ಹೊರಟು ಹೋಗುತ್ತಿರುವ 2019ಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು..?

ಪ್ರಧಾನಿ ನರೇಂದ್ರ ಮೋದಿ ಹೊಸ ದಶಮಾನಕ್ಕೆ ಸ್ವಾಗತ ಕೋರಿದ್ದಾರೆ. 2020ಕ್ಕೆ ಸ್ವಾಗತ ಕೋರಿರುವ ನಮೋ 2019ರಲ್ಲಿ ತಮ್ಮ ಸರಕಾರದ ಸಾಧನೆಗಳು ಮತ್ತು ಭವಿಷ್ಯದ ಗುರಿಗಳನ್ನು ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರಧಾನಿ ಮೋದಿ ಉಲ್ಲೇಖಿಸಿದ ಈ ವರ್ಷದ ಸಾಧನೆಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರ ಮೇಲೆ ಕೈಗೊಂಡಿದ್ದ ಐತಿಹಾಸಿಕ ಸರ್ಜಿಕಲ್ ದಾಳಿ. ನೀವು ತಪ್ಪು ಮಾಡಿಬಿಟ್ಟಿರಿ ಎಂದು ಪಾಕಿಸ್ತಾನಕ್ಕೆ ಕೊಟ್ಟಿದ್ದ ಎಚ್ಚರಿಕೆಯನ್ನು ಮೋದಿ ತಮ್ಮ ವಿಡಿಯೋದಲ್ಲಿ ಹಾಕಿಕೊಂಡಿದ್ದಾರೆ.

ಎರಡನೆಯದ್ದು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಪಿವಿ ಸಿಂಧು ಚಿನ್ನದ ಪದಕವನ್ನು ಕೊರಳಿಗೆ ಏರಿಸಿಕೊಂಡಿದ್ದು, ಐತಿಹಾಸಿಕ ಕುಂಭಮೇಳದಲ್ಲಿ 24 ಕೋಟಿ ಪ್ರವಾಸಿಗರು ಪಾಲ್ಗೊಂಡಿದ್ದು, ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇಕಡ 10ರಷ್ಟು ಮೀಸಲಾತಿ, ತ್ರಿವಳಿ ತಲಾಕ್ ರದ್ಧತಿ ಕಾನೂನು ಜಾರಿಯನ್ನು ಮೋದಿ ತಮ್ಮ ಸಾಧನೆಗಳ ಪಟ್ಟಿಯಲ್ಲಿ ಹೇಳಿಕೊಂಡಿದ್ದಾರೆ.

ಚೌಕಿದಾರ್ ಚೋರ್ ಎಂದು ತಾವು ನೀಡಿದ್ದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೇಳಿದ್ದು, ಲೋಕಸಭಾ ಚುನಾವಣೆಯಲ್ಲಿ ಚೌಕಿದಾರ್ ಚಮತ್ಕಾರ, 5 ಲಕ್ಷದವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಕೊಟ್ಟಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮುಖಾಂತರ ಪ್ರತಿ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿ ಹಣಕಾಸಿನ ನೆರವು, ಶತ್ರು ದೇಶದ ಸ್ಯಾಟಲೈಟ್ ಗಳನ್ನು ಹೊಡೆದುರುಳಿಸಬಹುದಾದ ಕ್ಷಿಪಣಿಯ ಯಶಸ್ವೀ ಪರೀಕ್ಷಾರ್ಥ ಪ್ರಯೋಗ, ಮೊದಲ ಸೇಮಿ ಹೈ ಸ್ಪೀಡ್ ರೈಲಿನ ಉದ್ಘಾಟನೆ ತಮ್ಮ ಸಾಧನೆಯ ಪಟ್ಟಿಯಲ್ಲಿ ಮೋದಿ ಸೇರಿಸಿಕೊಂಡಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370 ರದ್ದತಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆ, ನೌಕಾದಳದಲ್ಲಿ ಮೊದಲ ಮಹಿಳಾ ಪೈಲೆಟ್ ಸೇರ್ಪಡೆ, ದಶಮಿಯಂದು ರಫೆಲ್ ಯುದ್ಧ ವಿಮಾನದ ಸ್ವೀಕಾರ ಮೋದಿ ವಿಡಿಯೋದಲ್ಲಿ ಕಾಣಿಸಿಕೊಂಡಿದೆ.

ಅಮೆರಿಕ ಪ್ರವಾಸದ ವೇಳೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ನಡೆದಿದ್ದ ಐತಿಹಾಸಿಕ ಹೌಡಿ ಮೋದಿ ರ್ಯಾಲಿ, ಅರಬ್ ದೇಶದಿಂದ ಸಿಕ್ಕ ಅಪರೂಪದ ಪುರಸ್ಕಾರ, ಸ್ವಚ್ಛ  ಭಾರತ ಅಭಿಯಾನಕ್ಕಾಗಿ ಸಿಕ್ಕ ಗ್ಲೋಬಲ್ ಗೋಲ್ಕೀಪರ್ ಅವಾರ್ಡ್, 3000 ಹೊಸ ನವೋದ್ಯಮ ಗಳ ಸ್ಥಾಪನೆ, 8 ಕೋಟಿ ಎಲ್ಪಿಜಿ ಸಿಲಿಂಡರ್ಗಳ ವಿತರಣೆ, ದೇಶಾದ್ಯಂತ ಕೇವಲ ಬಂದು ಬಾರಿಗೆ ಬಳಸಬಹುದಾದ ಪ್ಲಾಸ್ಟಿಕ್ ಗಳ ನಿಷೇಧ, ಸ್ವಚ್ಛ ಗಂಗಾ ಸ್ವಚ್ಛ ಭಾರತ ಅಭಿಯಾನ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋದಲ್ಲಿ ಸ್ಥಾನಪಡೆದಿದೆ.

ಅಯೋಧ್ಯೆ ರಾಮ ಮಂದಿರ ತೀರ್ಪು, ವೈಷ್ಣೋದೇವಿ ದರ್ಶನಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ಸೌಲಭ್ಯ ಕೂಡ ಪಟ್ಟಿಯಲ್ಲಿದೆ.

ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿರುವ ನಾಗರಿಕ ತಿದ್ದುಪಡಿ ಕಾಯ್ದೆಯ ಲಾಭ ಪಡೆದಿರುವ ನಿರಾಶ್ರಿತ ನೆರೆ ರಾಷ್ಟ್ರದ ಪ್ರಜೆಗಳ ವಿಡಿಯೋವನ್ನು ಕೂಡ ಮೋದಿ ಸೇರಿಸಿದ್ದಾರೆ.

ದೆಹಲಿಯಲ್ಲಿ ಸ್ಥಾಪನೆಗೊಂಡಿರುವ ದೇಶದ ಮೊದಲ ಯುದ್ಧ ಸ್ಮಾರಕ, ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಾಯಿ ಪಟೇಲ್ ಜಯಂತಿಯಂದು ದೇಶಾದ್ಯಂತ ಏಕತಾ ದಿವಸ ಆಚರಣೆ ಪ್ರಧಾನಿ ಮೋದಿ ಅವರ ಪ್ರಮುಖ ಸಾಧನೆಯಾಗಿದೆ.

2020ರ ಹೊಸ ದಶಮಾನದ ಗುರಿಗಳನ್ನು ಪ್ರಧಾನಿ ನರೇಂದ್ರ ಮೋದಿ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದಾರೆ. 2024ರ ವೇಳೆಗೆ ದೇಶದ ಎಲ್ಲ ಮನೆ ಮನೆಗಳಿಗೂ ನಲ್ಲಿಯ ಮುಖಾಂತರ ನೀರು ಸರಬರಾಜು, ಚಂದ್ರನಲ್ಲಿಗೆ ಮೊದಲ ಬಾರಿಗೆ ವಿಜ್ಞಾನಿಗಳನ್ನು ಕಳುಹಿಸುವ ಭಾರತದ ಕನಸನ್ನು ನನಸಾಗಿಸುವುದು, ಇದುವರೆಗೂ ಯಾವುದು ಸರಿಯಾಗಿಲ್ಲವೋ ಅದನ್ನು ಸರಿ ಮಾಡಿ ತೋರಿಸಬೇಕಿದೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಹೀಗೆ ಹಳೆ ಸಾಧನೆಗಳು ಮತ್ತು ಹೊಸ ಲಕ್ಷ್ಯ ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ 2019ಕ್ಕೆ ವಿದಾಯ ಹೇಳಿ 2020ನ್ನು ಸ್ವಾಗತಿಸಿ ದೇಶದ ಜನತೆಗೆ ಶುಭ ಕೋರಿದ್ದಾರೆ.

LEAVE A REPLY

Please enter your comment!
Please enter your name here