ಹೆರಿಗೆ ಶಸ್ತ್ರಚಿಕಿತ್ಸೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದೊಳಗೆ ಬಿಟ್ಟಿರುವ ಅಘಾತಕಾರಿ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯದಿಂದ ಈ ಪ್ರಮಾದ ನಡೆದಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಥಾರ್ಪಾರ್ಕರ್ ಜಿಲ್ಲೆಯ ಗ್ರಾಮವೊಂದರ 32 ವರ್ಷದ ಹಿಂದೂ ಮಹಿಳೆಯೊಬ್ಬರು ಹೆರಿಗೆಗೆ ಭಾನುವಾರ ಸಮೀಪದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಮಹಿಳಾ ವೈದ್ಯರಿಲ್ಲದ ಕಾರಣ ಅನುಭವಿ ಸಿಬ್ಬಂದಿಯೊಬ್ಬರು ತಾವೇ ಶಸ್ತ್ರಚಿಕಿತ್ಸೆ ನಡೆಸಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಜಮ್ಶೊರೊದಲ್ಲಿರುವ ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್ನ ಸ್ತ್ರೀರೋಗ ಶಾಸ್ತ್ರ ಘಟಕದ ಮುಖ್ಯಸ್ಥ ರಾಹೀಲ್ ಸಿಕಂದರ್ ತಿಳಿಸಿದ್ದಾರೆ.
ವೈದ್ಯರು ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಗರ್ಭದೊಳಗೆ ಬಿಟ್ಟಿದ್ದರು. ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾದ ಕೂಡಲೇ ಆಕೆಯನ್ನು ಮಿಥಿಯದ ಆಸ್ಪತ್ರೆಯೊಂದಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಇದೇ ವೇಳೆ ಮಹಿಳೆಯ ಕುಟುಂಬಸ್ಥರು ನವಜಾತ ಶಿಶುವಿನ ಉಳಿದ ದೇಹವನ್ನು (ಕತ್ತರಿಸಿದ ತಲೆ) ಗರ್ಭದಿಂದ ಹೊರತೆಗೆದು ತಾಯಿಯ ಜೀವ ಉಳಿಸುವಂತೆ ವೈದ್ಯರಲ್ಲಿ ಮನವಿ ಮಾಡಿದ್ದಾರೆ.
ಮಗುವಿನ ತಲೆ ಒಳಗೆ ಸಿಕ್ಕಿಹಾಕಿಕೊಂಡಿದ್ದರಿಂದ ತಾಯಿಯ ಗರ್ಭಕೋಶ ನಾಶವಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವಿನ ತಲೆಯನ್ನು ಹೊರತೆಗೆದು ಆಕೆಯ ಜೀವವನ್ನು ಉಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ.
ತನಿಖೆಗೆ ಆದೇಶ: ವೈದ್ಯರ ನಿರ್ಲಕ್ಷ್ಯ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆ ಸಿಬ್ಬಂದಿಯನ್ನು ತನಿಖೆಗೆ ಒಪಡಿಸುವಂತೆ ಆದೇಶಿಸಲಾಗಿದೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ.ಜುಮಾನ್ ಬಹೋಟೊ ತಿಳಿಸಿದ್ದಾರೆ.
ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಸ್ತ್ರೀರೋಗ ತಜ್ಞರು ಮತ್ತು ಮಹಿಳಾ ಸಿಬ್ಬಂದಿಯ ಅನುಪಸ್ಥಿತಿ ಸೇರಿದಂತೆ ಸಮಸ್ಯೆಗಳ ಬಗ್ಗೆ ತನಿಖಾ ತಂಡ ಪರಿಶೀಲಿನೆ ನಡೆಸಲಿದೆ ಎಂದು ಜುಮಾನ್ ಹೇಳಿದ್ದಾರೆ.