ಹೈಕೋರ್ಟ್​ನ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ ಪಡೆದ ಪಿ.ಪಿ.ಹೆಗ್ಡೆ

ಬೆಂಗಳೂರು : ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯವಾದಿಯಾಗಿ ಖ್ಯಾತ ವಕೀಲ ಪಿ.ಪಿ.ಹೆಗ್ಡೆಯವರನ್ನು ಹೈಕೋರ್ಟ್​ ನ್ಯಾಯಮೂರ್ತಿಗಳು ಪದೋನ್ನತಿಗೊಳಿಸಿದ್ದಾರೆ.

ಪಿ.ಪಿ.ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಮಂಗಳೂರಿನ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ ಮತ್ತು ಎಲ್.ಎಲ್.ಎಮ್ ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು. ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ಪಿ.ಪಿ.ಹೆಗ್ಡೆಯವರು ಮಂಗಳೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ತಮ್ಮ ಕಚೇರಿಗಳನ್ನು ಹೊಂದಿದ್ದಾರೆ.

ಸುಪ್ರಿಂಕೋರ್ಟ್​​ನಲ್ಲಿನ ಪ್ರಕರಣಗಳಲ್ಲಿಯೂ ಇವರು ವಾದ ಮಂಡಿಸುತ್ತಿದ್ದಾರೆ. ಹಲವಾರು ಕ್ಲಿಷ್ಟಕರ ಕೇಸುಗಳನ್ನು ಸಮರ್ಥವಾಗಿ ವಾದಿಸಿ ಗಮನ ಸೆಳೆದಿದ್ದಾರೆ. ಇವರು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್​ರಾವ್ ಅವರ ಭ್ರಷ್ಠಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಇವರ ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ನ್ಯಾ.ಶಿವರಾಜ್ ಪಾಟೀಲ್ ಮತ್ತು ನ್ಯಾ.ಸಂತೋಷ್ ಹೆಗ್ಡೆಯವರು ಸಹಾಯಕರಾಗಿದ್ದರು.

ಅಷ್ಠೇ ಅಲ್ಲದೇ, ರಾಜ್ಯ ವಕೀಲರ ಪರಿಷತ್​ನಲ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತ್ತು ಮಾಡಿದ್ದಲ್ಲದೆ, ವಕೀಲರು ವಕೀಲಿ ವೃತ್ತಿ ಬಿಟ್ಟು ಬೇರೆ ವೃತ್ತಿ ಮಾಡದಂತೆ ನಿಯಮ ಮಾಡಿ ಅದನ್ನು ಪರಿಣಾಮಕಾರಿಯಾಗಿ ಜಾರಿ ತಂದಿದ್ದರು.

ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಇವರು ಅಂಕಣಗಳ ಮೂಲಕವೂ ಜನಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.

LEAVE A REPLY

Please enter your comment!
Please enter your name here