ನ್ಯೂಯಾರ್ಕ್”ನಲ್ಲಿನ ಬಫಲೊ ನಗರದ ಸೂಪರ್ ಮಾರ್ಕೆಟ್ ನಲ್ಲಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ 10 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂದೂಕುಧಾರಿ ವ್ಯಕ್ತಿಯೊಬ್ಬ ಸುರಕ್ಷಾ ಕವಚ ಹಾಗೂ ಹೆಲ್ಮೆಟ್ ಧರಿಸಿ ಸೂಪರ್ ಮಾರ್ಕೆಟ್ ನಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ 10 ಮಂದಿಯ ಪೈಕಿ ಹಲವರು ಆಫ್ರಿಕನ್ ಅಮೆರಿಕನ್ನರಾಗಿದ್ದು, ದಾಳಿ ನಡೆಸಿದ ದುಷ್ಕರ್ಮಿ ದಾಳಿ ಕೃತ್ಯವನ್ನು ಕ್ಯಾಮೆರಾದಲ್ಲಿ ಲೈವ್ ಸ್ಟ್ರೀಮ್ ಮಾಡಿದ್ದಾನೆಂದು ಹೇಳಿದ್ದಾರೆ.
ಮೊದಲು ಪಾರ್ಕಿಂಗ್ ಸ್ಥಳದಲ್ಲಿದ್ದ ನಾಲ್ಕು ಜನರ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿ, ಬಳಿಕ ಸೂಪರ್‌ಮಾರ್ಕೆಟ್ ಒಳಗೆ ನುಗ್ಗಿ ದಾಳಿ ಮಾಡಿದ್ದಾನೆ. ಮೃತಪಟ್ಟವರಲ್ಲಿ ಒಬ್ಬರು ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಅವರು (ನಿವೃತ್ತ ಪೊಲೀಸ್ ಅಧಿಕಾರಿ) ಮೃತಪಡುವ ಮುನ್ನ ದಾಳಿಕೋರನ ಮೇಲೆ ಹಲವು ಸುತ್ತಿನ ಪ್ರತಿದಾಳಿ ನಡೆಸಿದ್ದರು ಎಂದು ವಿವರಿಸಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದ ಬಳಿಕ, ದಾಳಿಕೋರ ತನ್ನ ಕುತ್ತಿಗೆ ಬಳಿಗೆ ಗನ್ ಹಿಡಿದುಕೊಂಡು ಶರಣಾಗಿದ್ದಾನೆ. ಪ್ರಕರಣವನ್ನು ದ್ವೇಷ ಅಪರಾಧ ಮತ್ತು ಜನಾಂಗೀಯ ಪ್ರೇರಿತ ಕೃತ್ಯವೆಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಬಫಲೊದಲ್ಲಿರುವ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (ಎಫ್‌ಬಿಐ) ಕಚೇರಿಯ ಉಸ್ತುವಾರಿ ಅಧಿಕಾರಿ ಸ್ಟೀಫನ್ ಬೆಲೊಂಗಿಯಾ ಅವರು ತಿಳಿಸಿದ್ದಾರೆ.