ಹೊರರಾಜ್ಯಗಳಿಂದ ಕರಾವಳಿ ಜಿಲ್ಲೆಗಳಿಗೆ ಬರಲು ಅರ್ಜಿ ಸಲ್ಲಿಸಿದವರು ಎಷ್ಟು ಜನ ಗೊತ್ತಾ..?

ಮೇ 17ರವರೆಗೆ ಲಾಕ್‌ಡೌನ್‌ ಮುಂದುವರಿಕೆ ಆಗಿರುವ ಬೆನ್ನಲ್ಲೇ ಹೊರರಾಜ್ಯಗಳಲ್ಲಿರುವ ಕನ್ನಡಿಗರು ತಮ್ಮ ತಮ್ಮ ಜಿಲ್ಲೆಗಳಿಗೆ ವಾಪಸ್‌ ಆಗಲು ಬಯಸುತ್ತಿದ್ದಾರೆ. ಅದಕ್ಕಾಗಿ ರಾಜ್ಯ ಸರ್ಕಾರವೇ ಸೂಚಿಸಿರುವಂತೆ ಬರಲು ಅನುಮತಿ ಕೋರಿ ಅರ್ಜಿಗಳನ್ನೂ ಸಲ್ಲಿಸಿದ್ದಾರೆ.

ಹೀಗೆ ಅರ್ಜಿ ಸಲ್ಲಿಸಿದವರ ಹೊರರಾಜ್ಯದಲ್ಲಿರುವ ಕನ್ನಡಿಗರ ಸಂಖ್ಯೆ 56,622. ಇವರಲ್ಲಿ ಈಗಾಗಲೇ 4,058 ಮಂದಿಗೆ ಕರ್ನಾಟಕಕ್ಕೆ ವಾಪಸ್‌ ಆಗಲು ಅನುಮತಿ ನೀಡಲಾಗಿದೆ. 52,075 ಮಂದಿ ಅರ್ಜಿ ಇನ್ನೂ ವಿಲೇವಾರಿಗೆ ಬಾಕಿ ಇದೆ. 479 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದ್ದು ಅವರಿಗೆ ಕರ್ನಾಟಕ್ಕೆ ವಾಪಸ್‌ ಆಗಲು ಅನುಮತಿ ನೀಡಿಲ್ಲ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ ಹೋಗಿ ಬೇರೆ ಕಡೆ ನೆಲೆಸಿರುವವರೂ ತಾವು ತಮ್ಮೂರಿಗೆ ವಾಪಸ್‌ ಆಗಲು ಅನುಮತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆ ಮೂಲದ 2,721 ಮಂದಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿ ಜಿಲ್ಲಾಧಿಕಾರಿಗಳ ಬಳಿಯೇ ವಿಲೇವಾರಿಗೆ ಬಾಕಿ ಇದೆ. ಇವರಲ್ಲಿ ಯಾರ ಅರ್ಜಿಯೂ ತಿರಸ್ಕೃತಗೊಂಡಿಲ್ಲ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಗೆ ವಾಪಸ್‌ ಆಗಲು 2,924 ಮಂದಿ ಅರ್ಜಿ ಸಲ್ಲಿಸಿದ್ದು ಅವರ ಅರ್ಜಿಯೂ ಜಿಲ್ಲಾಧಿಕಾರಿಗಳ ಬಳಿಯೇ ವಿಲೇವಾರಿಗೆ ಬಾಕಿ ಇದೆ. ಇಲ್ಲೂ ಯಾರ ಅರ್ಜಿಯೂ ಇದುವರೆಗೆ ತಿರಸ್ಕೃತಗೊಂಡಿಲ್ಲ.

ಇತ್ತ, ಉತ್ತರ ಕನ್ನಡ ಜಿಲ್ಲೆಗೆ ವಾಪಸ್‌ ಆಗಲು 1,161 ಮಂದಿ ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 142 ಮಂದಿಗೆ ಅನುಮತಿ ನೀಡಲಾಗಿದ್ದು 16 ಮಂದಿಯ ಅರ್ಜಿಯನ್ನು ತಿರಸ್ಕಾರ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ 654 ಮತ್ತು ರಾಜ್ಯ ನೋಡಲ್‌ ಅಧಿಕಾರಿಗಳ ಬಳಿಕ 359 ಅರ್ಜಿ ವಿಲೇವಾರಿಗೆ ಬಾಕಿ ಇದೆ.

ಮೂರು ಕರಾವಳಿ ಜಿಲ್ಲೆಗಳಿಗೆ ಒಟ್ಟು 5 ಸಾವಿರಕ್ಕೂ ಅಧಿಕ ಮಂದಿ ಹೊರರಾಜ್ಯಗಳಿಂದ ವಾಪಸ್‌ ಆಗಲು ಕಾತರರಾಗಿದ್ದಾರೆ. ಹೀಗೆ ಹೊರರಾಜ್ಯಗಳಿಂದ ಬರುವವರನ್ನು ನೇರವಾಗಿ ಅವರ ಮನೆಗಳಿಗೆ ಹೋಗಲು ಬಿಡಲ್ಲ. ಬದಲಿಗೆ ಸರ್ಕಾರ ಸೂಚಿಸಿದ ಕಡೆಗಳಲ್ಲಿ 14ದಿನಗಳ ಮಟ್ಟಿಗೆ ಕಡ್ಡಾಯವಾಗಿ ಕ್ವಾರಂಟೈನ್‌ಗೆ ಒಳಪಡಬೇಕಾಗುತ್ತದೆ.

LEAVE A REPLY

Please enter your comment!
Please enter your name here