ಬಾ ಟ್ರಂಪ್‌, ನಿನಗಾಗಿ ಕಾದಿರುವೆ ಎಂದು ಘರ್ಜಿಸಿ ಸತ್ತ ಸೇನಾ ನಾಯಕ ಸೊಲೈಮನಿಯ ಜಗದ್ದರ್ಶನ- ರೋಚಕ ಕಥಾನಕ

ಅನಿರೀಕ್ಷಿತ ಮತ್ತು ಅತ್ಯಂತ ಅಪಾಯಕಾರಿ ನಡೆಗೆ ದಾಂಗುಡಿ ಇಟ್ಟ ವಿಶ್ವದ ದೊಡ್ಡಣ್ಣ ಅಮೆರಿಕ ಇರಾಕ್‌ ರಾಜಧಾನಿ ಬಾಗ್ದಾದ್‌ ಮೇಲೆ ತನ್ನ ಯುದ್ಧ ವಿಮಾನಗಳನ್ನ ಅಟ್ಟಿ ವೈಮಾನಿಕ ದಾಳಿ ನಡೆಸಿದೆ. ಈ ಘನಘೋರ ದಾಳಿಯಲ್ಲಿ ನೆರೆಯ ಇರಾನ್‌ನ ಖ್ವ್ಯಾಡ್ಸ್‌ ಪಡೆಯ ಮುಖ್ಯಸ್ಥ ಜನರಲ್‌ ಖಾಸೀಂ ಸೊಲೈಮನಿ ಸಾವನ್ನಪ್ಪಿದ್ದಾರೆ. ಈ ಮೂಲಕ ಇರಾನ್‌ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಸಂಘರ್ಷ ಈಗ ಸಂಭಾವ್ಯ ಯುದ್ಧದತ್ತ ಮುಖ ಮಾಡಿದೆ.

ಅಂದಹಾಗೆ ವೈಮಾನಿಕ ದಾಳಿಯಲ್ಲಿ ಇರಾನ್‌ ಸೇನೆಯ ದೀರ್ಘಕಾಲದ ಮುಖ್ಯಸ್ಥರಾಗಿದ್ದ ಮೇಜರ್‌ ಜನರಲ್‌ ಖಾಸೀಂ ಸೊಲೈಮನಿ ಸಾವು, ಆ ದೇಶ ಮಾತ್ರವಲ್ಲ ಇಡೀ ಮಧ್ಯಪ್ರಾಚ್ಯವನ್ನೇ ದಂಗುಪಡಿಸಿದೆ. ಅಮೆರಿಕ ರಕ್ಷಣಾ ಮುಖ್ಯ ಕಚೇರಿ ಇರುವ ಪೆಂಟಗನ್‌ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ ಸ್ವತಃ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಇಂಥದ್ದೊಂದು ದಾಳಿಗೆ ನಿರ್ದೇಶಿಸಿದ್ದರು.

ತನ್ನ ಆರ್ಥಿಕ ಸಂಕಷ್ಟಗಳ ಹೊರತಾಗಿಯೂ ಇರಾನ್‌ ಈಗ ಮಧ್ಯಪ್ರಾಚ್ಯದಲ್ಲಿ ಅತ್ಯಂತ ಪ್ರಭಾವಿ ರಾಷ್ಟ್ರಗಳಲ್ಲಿ ಒಂದು. ಲೆಬನಾನ್‌ನಿಂದ ಸಿರಿಯಾದವರೆಗೆ, ಇರಾಕ್‌ನಿಂದ ಯೆಮೆನ್‌ವರೆಗೂ ತನ್ನ ಪ್ರಭಾವವನ್ನು ಬೆಳೆಸಿಕೊಂಡಿರುವ ಇರಾನ್‌, ಸೌದಿ ಅರೇಬಿಯಾಕ್ಕೆ ಟಕ್ಕರ್‌ ಕೊಡಬಲ್ಲ ಇಸ್ಲಾಂ ರಾಷ್ಟ್ರಗಳ ನಾಯಕ ಎಂದರೇ ತಪ್ಪಲ್ಲ. ರಾಜತಾಂತ್ರಿಕತೆ, ರಷ್ಯಾ ಜೊತೆಗಿನ ಬಾಂಧವ್ಯ, ಶಿಯಾ ಪ್ರತಿಗಾಮಿಗಳ ಪಡೆಗಳ ಬೆನ್ನಿಗೆ ನಿಂತು ವಿರೋಧಿಗಳನ್ನು ಹತ್ತಿಕ್ಕುತ್ತಿರುವ ರಣನೀತಿಯೇ ಇರಾನ್‌ನ ಇವತ್ತಿನ ಈ ಶಕ್ತಿ ಸ್ವರೂಪಕ್ಕೆ ಕಾರಣ. ಆ ಎಲ್ಲ ಸಾಧ್ಯತೆಗಳ ಹಿಂದಿನ ಸೂತ್ರಧಾರ ಖಾಸೀಂ ಸೊಲೈಮನಿ.

ಇರಾನಿಗಳ ಪಾಲಿಗೆ ಸೊಲೈಮನಿ ಕೇವಲ ಸೇನಾಧಿಕಾರಿ ಆಗಿರಲಿಲ್ಲ. ಆ ನೆಲದಲ್ಲಿ ಆತನ ಜನಪ್ರಿಯತೆಗೆ ಸರಿಸಾಟಿಯೇ ಇಲ್ಲ. ಮುಂದೊಂದು ದಿನ ಈತನೇ ಅಧ್ಯಕ್ಷನಾಗಬಹುದು ಎಂದು ಭಾವಿಸಿದ್ದೂ ಉಂಟು. ರಹಸ್ಯ ತಂತ್ರಗಾರಿಕೆಗಳ ಚತುರ. ಯುದ್ಧ ನೀತಿಗಳ ನಿಷ್ಣಾತ. ತನ್ನ ದೇಶದ ಮಿಲಿಟರಿ ತಂತ್ರಗಾರಿಕೆಯನ್ನೇ ಬದಲಿಸಿ ಮಧ್ಯಪ್ರಾಚ್ಯದಲ್ಲಿ ಇರಾನ್‌ ಎಂದರೆ ವಿರೋಧಿಗಳು ಒಂದು ಕ್ಷಣ ಹಿಂದೇಟು ಹಾಕುವಷ್ಟರ ಮಟ್ಟಿಗೆ ಕಟ್ಟಿದ ಕಲಿ. ಇರಾನ್‌ ಅಧ್ಯಕ್ಷ ಅಯೋತೊಲ್ಲಾ ಆಲಿ ಖಮೆನಿ ಬಳಿಕ ಆ ದೇಶದಲ್ಲಿ ಎರಡನೇ ಅತ್ಯಂತ ಪ್ರಭಾವಿ ಎನ್ನಿಸಿಕೊಂಡಿದ್ದ ಸೇನಾನಿ.

ಈತನನ್ನು ಇಸ್ಲಾಮಿಕ್‌ ಕ್ರಾಂತಿಯ ಜೀವಂತ ಹುತಾತ್ಮ ಎಂದು ಅಧ್ಯಕ್ಷ ಖಮೆನಿ ಹಾಡಿ ಹೊಗಳಿದ್ದೂ ಉಂಟು. ಇರಾನ್‌ ಕ್ರಾಂತಿಕಾರಿಗಳಿಗೆ ವೀರ ಮರಣ ಅತೀ ಉಚ್ಛವಾದದ್ದು. ʼ

ಸೊಲೈಮನಿ ಸೇನಾ ಜೀವನದ ಆರಂಭವೇ ರೋಚಕ. ಇಸ್ಲಾಮಿಕ್‌ ಕ್ರಾಂತಿಯ ಬಳಿಕ ಇರಾನ್‌ ಸೇನೆಗೆ ಸೇರಿ ಸುಲೈಮನಿ ೧೯೮೦ ಮತ್ತು ೧೯೮೮ರ ನಡುವೆ ಘಟಿಸಿದ್ದ ಇರಾಕ್‌ ಜೊತೆಗಿನ ಕೊಲ್ಲಿ ರಾಷ್ಟ್ರಗಳ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ಸೈನಿಕ.

ಈತ ಯುವ ಸೇನಾನಿಯಾಗಿ ತೋರಿದ ಶೌರ್ಯ ಮತ್ತು ಸಾಹಸ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಕೇವಲ ೨೦ನೇ ವಯಸ್ಸಿನಲ್ಲೇ ಇಸ್ಲಾಮಿಕ್‌ ಕ್ರಾಂತಿಕಾರಿ ರಕ್ಷಣಾ ಪಡೆಯ ೪೧ನೇಯ ಡಿವಿಶನ್‌ ಗೆ ಈತ ಮುಖ್ಯಸ್ಥನಾದ. ಸುನ್ನಿಗಳ ಬೆಂಬಲವಿದ್ದ ಇರಾಕಿಗಳು ಆರಂಭದಲ್ಲಿ ಯುದ್ಧದಲ್ಲಿ ಘರ್ಜಿಸುತಾ ವಿಜಯಶಾಲಿಗಳಾಗುತ್ತಿದ್ದರೂ ಕಡೆಯ ಕ್ಷಣದಲ್ಲಿ ಬದಲಾದ ಇರಾನ್‌ನ ಯುದ್ಧತಂತ್ರ ಇರಾಕ್‌ ಸೇನಾಪಡೆಯನ್ನು ದಂಗುಬಡಿಸಿತ್ತು.

೧೯೮೮ರಲ್ಲಿ ಕದನ ವಿರಾಮದ ಮೂಲಕ ಯುದ್ಧ ಕೊನೆಗೊಂಡಾಗ ಸದ್ದಾಂ ಹುಸೇನ್‌ ಮತ್ತು ಆತನ ಗೆಳೆಯ ಗಲ್ಪ್‌ ರಾಷ್ಟ್ರಗಳಿಗೆ ಆಘಾತ ಕಾದಿತ್ತು. ಇರಾನ್‌ ರಾಜಧಾನಿ ತೆಹ್ರಾನ್ ನ ಮುಲ್ಲಾಗಳು ಸಂಪೂರ್ಣವಾಗಿ ಇರಾನ್‌ನ ನಿಯಂತ್ರಣಕ್ಕೆ ಬಂದಾಗಿತ್ತು.

ಯುದ್ಧದಲ್ಲಿನ ಈ ಗೆಲುವಿಗೆ ಮೂಲ ಕಾರಣಕರ್ತ ಸೊಲೈಮನಿ ಎಂದರೆ ತಪ್ಪಲ್ಲ. ಈತನ ಈ ಸಾಹಸದಿಂದಾಗಿಯೇ ೧೯೯೦ರಲ್ಲಿ ಕರ್ಮನ್‌ ಪ್ರಾಂತ್ಯದ ಸೇನಾ ಕಮಾಂಡರ್‌ ಆಗಿ ನೇಮಿಸಲಾಯಿತು. ಸಾಂಪ್ರದಾಯಿಕ ಯುದ್ಧ ತಂತ್ರಗಳಲ್ಲಿ ಇರಾನ್‌ ಅಷ್ಟೊಂದು ಬಲಿಷ್ಟವಾಗಿಲ್ಲ. ಹೀಗಾಗಿ ಆ ದೇಶ ಸೊಲೈಮನಿ ಸಾರಥ್ಯದಲ್ಲಿ ತನ್ನ ರಣತಂತ್ರ ನೀತಿಗಳನ್ನೇ ಬದಲಾಯಿಸಿಕೊಳ್ತು. ಶಿಯಾ ಮುಸಲ್ಮಾನರೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಂಡು ತನ್ನ ಜಾಲವನ್ನು ವಿಸ್ತರಿಸಿಕೊಂಡಿತು.

ಇರಾನ್‌ ಸೇನೆಯ ವಿದೇಶಿ ಅಂಗ ಸಂಸ್ಥೆಯಾಗಿದ್ದ ಖ್ವಾಡ್ಸ್‌ ಪಡೆಯ ಕೆಲಸವೇ ತನ್ನ ಕಾರ್ಯಾಚರಣೆಯ ಜಾಲವನ್ನು ವಿಸ್ತರಿಸುವುದು, ಪ್ರತಿಗಾಮಿಗಳನ್ನು ಬೆಳೆಸುವುದು ಮತ್ತು ಪಕ್ಷಗಳನ್ನು ಇರಾನ್‌ನ ಪ್ರಭಾವಕ್ಕೆ ಒಳಪಡಿಸುವುದು.

೧೯೮೦ರ ವೇಳೆಗೆ  ಲೆಬನಾನ್‌ ನಲ್ಲಿ ಹೆಜ್ಬುಲ್ಲಾ ಎಂಬ ಸಂಘಟನೆ ಹುಟ್ಟಿಕೊಂಡು ಅದು ಇಸ್ರೇಲ್‌ ಮತ್ತು ಅಮೆರಿಕಾದ ವಿರುದ್ಧ ನಿರಂತರವಾಗಿ ದಾಳಿ ಮಾಡುತ್ತಲೇ ಬಂತು. ಇತ್ತ ವೈರಿ ರಾಷ್ಟ್ರ ಇರಾಕ್‌ ನಲ್ಲಿರುವ ಶಿಯಾ ಪಕ್ಷಗಳೊಂದಿಗೆ ಇರಾಕ್‌, ಇರಾನ್‌ ಸಂಬಂಧವನ್ನು ಬೆಳೆಸಿಕೊಂಡಿತ್ತು. ಇದರ ಹಿನ್ನೆಲೆಯಲ್ಲಿದ್ದವ ಇದೇ ಸೊಲೈಮನಿ. ೧೯೯೮ ರ ವೇಳೆಗೆ ಅತ್ಯಂತ ಪ್ರತಿರೋಧದ ಜಾಲವನ್ನು ಸೃಷ್ಟಿಸಿಕೊಂಡಿದ್ದ ಇರಾನ್‌ನ ಖ್ವಾಡ್ಸ್‌ ಫೋರ್ಸ್‌ನ ಮುಖ್ಯಸ್ಥನಾಗಿ ಸೊಲೈಮನಿ ಅಧಿಕಾರ ವಹಿಸಿಕೊಂಡ.

ಆದರೆ ಸೊಲೈಮನಿ ಮೂಲಭೂತವಾದಿಗಳಲ್ಲೇ ಅತ್ಯಂತ ಮೂಲಭೂತವಾದಿ. ೧೯೯೯ ರಲ್ಲಿ ಇರಾನ್‌ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಹಕ್ಕೊತ್ತಾಯಿಸಿ ಆಡಳಿತಶಾಹಿ ವಿರುದ್ಧ ದಂಗೆ ಎದ್ದಾಗ ಇದೇ ಸೊಲೈಮನಿ ತನ್ನ ಸರ್ವೋಚ್ಛ ನಾಯಕ, ಸುಧಾರಣಾವಾದಿ ಅಧ್ಯಕ್ಷ ಎಂದೇ ಕರೆಯಲ್ಪಟ್ಟಿದ್ದ ಅಧ್ಯಕ್ಷ ಮೊಹಮ್ಮದ್‌ ಖತಾಮಿಗೆ ಪತ್ರ ಬರೆದಿದ್ದ. ನಮ್ಮ ತಾಳ್ಮೆಯ ಕಟ್ಟೆ ಒಡೆಯುತ್ತಿದೆ, ಒಂದೋ ನೀವು ಪ್ರತಿಭಟನಾಕಾರರನ್ನು ಹತ್ತಿಕ್ಕಿ, ಇಲ್ಲವಾದರೆ ಮಿಲಿಟರಿ ತನ್ನ ಕೆಲಸ ಮಾಡುತ್ತದೆ ಎಂದು ಎಚ್ಚರಿಸಿದ್ದ.

ಸೊಲೈಮನಿ ಸೂತ್ರಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಸಿರಿಯಾ ಮತ್ತು ಇರಾಕ್‌ನಲ್ಲಿ ಇರಾನ್‌ನ ಪ್ರಭಾವ ವರ್ಧಿಸಿದೆ. ಆದ್ರೆ ಅಮೆರಿಕಾದ ಜೊತೆಗಿನ ಸಂಬಂಧ ಮತ್ತಷ್ಟು ಬಿಗಾಡಯಿಸಿದೆ. ೨೦೧೮ ರಲ್ಲಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ನೇರವಾಗಿಯೇ ಧಮ್ಕಿ ಹಾಕಿದ್ದ.

ನಮ್ಮ ದೇಶದ ಅಧ್ಯಕ್ಷ ನಿನಗೆ ಉತ್ತರಿಸುವುದು ಮರ್ಯಾದೆಯ ಲಕ್ಷಣವಲ್ಲ. ಹಾಗಾಗಿ ಸೈನಿಕನಾಗಿ ನಾನೇ ನಿನಗೆ ಉತ್ತರಿಸುತ್ತೇನೆ

ಎಂದು ಘರ್ಜಿಸಿದ್ದ.

ಹಿಂದೆಂದೂ ಕಾಣದ ದಾಳಿ ಬಗ್ಗೆ ನೀನು ನಮಗೆ ಬೆದರಿಕೆ ಹಾಕಿದ್ದೀಯ. ಒಂದು ವರ್ಷದಿಂದ ಯಾವುದೋ ಕ್ಯಾಸಿನೋ, ಬಾರ್‌ಗಳಲ್ಲಿ ಅರಚಾಡುವಂತೆ ಟ್ರಂಪ್‌ ಅರಚಾಡುತ್ತಿದ್ದಾನೆ. ಬಾರ್‌ನಲ್ಲಿ ಕೆಲ್ಸ ಮಾಡುವವನಂತೆ, ಕ್ಯಾಸಿನೋದ ಮ್ಯಾನೇಜರ್‌ನಂತೆ ಇಡೀ ಜಗತ್ತಿನ ಮುಂದೆ ಟ್ರಂಪ್‌ ವರ್ತಿಸುತ್ತಿದ್ದಾನೆ

ಎಂದು  ದೊಡ್ಡಣ್ಣನಬಗ್ಗೆ ಕಟಕಿ ಆಡಿದ್ದ ಇದೇ ಸೊಲೈಮನಿ.

ಮಿಸ್ಟರ್‌ ಟ್ರಂಪ್‌, ನೀನೊಬ್ಬ ಜೂಜುಕೋರ. ಈ ಪ್ರಾಂತ್ಯದಲ್ಲಿ ನಮ್ಮ ತಾಕತ್ತು ಮತ್ತು ಸಾಮರ್ಥ್ಯಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ನಾವು ಯುದ್ಧತಂತ್ರದಲ್ಲಿ ಎಷ್ಟು ಪ್ರವೀಣರು ಎಂದು ನಿನಗೆ ಗೊತ್ತಿದೆ. ಬಾ, ನಿನಗಾಗಿ ನಾವು ಕಾದಿದ್ದೇವೆ. ನಾವೇ ನಿಜವಾದ ಗಂಡಸರು. ನೀನು ಯುದ್ಧ ಶುರು ಮಾಡಬಹುದು, ಆದ್ರೆ ಯುದ್ಧ ಯಾವಾಗ ಮುಗಿಯಬೇಕು ಎನ್ನುವುದನ್ನು ತೀರ್ಮಾನ ಮಾಡುವವರು ನಾವು

ಎಂದು ಸೊಲೈಮನಿ ಬಹಿರಂಗವಾಗಿಯೇ ಟ್ರಂಪ್‌ಗೆ ಎಚ್ಚರಿಕೆ ಕೊಟ್ಟಿದ್ದ.

ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೋಂಪೆ ೨೦೧೮ರ ಜುಲೈನಲ್ಲಿ ಈ ಸೊಲೈಮನಿಯನ್ನು ಮಟ್ಟ ಹಾಕಬೇಕೆಂದು ಗುಡುಗಿದ್ದರು. ಆಗ ಇರಾನ್‌ ಸೇನೆ ತಿರು ಘರ್ಜಿಸಿತ್ತು, “ಸೊಲೈಮನಿ ಏಕ ವ್ಯಕ್ತಿ ಅಲ್ಲ, ಆತನ ಬೆನ್ನಿಗೆ ಇಡೀ ಇರಾನೇ ಇದೆ” ಎಂದು.

ವಿಶ್ವದ ಅತ್ಯಂತ ಶ್ರೀಮಂತ ಭಯೋತ್ಪಾದಕ ಸಂಘಟನೆಯಾಗಿದ್ದ ಇಸೀಸ್‌ ವಿರುದ್ದದ ಯುದ್ಧ ಸುಲೈಮನಿಯ ಮಿಲಿಟರಿ ಜೀವನದ ಅತೀ ಪ್ರಮುಖ ಸವಾಲುಗಳಲ್ಲಿ ಒಂದು . ಒಂದು ಕಡೆ ಅಮೆರಿಕಾದಿಂದ ಸಿರಿಯಾದಲ್ಲಿ ಯುದ್ಧದ ಕಾರ್ಮೋಡ, ಮತ್ತೊಂದೆಡೆ ಸಿರಿಯಾದಲ್ಲಿ ತಲೆಯೆತ್ತಿದ ಇಸೀಸ್.‌

೨೦೧೧ರ ವೇಳೆಗೆ ಸಿರಿಯಾ ಅಧ್ಯಕ್ಷ ಬಶರ್‌ ಅಲ್ ಅಸದ್‌ ತನ್ನ ದೇಶದ ಪ್ರಾಂತ್ಯಗಳನ್ನು ಇಸೀಸ್‌ ಉಗ್ರರ ಎದುರು ಕಳೆದುಕೊಳ್ಳುತ್ತಾ  ಕಂಗೆಟ್ಟಿದ್ದ. ಮಧ್ಯ ಪ್ರಾಚ್ಯದಲ್ಲಿ ಸಿರಿಯಾ ಜೊತೆಗಿರುವ ಏಕೈಕ ಆಪ್ತ ರಾಷ್ಟ್ರ ಎಂದರೆ ಅದು ಇರಾನ್‌ ಮಾತ್ರ. ಹೀಗಾಗಿಯೇ ಅಸಾದ್‌ ಸೋಲು ಇರಾನ್‌ ಸೋಲು ಎಂಬಂತಾಗಿತ್ತು.

ಮಿಲಿಟರಿ ತಂತ್ರಗಾರಿಕೆಯಲ್ಲಿ ನಿಷ್ಣಾತನಾಗಿದ್ದ ಸೊಲೈಮನಿ ಸಿರಿಯಾದಲ್ಲೂ ತನ್ನ ತಂತ್ರಗಾರಿಕೆಗಳ ಜಗದ್ದರ್ಶನ ಮಾಡಿಸಿದ. ಆತನಿಗಿದ್ದ ಗುರಿ ಒಂದೇ , ಅಸಾದ್‌ ನನ್ನು ಗೆಲ್ಲಿಸುವುದು. ಈ ರಣತಂತ್ರದ ಭಾಗವಾಗಿಯೇ ಶಿಯಾ ಉಗ್ರಪಡೆಗೆ ತರಬೇತಿಗಳನ್ನು ಕೊಟ್ಟು ಅವರನ್ನು ಸಿರಿಯಾಗೆ ಅಟ್ಟಿದ. ಜೊತೆಗೆ ತಾನೇ ನೀರೆರೆದು ಬೆಳೆಸಿದ್ದ ಲೆಬನಾನ್‌ನ ಹೆಜ್ಬುಲ್ಲಾ ಸಂಘಟನೆಯೊಂದಿಗೆ ಸೇರಿಕೊಂಡು ಯುದ್ಧ ತಂತ್ರವನ್ನು ಹೆಣೆದ .

೨೦೧೩ರಲ್ಲಿ ಸಿರಿಯಾದ ಸೇನೆ ಸೊಲೈಮನಿ ಕಳುಹಿಸಿದ್ದ ಶಿಯಾ ಪ್ರತಿಗಾಮಿ ಪಡೆ, ಹೆಜ್ಬುಲ್ಲಾ ಹೋರಾಟಗಾರರು ಸೇರಿಕೊಂಡು ಜಂಟಿ ಸಮರದಲ್ಲಿ ಸಿರಿಯಾ- ಲೆಬನಾನ್‌ನ ಗಡಿಯಲ್ಲಿ ಬರುವ ಪಟ್ಟಣವೊಂದನ್ನು ಇಸೀಸ್‌ ಉಗ್ರರಿಂದ ವಶಪಡಿಸಿಕೊಂಡರು. ೨೦೧೫ರಲ್ಲಿ ಸಿರಿಯಾದ ಅಸಾದ್ ಬೆನ್ನಿಗೆ ಬೆಂಗಾವಲಾಗಿ ನಿಂತಿದ್ದು ರಷ್ಯಾ. ಆದರೆ ಅಸಾದ್‌ಗಾಗಿ ಸಿರಿಯಾ ನೆಲದಲ್ಲಿ ಯುದ್ಧ ರಣತಂತ್ರಗಳನ್ನು ಹೆಣೆದು ಗೆಳೆಯನ ಕೈ ಮೇಲಾಗುವಂತೆ ಮಾಡಿದ್ದ ಚಾಣಾಕ್ಯ ಅವನೇ ಸೊಲೈಮನಿ.

ಇರಾಕ್‌ನಲ್ಲೂ ಇದೇ ಯುದ್ಧ ತಂತ್ರವನ್ನು ಹೆಣೆದಿದ್ದ ಸೊಲೈಮನಿ. ಹೆಚ್ಚುತ್ತಿದ್ದ ಇಸೀಸ್‌ನ ಅಟ್ಟಹಾಸವನ್ನು ಬಗ್ಗು ಬಡೆದಿದ್ದು ಈತನೇ. ಈತ ತರಬೇತಿ ಕೊಟ್ಟಿದ್ದ ಶಿಯಾ ಪ್ರತಿಗಾಮಿ ಸಂಘಟನೆಯ ಬೆಂಬಲದೊಂದಿಗೆ ಇರಾಕ್‌ ಸೇನೆ ಇಸೀಸ್‌ ಸಂಘಟನೆಯ ಬೆನ್ನು ಹುರಿಯನ್ನೇ ಮುರಿಯಿತು. ಕುರ್ದೀಶ್‌, ತಿಕ್ರಿಟ್‌, ರಮಾಡಿ, ಮೋಸುಲ್‌ ಹೀಗೆ ಇಸೀಸ್‌ ಕಪಿಮುಷ್ಟಿಯಲ್ಲಿದ್ದ ಇರಾಕ್‌ನ ಪಟ್ಟಣಗಳನ್ನು ಮುಕ್ತಿಗೊಳಿಸಿದ ಹೆಗ್ಗಳಿಕೆ ಸೊಲೈಮನಿಯದ್ದು.

ಈಗ ಸೊಲೈಮನಿ ಇಲ್ಲ. ವೈಮಾನಿಕ ದಾಳಿಗೆ ಆತ ಶವವಾಗಿದ್ದಾನೆ. ಆದರೆ ಇದು ಇರಾನ್ ಪ್ರತಿಷ್ಠೆಗೆ ಬಿದ್ದ ಏಟು. ತನ್ನ ನೆಲದ ಜನಪ್ರಿಯ ಸೇನಾನಿಯನ್ನು ಅಮೆರಿಕ ಬಲಿ ಪಡೆದಾಗ ಇರಾನ್‌ ಸುಮ್ಮನಿದ್ದೀತೆ..? ಖಂಡಿತಾ ಇಲ್ಲ. ಸೇಡಿಗೆ ಸೇಡು, ಮುಯ್ಯಿಗೆ ಮುಯ್ಯಿ ಎಂದು ಘರ್ಜಿಸಿದೆ ಇರಾನ್‌. ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಅಧ್ಯಕ್ಷ ಟ್ರಂಪ್‌ ಬಾಂಬ್‌ಗಳ ಮಳೆಗೆರೆದು ಇಂದೋ ನಾಳೆಯೋ ಎನ್ನುವಷ್ಟರ ಮಟ್ಟಿಗೆ ತಲುಪಿದ್ದ ಯುದ್ಧ ಸಂಭವಕ್ಕೆ ಮುನ್ನುಡಿಯನ್ನ ಬರೆದಾಗಿದೆ.

LEAVE A REPLY

Please enter your comment!
Please enter your name here