ಹೊರ ರಾಜ್ಯಗಳಿಂದ ಬಂದವರ ಮನೆಗಳನ್ನು ಸೀಲ್‌ಡೌನ್ ಮಾಡಲು ಸರ್ಕಾರದ ಚಿಂತನೆ – ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್

ಹೊರರಾಜ್ಯಗಳಿಂದ ಬಂದಿರುವ ವಲಸಿಗರ ಕಾರಣದಿಂದ ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಅಂತಹ ವಲಸಿಗರ ಮನೆಗಳನ್ನು ಮಾತ್ರ ಸೀಲ್‌ಡೌನ್ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಸಂಪೂರ್ಣ ಪ್ರದೇಶವನ್ನು ಲಾಕ್‌ಡೌನ್ ಅಥವಾ ಸೀಲ್‌ಡೌನ್ ಮಾಡುವ ಬದಲಿಗೆ ಸೋಂಕಿತ/ಶಂಕಿತ ವ್ಯಕ್ತಿಗಳ ಮನೆಗಳನ್ನು ಸೀಲ್‌ಡೌನ್ ಮಾಡುವುದರಿಂದ ಸೋಂಕು ಹರಡುವಿಕೆಯನ್ನು ನಿಯಂತ್ರಿಸಬಹುದಲ್ಲದೆ ಇತರ ಚಟುವಟಿಕೆಗಳಿಗೂ ಅವಕಾಶವಾಗುತ್ತದೆ ಎಂದು ತಿಳಿಸಿದರು. ಕಳೆದ ಕೆಲವು ದಿನಗಳಿಂದ ಸೀಲ್‌ಡೌನ್ ಮಾರ್ಗಸೂಚಿಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದ್ದು ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್ ಉಸ್ತುವಾರಿ ವಹಿಸಿಕೊಂಡ ನಂತರ ಜಿಲ್ಲೆಗೆ ಪ್ರಥಮಬಾರಿಗೆ ಭೇಟಿ ನೀಡಿದ ಸಚಿವ ಸುಧಾಕರ್ ಅವರು ಜಿಲ್ಲೆಯ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಮುಂಬಯಿಂದ ವಲಸೆ ಬಂದಿರುವವರ ಕಾರಣದಿಂದಾಗಿ ಉಡುಪಿಯಲ್ಲಿ ಸೋಂಕು ಹೆಚ್ಚಾಗಿದ್ದು ಮಂಗಳವಾರ ಒಂದೇ ದಿನ 150 ಪ್ರಕರಣಗಳು ದಾಖಲಾಗಿವೆ. ನಾಗರಿಕರು ಆತಂಕಪಡುವುದು ಬೇಡ. ಸರ್ಕಾರದ ವತಿಯಿಂದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೋವಿಡ್ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ವಲಸೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಂದು ಸಚಿವರು ತಿಳಿಸಿದರು.

ಉಡುಪಿಯಲ್ಲಿ ಮತ್ತೊಂದು ಕೋವಿಡ್ ಪರೀಕ್ಷಾ ಪ್ರಯೋಗಾಲಯ

ಉಡುಪಿಯಲ್ಲಿ ಈಗಾಗಲೇ ಒಂದು ಪ್ರಯೋಗಾಲಯ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಂದು ಪ್ರಯೋಗಾಲಯ ಸ್ಥಾಪಿಸುವುದಾಗಿ ಸಚಿವರು ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಹಸಿರು ವಲಯದಲ್ಲಿದ್ದ ಉಡುಪಿ ಜಿಲ್ಲೆ ಇಂದು ಬೆಂಗಳೂರನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿದೆ. ಜಿಲ್ಲೆಯನ್ನು ಮತ್ತೆ ಹಸಿರು ವಲಯಕ್ಕೆ ಕೊಂಡೊಯ್ಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಸಾರ್ವಜನಿಕರು ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಹೇಳಿದರು.

ಕೊರೋನ ಸಾಮಾಜಿಕ ಪಿಡುಗು ಅಲ್ಲ

ಕೊರೋನ ಸೋಂಕಿತರನ್ನು ಕಳಂಕಿತರಂದು ಕಾಣುವುದು ಸರಿಯಲ್ಲ. ಇದು ಸಾಮಾಜಿಕ ಪಿಡುಗಲ್ಲ. ಇದಕ್ಕಿಂತಲೂ ಹಿಂದೆ ಅಪಾಯಕಾರಿ ವೈರಸ್ ಗಳು ದಾಳಿಮಾಡಿರುವುದು ಇದೆ. ಆದರೆ ಕೊನೆಯಲ್ಲಿ ಗೆಲುವು ನಮ್ಮದೇ ಆಗಿರುತ್ತದೆ. ನಿನ್ನೆ ತಾನೆ ಹುಬ್ಬಳ್ಳಿಯಲ್ಲಿ ಕೊರೋನ ಸೋಂಕಿತ ವ್ಯಕ್ತಿಯನ್ನು ಪ್ಲಾಸ್ಮಾ ಚಿಕಿತ್ಸೆಯಿಂದ ಗುಣಪಡಿಸಲಾಗಿದೆ. ಲಸಿಕೆ ಕಂಡುಹಿಡಿಯುವವರೆಗೆ ಕೊರೋನಾಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಾರ್ ರೂಂ, ಡ್ಯಾಶ್ ಬೋರ್ಡ್, ಟೆಲಿ ಐಸಿಯುನಂತಹ ಉಪಕ್ರಮಗಳಿಂದ ಚಿಕಿತ್ಸೆಗೆ ಅನುಕೂಲವಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಸರ್ಕಾರ ಕೊರೋನ ನಿಯಂತ್ರಿಸಲು ಕರ್ನಾಟಕದ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಅಗತ್ಯ ನೆರವುಗಳನ್ನು ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ಮಂಗಳೂರು ಏರ್‌ಪೋರ್ಟಿಗೆ ಮಾರ್ಗಸೂಚಿಗಳು

ದೇಶದ ಇತರೆ ಭಾಗಗಳಿಂದ ಮಂಗಳೂರಿಗೆ ವಿಮಾನ ಸಂಚಾರ ಆರಂಭವಾಗಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಅನ್ವಯವಾಗುವ ನಿಯಮಗಳು ಮಂಗಳೂರು ವಿಮಾನ ನಿಲ್ದಾಣಕ್ಕೂ ಅನ್ವಯವಾಗಲಿವೆ ಎಂದು ಸಚಿವರು ತಿಳಿಸಿದರು. ಈ ಕುರಿತಂತೆ ಶೀಘ್ರದಲ್ಲೇ ಆದೇಶವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು.

ಐಸಿಎಂಆರ್ ಮಾರ್ಗಸೂಚಿಗಳನ್ನು ವಿಮಾನ ನಿಲ್ದಾಣದಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಆದೇಶ ನೀಡಲಾಗುವುದು ಎಂದು ಡಾ.ಸುಧಾಕರ್ ಹೇಳಿದರು. ಇದರ ಅನ್ವಯ ಪ್ರಯಾಣಿಕರು ಎರಡು ದಿನಗಳಷ್ಟೇ ಹಳೆಯದಾದ ಕೋವಿಡ್ ನೆಗೆಟಿವ್ ವರದಿಯನ್ನು ಏರ್‌ಪೋರ್ಟಿನಲ್ಲಿ ತೋರಿಸಬೇಕಾಗುವುದು. ನೆಗೆಟಿವ್ ಎಂದು ಖಚಿತವಾದರಷ್ಟೇ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದರು. ಇದರಿಂದ ಸೋಂಕು ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಎಂದು ಅವರು ಹೇಳಿದರು.

ಮುಜರಾಯಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ್, ಸುನೀಲ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here