಲ್ಲಿ ಅಧ್ಯಯನ ಕೈಗೊಂಡಿದ್ದಾಗಿ ಇಶಾ ಫೌಂಡೇಶನ್ ಹೇಳಿದೆ. ಆದರೆ ಆ ಅಧ್ಯಯನದ ವರದಿಯನ್ನು ಫೌಂಡೇಶನ್ ರಾಜ್ಯಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಿತ್ತು. ವರದಿ ಸಲ್ಲಿಕೆಯಾದ ಬಳಿಕ ರಾಜ್ಯ ಸರಕಾರ ಅದರ ಬಗ್ಗೆ ಪರಾಮರ್ಶೆ ನಡೆಸಿ ಒಪ್ಪಿಗೆ ನೀಡಬೇಕಿತ್ತು. ಈ ಯಾವ ಪ್ರಕ್ರಿಯೆಗಳನ್ನು ಅನುಸರಿಸಲಾಗಿಲ್ಲ. ಸರ್ಕಾರಿ ಭೂಮಿಗಳಲ್ಲಿ ಸೂಕ್ತ ಅನುಮತಿ ಇಲ್ಲದೆ ಖಾಸಗಿ ಸಂಸ್ಥೆಗಳಿಗೆ ಯಾವುದೇ ಯೋಜನೆಗಳನ್ನು ಜಾರಿಗೆ ತರುವ ಅಧಿಕಾರವಿಲ್ಲ

ಎಂದು ಇಶಾ ಫೌಂಡೇಶನ್ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಅರ್ಜಿದಾರರು ಗಂಭೀರ ಆರೋಪ ಮಾಡಿದ್ದರು.

LEAVE A REPLY

Please enter your comment!
Please enter your name here