ಕಲ್ಲಡ್ಕ ಪ್ರಭಾಕರ್‌ ಭಟ್‌ ಮೇಲೂ ಕೇಸ್‌ ಹಾಕಿ, ಯಡಿಯೂರಪ್ಪ ಸಿಎಂ ಆದಾಗಲೆಲ್ಲ ಗೋಲಿಬಾರ್‌ – ಸಿದ್ದರಾಮಯ್ಯ ಗುಡುಗು

ಮಂಗಳೂರಲ್ಲಿ ಗೋಲಿಬಾರ್‌ ನಡೆಸಿದ್ದ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದು ಕಲ್ಲಡ್ಕ ಪ್ರಭಾಕರ್‌ ಭಟ್‌ ಶಾಲೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಅಣುಕು ಪ್ರದರ್ಶನ ಮೂಲಕ ಕಲ್ಲಡ್ಕ ಪ್ರಭಾಕರ್‌ ಭಟ್‌ ಮೇಲೆ ಎಫ್‌ಐಆರ್‌ ಹಾಕುವಂತೆ ಆಗ್ರಹಿಸಿದ್ದಾರೆ.

ಪೊಲೀಸ್‌ ಫೈರಿಂಗ್‌ನಲ್ಲಿ ಮೃತಪಟ್ಟವರ ಮನೆಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿ ಎರಡೂ ಕುಟುಂಬಗಳಿಗೆ ತಲಾ ಏಳೂವರೆ ಲಕ್ಷ ರೂಪಾಯಿ ಮೊತ್ತದ ಪರಿಹಾರದ ಚೆಕ್‌ ವಿತರಿಸಿದರು.

ಮಂಗಳೂರಿನಲ್ಲಿ ಗೋಲಿಬಾರ್ ನಡೆದು ಪೊಲೀಸರಿಂದ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ, ಇಬ್ಬರೂ ಬಡ ಕುಟುಂಬದಿಂದ ಬಂದವರು. ಜಲೀಲ್‌ ಅವರಿಗೆ ಇಬ್ಬರು ಮಕ್ಕಳಿದ್ದು, ಅವರೇ ಕುಟುಂಬಕ್ಕೆ ಆಧಾರವಾಗಿದ್ದರು. ಮತ್ತೊಬ್ಬ ನೌಸಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ಈಗ ಅವರಿಬ್ಬರ ಕುಟುಂಬಕ್ಕೆ ಯಾರು ದಿಕ್ಕು? ಎಂದು ವಿರೋಧ ಪಕ್ಷದ ನಾಯಕರೂ ಆಗಿರುವ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಮಂಗಳೂರಿಗೆ ಬಂದು ಹೋದರು. ಆದರೆ ವಿರೋಧ ಪಕ್ಷದ ನಾಯಕನಾದ ನನಗೆ ಅನುಮತಿ ಕೊಡಲಿಲ್ಲ. ಹಾಗಾದರೆ ಶೋಭಾ ಕರಂದ್ಲಾಜೆ ಇಲ್ಲಿಗೆ ಬಂದು ಹೇಳಿಕೆ ಕೊಟ್ಟಿದ್ದು ಹೇಗೆ..? ಶೋಭಾ ಕರಂದ್ಲಾಜೆ ಯಾರು..? ಆಕೆ ಮಂಗಳೂರು ಪ್ರತಿನಿಧಿಯಾ..? ಅವರನ್ನು ಬಿಡ್ತಾರೆ..? ನಮ್ಮನ್ನು ಯಾಕೆ ಬಿಟ್ಟಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನನ್ನ ಸರಕಾರದ ವೇಳೆ ಒಂದೂ ಗೋಲಿಬಾರ್ ನಡೆದಿಲ್ಲ. ಯಡಿಯೂರಪ್ಪ ಬಂದಾಗ ಯಾಕೆ ಗೋಲಿಬಾರ್ ಆಯ್ತು..? ಹಿಂದೆ ಹಾವೇರಿಯಲ್ಲಿ ರೈತರ ಮೇಲೆ‌ ಗೋಲಿಬಾರ್ ಮಾಡಿದ್ರು. ಈಗ ಅಮಾಯಕರ ಮೇಲೆ ಗೋಲಿಬಾರ್‌ ಮಾಡಿದ್ರು. ಇಡೀ ರಾಜ್ಯಾದ್ಯಂತ ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ರಾಜ್ಯವಿಡೀ ನಿಷೇಧಾಜ್ಞೆ ಹಾಕುವ ಅಗತ್ಯವೇ ಇರಲಿಲ್ಲ. ಪ್ರತಿಭಟನೆ ಸಂವಿಧಾನ ಕೊಟ್ಟಿರುವ ಹಕ್ಕು ಎಂದು ಸಿದ್ದರಾಮಯ್ಯ ಗುಡುಗಿದರು

ಮೃತರನ್ನೇ ಗಲಭೆಯ 3ನೇ ಮತ್ತು 7ನೇ ಆರೋಪಿ ಮಾಡಿರುವುದು ಇನ್ನೂ ದುಃಖದ ವಿಚಾರ. ವಿದ್ಯಾರ್ಥಿಗಳು ಮತ್ತು ಕಾರ್ಮಿಕರನ್ನು ಬಿಡದೆ ಪ್ರಕರಣದಲ್ಲಿ ಸೇರಿಸಿದ್ದಾರೆ. ಈ ಸರ್ಕಾರಕ್ಕೆ ಹೃದಯವೇ ಇಲ್ಲ. ಪೊಲೀಸರು, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಗೃಹಸಚಿವ ಬಸವರಾಜ್ ಬೊಮ್ಮಾಯಿ ಗೋಲಿಬಾರ್ ಘಟನೆಯ ಜವಾಬ್ದಾರಿ ಹೊರಬೇಕು. ಮಂಗಳೂರು ಗಲಭೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿರುವ ಅಮಾಯಕರನ್ನು ತಕ್ಷಣ ಬಿಡುಗಡೆ ಮಾಡಬೇಕು ಮತ್ತು ಗುಂಡೇಟಿನಿಂದ ಮೃತರಾದವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬಂದೂಕು ಇರುವುದು ಗುಂಡು ಹಾರಿಸೋಕೆ ಎಂದು ಹೇಳಿದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಸಚಿವರಾಗಲು ನಾಲಾಯಕ್, ಅವರ ವಿರುದ್ಧ ಸ್ವ‌ಇಚ್ಛೆಯಿಂದ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸುತ್ತೇನೆ.

ಮಂಗಳೂರಿನಲ್ಲಿ ಅಹಿತಕರ ಘಟನೆಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡಿದ್ದಾನೆ. ಶಾಂತಿ ಸುವ್ಯವಸ್ಥೆ ನೆಲೆಸಬೇಕು ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜನತೆ ಶಾಂತ ರೀತಿಯಿಂದ ವರ್ತಿಸಿ ಎಂದು ಮನವಿ ಮಾಡುತ್ತೇನೆ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಐಡಿ ತನಿಖೆಯಿಂದ ಗೋಲಿಬಾರ್ ಪ್ರಕರಣದ ಹಿಂದಿರುವ ನಿಜವಾದ ಅಪರಾಧಿಗಳು ಹೊರಬರುತ್ತಾರೆ ಎಂಬ ನಂಬಿಕೆ ನನಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಪೊಲೀಸರ ತಪ್ಪಿಲ್ಲ ಎಂದು ತನಿಖೆಗೆ ಮೊದಲೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ, ಮುಖ್ಯಮಂತ್ರಿಗಳೇನು ಘಟನೆಯ ಪ್ರತ್ಯಕ್ಷದರ್ಶಿಯೇ? ಸಿಐಡಿ ತನಿಖೆಗೆ ಒಪ್ಪಿಸಿ ಪ್ರಕರಣ ಮುಚ್ಚಿಹಾಕಲು ಮುಖ್ಯಮಂತ್ರಿಗಳು ಅವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ನಾನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದೆ. ಗೋಲಿಬಾರ್‌ನಲ್ಲಿ ಸಾವಿಗೀಡಾದ ಇಬ್ಬರು ಅಮಾಯಕರ ಬಲಿದಾನಕ್ಕೆ ನ್ಯಾಯ ಸಿಗಬೇಕು ಎಂದಾದರೆ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಪ್ರಕರಣದ ತನಿಖೆ ಆಗಲೇಬೇಕು.

ಗಲಭೆಗೆ ಪ್ರಚೋದನೆ ನೀಡಿದ ಅಪರಾಧದ ಮೇಲೆ ಕಲ್ಲಡ್ಕ ಪ್ರಭಾಕರ್ ಅವರ ಮೇಲೂ ಕೇಸ್ ದಾಖಲಿಸಬೇಕು. ಯಾವುದೋ ಒಂದು ವರ್ಗವನ್ನು ಮಾತ್ರ ಗುರಿಯಾಗಿಸಿಕೊಂಡು ಕ್ರಮ‌ ಜರುಗಿಸುವುದು ನ್ಯಾಯಸಮ್ಮತವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.