ಆಹಾರ, ವಸ್ತ್ರ, ನಂಬಿಕೆ, ಹಬ್ಬಗಳು ಮತ್ತು ಭಾಷೆಯ ಆಧಾರದಲ್ಲಿ ದೇಶದಲ್ಲಿ ನಡೆಯುತ್ತಿರುವ ಕೋಮು ಹಿಂಸಾ ಘಟನೆಗಳನ್ನು ಕಾಂಗ್ರೆಸ್ ಒಳಗೊಂಡು 13 ವಿರೋಧಪಕ್ಷಗಳು ಒಕ್ಕೊರಲಿನಿಂದ ಖಂಡಿಸಿವೆ.
ಆದರೆ ಈ 13 ವಿಪಕ್ಷಗಳ ಪಟ್ಟಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇತೃತ್ವದ ಜೆಡಿಎಸ್ ಇಲ್ಲ. ಕಳೆದ ಕೆಲ ದಿನಗಳಿಂದ ಕರ್ನಾಟಕದಲ್ಲಿ ಹಿಜಾಬ್, ಹಲಾಲ್, ಹಿಂದೂ ಜಾತ್ರೆಗಳಲ್ಲಿ ಮುಸಲ್ಮಾನರಿಗೆ ನಿಷೇಧ, ಆಜಾನ್ ಸೇರಿದಂತೆ ಹಲವು ವಿಷಯಗಳ ಆಧಾರದಲ್ಲಿ ಕೋಮು ಸಂಘರ್ಷ ಘಟನೆಗಳು ವರದಿ ಆಗುತ್ತಿವೆ.
ಇತ್ತೀಚಿನ ಕೋಮು ಹಿಂಸಾಚಾರ ಮತ್ತು ಕೋಮು ಸಂಘರ್ಷದ ಘಟನೆಗಳ ಬಗ್ಗೆ ಪ್ರಧಾನಿ ಮೋದಿ ಮೌನವಹಿಸಿರುವ ಬಗ್ಗೆ ಕಾಂಗ್ರೆಸ್, ಟಿಎಂಸಿ, ಎನ್ಸಿಪಿ, ಡಿಎಂಕೆ, ಸಿಪಿಐಎಂ, ಜೆಎಂಎಂ, ನ್ಯಾಷನಲ್ ಕಾನ್ಫೆರೆನ್ಸ್, ಆರ್ಜೆಡಿ, ಸಿಪಿಐ, ಆಲ್ ಇಂಡಿಯಾ ಫಾರ್ವಡ್ ಬ್ಲಾಕ್, ಆರ್ಎಸ್ಪಿ, ಐಯುಎಂಎಲ್ ಮತ್ತು ಸಿಪಿಎಂಎಲ್ ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿವೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ತೇಜಸ್ವಿ ಯಾದವ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಸಮಾಜದಲ್ಲಿ ಒಡಕು ಮೂಡಿಸುವ ವಿಷಕಾರಿ ಸಿದ್ಧಾಂತವನ್ನು ಪ್ರತಿರೋಧಿಸುವುದಕ್ಕೆ ಬದ್ಧತೆ ಮತ್ತು ವೈವಿದ್ಯತೆಯನ್ನು ಗೌರವಿಸಿ ಅವಕಾಶ ಮಾಡಿಕೊಟ್ಟರೇ ದೇಶ ಅಭಿವೃದ್ಧಿಪಥದಲ್ಲಿ ಸಾಗುತ್ತದೆ ಎಂದು ಹೇಳಿಕೆಯಲ್ಲಿ ನಾಯಕರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳ ಮೌನ ನೋಡಿ ಆಘಾತವಾಗಿದೆ ಮತ್ತು ಸಮಾಜವನ್ನು ಪ್ರಚೋದಿಸುತ್ತಿರುವ ಮಾತುಗಳು ಮತ್ತು ಕೃತ್ಯಗಳ ವಿರುದ್ಧ ಪ್ರಧಾನಿ ಮಾತಾಡಲು ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿವೆ.