ಹೊಸ ವರ್ಷದ ಮೊದಲ ದಿನ ಮೋದಿಗೆ ಸಮಾಧಾನದ ಸುದ್ದಿ..! – ಏನದು..?

ಹೊಸ ವರ್ಷದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ತುಸು ನೆಮ್ಮದಿ ಸುದ್ದಿ ಸಿಕ್ಕಿದೆ. ಹೌದು ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದ್ದು, 2019 ರ ಕೊನೆಯ ತಿಂಗಳಾಗಿರುವ ಡಿಸೆಂಬರ್‌ನಲ್ಲಿ 1,03,184 ಕೋಟಿ ರೂಪಾಯಿ ಖಜಾನೆ ಸೇರಿದೆ.

ಆದರೆ ಕಳೆದ ತಿಂಗಳಿಗೆ ಹೋಲಿಸಿದ್ರೆ 308 ಕೋಟಿ ರೂಪಾಯಿಯಷ್ಟು ಕಡಿಮೆ ತೆರಿಗೆ ಸಂಗ್ರಹವಾಗಿದೆ. 2019 ರ ನವೆಂಬರ್‌ನಲ್ಲಿ 1,03,492 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಸತತ 2 ತಿಂಗಳು ತೆರಿಗೆ ಸಂಗ್ರಹ ಲಕ್ಷ ಕೋಟಿ ರೂಪಾಯಿ ಗಡಿ ದಾಟಿದ್ದು ಆದಾಯದ ಕೊರತೆಗೆ ಒಳಗಾಗಿರುವ ಮೋದಿ ಸರ್ಕಾರಕ್ಕೆ ಸಮಾಧಾನ ನೀಡಿದೆ.

ಡಿಸೆಂಬರ್‌ನಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಇದರಲ್ಲಿ 19,962 ಕೋಟಿ ರೂಪಾಯಿ ಕೇಂದ್ರದ ಪಾಲಿನ ಸರಕು ಮತ್ತು ಸೇವಾ ತೆರಿಗೆ ಆಗಿದ್ದರೆ, ರಾಜ್ಯ ಸರಕು ಮತ್ತು ಸೇವಾ ತೆರಿಗೆ 26, 792 ಕೋಟಿ ರೂಪಾಯಿ. ಕೇಂದ್ರೀಕೃತ ಜಿಎಸ್‌ಟಿ ತೆರಿಗೆ 48,099 ಕೋಟಿ ರೂಪಾಯಿ (ಆಮದು ವೇಳೆ ಸಂಗ್ರಹಿಸಲಾದ ತೆರಿಗೆ ಸೇರಿ) ಮತ್ತು ಸೆಸ್‌ 8,311 ಕೋಟಿ ರೂಪಾಯಿ ಸಂಗ್ರಹವಾಗಿದೆ.

2018 ರಲ್ಲಿ ಡಿಸೆಂಬರ್‌ನಲ್ಲಿ ಸಂಗ್ರಹವಾಗಿದ್ದ ಜಿಎಸ್‌ಟಿ ತೆರಿಗೆ ಮೊತ್ತ 97,276 ಕೋಟಿ ರೂಪಾಯಿ. ಕಳೆದ ತಿಂಗಳು ಈಶಾನ್ಯ ರಾಜ್ಯ ಅರುಣಾಚಲಪ್ರದೇಶದಲ್ಲಿ ದುಪ್ಪಟ್ಟು ಅಂದರೆ ನವೆಂಬರ್‌ನ 26 ಕೋಟಿ ತೆರಿಗೆ ಸಂಗ್ರಹಕ್ಕೆ ಹೋಲಿಸಿದ್ರೆ 58 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಕೇವಲ 1 ಕೋಟಿ ರೂಪಾಯಿ ಜಿಎಸ್‌ಟಿ ವಸೂಲಿ ಆಗಿದ್ದು, ಜಾರ್ಖಂಡ್‌ನಲ್ಲಿ 1,943 ಕೋಟಿ ರೂಪಾಯಿ ಸಂಗ್ರಹವಾಗಿದೆ.

LEAVE A REPLY

Please enter your comment!
Please enter your name here