ಹೊರರಾಜ್ಯದ ಕಾರ್ಮಿಕರಿಗೆ ವಿಶೇಷ ರೈಲು ಮತ್ತೆ ಆರಂಭ – ಮತ್ತೆ ಯಡಿಯೂರಪ್ಪ ಸರ್ಕಾರದ ಯೂಟರ್ನ್‌

ಕೊರೋನಾ ನಿಯಂತ್ರಣ ವಿಚಾರದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಗೊಂದಲದಲ್ಲಿದೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊರರಾಜ್ಯಗಳ ವಲಸೆ ಕಾರ್ಮಿಕರನ್ನು ವಿಶೇಷ ರೈಲುಗಳಲ್ಲಿ ಅವರ ತವರು ರಾಜ್ಯಗಳಿಗೆ ಕಳುಹಿಸಿಕೊಡುವ ನಿರ್ಧಾರದಿಂದ ಮೊನ್ನೆ ದಿಢೀರ್‌ ಹಿಂದೆ ಸರಿದು ವಿಶೇಷ ಶ್ರಮಿಕ್‌ ರೈಲುಗಳ ಅಗತ್ಯವಿಲ್ಲವೆಂದು ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದ ಸರ್ಕಾರ ಈಗ ಮತ್ತೆ ರೈಲುಗಳನ್ನು ಬಿಡುವ ನಿರ್ಧಾರ ಕೈಗೊಂಡಿದೆ.

ಬಿಹಾರ, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್‌, ಮಣಿಪುರ, ಪಶ್ಚಿಮ ಬಂಗಾಳ, ಒಡಿಶಾ ರಾಜ್ಯಗಳಿಗೆ ವಿಶೇಷ ರೈಲುಗಳಲ್ಲಿ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡಲು ಒಪ್ಪಿಗೆ ನೀಡುವಂತೆ ಕೋರಿ ಕರ್ನಾಟಕ ಸರ್ಕಾರ ಪತ್ರ ಬರೆದಿದೆ.

ಈ ರಾಜ್ಯಗಳ ಪೈಕಿ ಬಿಹಾರವಷ್ಟೇ ತನ್ನ ಕಾರ್ಮಿಕರನ್ನು ಸ್ವೀಕರಿಸಲು ಒಪ್ಪಿಕೊಂಡಿದ್ದು, ನಾಳೆಯಿಂದ ದಿನಕ್ಕೆ ಎರಡು ರೈಲುಗಳು ಮೇ ೧೫ರವರೆಗೆ ಸಂಚರಿಸಲಿವೆ.

ಉಳಿದ ರಾಜ್ಯಗಳಿಂದ ಇನ್ನಷ್ಟೇ ಒಪ್ಪಿಗೆ ನೀಡಬೇಕಿದೆ.

ಈ ಮೂಲಕ ಊರಿಗೆ ಹೋಗಬೇಕೋ ಎನ್ನುವ ಧಾವಂತದಲ್ಲಿರುವ ಅನ್ಯ ರಾಜ್ಯಗಳ ಕಾರ್ಮಿಕರ ಅಲೆದಾಟಕ್ಕೆ ಕೊನೆಗೂ ಮುಕ್ತಿ ಸಗಲಿದೆ.

ಯಡಿಯೂರಪ್ಪ ಸರ್ಕಾರ ಕೆಎಸ್‌ಆರ್‌ಟಿಸಿಯಲ್ಲಿ ವಲಸೆ ಕಾರ್ಮಿಕರನ್ನು ಕಳುಹಿಸುವ ವಿಷಯದಲ್ಲೂ ಇದೇ ರೀತಿ ನಡೆದುಕೊಂಡಿತ್ತು. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಕ್ಕೆ ದುಪ್ಪಟ್ಟು ದರ ವಸೂಲಿ ಮಾಡಿದ್ದ ಸರ್ಕಾರ ನಂತರ ಸಾಮಾನ್ಯ ದರ ವಸೂಲಿ ಮಾಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ತನ್ನ ಬಸ್‌ ಸೇವೆಯನ್ನು ದಿಢೀರ್‌ ಸ್ಥಗಿತಗೊಳಿಸಿತ್ತು. ಮರು ದಿನ ಉಚಿತ ಬಸ್‌ ಸೇವೆಯನ್ನು ಆರಂಭಿಸಿತು.

LEAVE A REPLY

Please enter your comment!
Please enter your name here