ಹೊಸ ಸವಾಲು – 2ನೇ ಬಾರಿ ಕೊರೋನಾ ದಾಳಿ

ಕೊರೋನಾ ಸೋಂಕಿಗೆ ಇದುವರೆಗೂ ಮದ್ದನ್ನೇ ಕಂಡು ಹಿಡಿದಿಲ್ಲ. ಒಮ್ಮೆ ಕೊರೋನಾ ಸೋಂಕು ಬಂದರೆ ಪಾರಾಗುವುದು ಹೇಗೆ..? ಎಂಬ ಚಿಂತೆಯಲ್ಲಿದೆ ಇಡೀ ಜಗತ್ತು. ಇದೇ ಸಂದರ್ಭದಲ್ಲಿ ಹೊಸ ಸವಾಲೊಂದು ಎದುರಾಗಿದೆ. ಅದೇ ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಗೆ ಮತ್ತೆ ಕೊರೋನಾ ದಾಳಿ ಮಾಡುತ್ತಿರುವುದು. ದಕ್ಷಿಣ ಕೋರಿಯಾದಲ್ಲಿ ಕೊರೋನಾದಿಂದ ಚೇತರಿಸಿಕೊಂಡಿದ್ದ 91 ಮಂದಿಯಲ್ಲಿ ಮತ್ತೆ ಕೊರೋನಾ ಪಾಸಿಟೀವ್ ಕಂಡುಬಂದಿದೆ. ಇದು ದಕ್ಷಿಣ ಕೊರಿಯಾ ಅಷ್ಟೇ ಅಲ್ಲ, ಇಡೀ ಜಗತ್ತನ್ನು ಕಂಗಾಲು ಮಾಡಿದೆ.

ಕೊರೋನಾ ಸೋಂಕಿನಿಂದ ಪಾರಾದ ವ್ಯಕ್ತಿಗೆ ಇತರರಿಂದ ವೈರಸ್ ವ್ಯಾಪಿಸದ ರೀತಿಯಲ್ಲಿ ರೋಗ ನಿರೋಧಕ ಶಕ್ತಿ ಬಂದಿರುತ್ತದೆ. ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದ ಪ್ಲಾಸ್ಮಾದಿಂದ ಇತರರಲ್ಲಿ ಬಂದಿರುವ ಕೊರೋನಾ ಸೋಂಕನ್ನು ನಿವಾರಿಸಬಹುದು ಎಂದು ವೈದ್ಯಕೀಯ ವಿಜ್ಞಾನ ಲೋಕ ಹೇಳುತ್ತಿದೆ. ಭಾರತದಲ್ಲಿ ಕ್ಲಿನಿಕಲ್ ಟ್ರಯಲ್ಸ್ ಶುರುವಾಗುವ ಹಂತದಲ್ಲಿದೆ. ಆದರೆ, ದಕ್ಷಿಣ ಕೊರಿಯಾದಲ್ಲಿ ಕೊರೋನಾದಿಂದ ಚೇತರಿಸಿಕೊಂಡವರಿಗೆ ಮತ್ತೆ ಕೊರೋನಾ ಸೋಂಕು ವ್ಯಾಪಿಸುತ್ತಿರುವುದು ಈ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುವ ಸಾಧ್ಯತೆ ಇದೆ.

ಯಾಕೆ ಹೀಗೆ ಆಗುತ್ತಿದೆ ಅನ್ನೋದು ಅರ್ಥವೇ ಆಗುತ್ತಿಲ್ಲ ಎಂದು ಕೊರಿಯಾದ ಸಾಂಕ್ರಾಮಿಕ ರೋಗಗಳ ವಿಭಾಗದ ನಿರ್ದೇಶಕ ಜಿಯಾಂಗ್ ಇಯುನ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವೈದ್ಯರು, ತಜ್ಞರು ಸಂಶೋಧನೆ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಒಮ್ಮೆ ಕೊರೋನಾ ಸೋಂಕಿಗೆ ತುತ್ತಾದವರಲ್ಲಿ ಆಂಟಿ ಬಾಡಿಸ್ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ಇಷ್ಟು ದಿನ ಭಾವಿಸಿದ್ದೆವು. ಆದರೆ, ಈಗಿನ ಬೆಳವಣಿಗೆ ಆತಂಕಕಾರಿ ಎನ್ನುತ್ತಾರೆ ಜಿಯಾಂಗ್.

ದಕ್ಷಿಣ ಕೊರಿಯಾದಲ್ಲಿ ಕೊರೋನಾ ಸೋಂಕಿನಿಂದ ಸರಿಸುಮಾರು 7 ಸಾವಿರ ಮಂದಿ ಚೇತರಿಸಿಕೊಂಡಿದ್ದಾರೆ. ಈ ಪೈಕಿ ಇದೀಗ 91 ಮಂದಿಯಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಬಹುಷಃ ವೈರಸ್ ಮತ್ತೆ ಕ್ರಿಯಾಶೀಲ ಆಗಿರಬಹುದು. ಇದಕ್ಕೆ ಕಾರಣಗಳೇನು ಎನ್ನುವುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಕೊರಿಯನ್ ವಿವಿಯ ಅಂಟು ರೋಗಗಳ ಪ್ರೊಫೆಸರ್ ಕಿಮ್ ವು ಜೂ ಹೇಳುತ್ತಾರೆ.

ಕೊರೋನಾ ಪತ್ತೆ ಪರೀಕ್ಷೆಗಳಲ್ಲಿ ವರದಿಗಳೆ ತಪ್ಪಾಗಿರಬಹುದು ಎಂಬ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಮತ್ತೆ ವೈರಸ್ ಕಂಡು ಬಂದರೂ, ಅದು ಬೇರೆಯವರಿಗೆ ಹರಡುವಷ್ಟು ಶಕ್ತಿಶಾಲಿ ಆಗಿರುವುದಿಲ್ಲ. ಪ್ರಮಾದಕಾರಿಯಾಗಿ ಈ ಸೋಂಕು ಮಾರ್ಪಡುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ವೈದ್ಯಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದೇನೇ ಇರಲಿ, 2ನೇ ಬಾರಿ ಕೊರೋನಾ ವೈರಸ್ ದಾಳಿ ವಿಚಾರವನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಲೇಬೇಕು.

LEAVE A REPLY

Please enter your comment!
Please enter your name here