ಹಿಂದೂಗಳ ಹೋಟೇಲ್‌ನಲ್ಲಿ ಹಲಾಲ್‌ ಬೋರ್ಡ್‌ ಇದ್ದರೆ ಹೋಗ್ಬೇಡಿ – ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ‌ರ ವಿವಾದಿತ ಹೇಳಿಕೆ

ಹಿಂದೂಗಳ ಯಾವುದೇ ಹೋಟೆಲ್ ಗಳಲ್ಲಿ ʼಹಲಾಲ್ʼ ಎಂಬ ಬೋರ್ಡ್ ಇದ್ದರೆ ಅಥವಾ ನೀವು ಖರೀದಿಸುವ ಯಾವುದೇ ಆಹಾರದ ಪಟ್ಟಣದ ಮೇಲೆ ಹಲಾಲ್ ಎಂದು ಬರೆದಿದ್ದರೆ ಅದು ಮುಸಲ್ಮಾನರ ಶರಿಯತ್ ಕಾನೂನು ಪಾಲಿಸುವವರಿಗೆ ಮಾತ್ರ; ಹಿಂದೂಗಳಿಗೆ ಅನ್ವಯವಾಗುವುದಿಲ್ಲ. ಹಿಂದೂಗಳು ಇವುಗಳನ್ನು ಬಹಿಷ್ಕರಿಸಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ.

ಹಲವಾರು ಹೋಟೆಲ್‌ಗಳ ಬೋರ್ಡ್‌ಗಳಲ್ಲಿ ‌ʼಹಲಾಲ್ʼ ಎಂದು ಬರೆದಿರುತ್ತದೆ. ʼಹಲಾಲ್ʼ ಎಂಬುವುದು ಮುಸ್ಲಿಮರ ನಂಬಿಕೆಯಾಗಿದ್ದು ಮುಸ್ಲಿಮರು ಹಲಾಲ್‌ ಮಾಡಿದ ಮಾಂಸವನ್ನು ತಿನ್ನಬೇಕು ಮತ್ತು ಮುಖಕ್ಕೆ ಮುಖ ಮಾಡಿ ಕುರಾನಿನ ವಿಧಿಯನ್ನು ಪಠಿಸಿ ಪ್ರಾಣಿಯನ್ನು ಮುಸ್ಲಿಮರೇ ವಧೆ ಮಾಡಬೇಕು. ಶರಿಯಾ ಪಾಲಿಸುವವನಾಗಿರಬೇಕೆಂದು ಹೇಳುತ್ತದೆ.

ಆದರೆ ಹಿಂದೂಗಳ ಹೋಟೇಲಿನಲ್ಲಿ ʼಹಲಾಲ್ʼ ಎಂದು ಬರೆದು ಮಾಡಿದ ಕುರಿ ಅಥವಾ ಕೋಳಿಯನ್ನು ಹಿಂದುಗಳಿಗೆ ತಿನ್ನಿಸುವುದು ಎಷ್ಟರ ಮಟ್ಟಿಗೆ ಸರಿ? ಇದು ಹಿಂದುಗಳ ಮೇಲೆ ಶರಿಯಾ ಕಾನೂನು ಹೇರುವ ಪರೋಕ್ಷ ಪ್ರಯತ್ನವಾಗಿದೆ ಮತ್ತು ಇದರಿಂದ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ಆಗುವುದಿಲ್ಲವೇ ಎಂದು ಕುಯಿಲಾಡಿ ಸುರೇಶ್ ನಾಯಕ್ ಪ್ರಶ್ನಿಸಿದ್ದಾರೆ.

ಏನಿದು ಹಲಾಲ್‌ ಮಾಂಸ?

ಇಸ್ಲಾಮ್ ಧರ್ಮಬದ್ಧವಾಗಿರುವ ಆಹಾರ ಕ್ರಮವೇ ಹಲಾಲ್. ಇಸ್ಲಾಮ್ ಧರ್ಮದಲ್ಲಿ ಪರಿಶುದ್ಧ ಆಹಾರವೆಲ್ಲವೂ ಹಲಾಲ್ ಎಂದು ಪರಿಗಣಿಸಲಾಗಿದೆ. ಪರಿಶುದ್ಧತೆ ಇಲ್ಲದ ಆಹಾರವು ಇಸ್ಲಾಮ್​ನಲ್ಲಿ ನಿಷಿದ್ಧ. ಮಾಂಸದ ವಿಚಾರಕ್ಕೆ ಬಂದರೆ ಹಂದಿ, ಮನುಷ್ಯ, ಹುಲಿ, ಸಿಂಹ ಇತ್ಯಾದಿ ಮಾಂಸಗಳು ನಿಷಿದ್ಧವಾಗಿವೆ. ಶರಿಯತ್‌ ಪ್ರಕಾರ ಕುರಿ, ಕೋಳಿ, ಒಂಟೆ, ದನ, ಮೀನು ಇತ್ಯಾದಿ ಪ್ರಾಣಿಗಳ ಮಾಂಸವು ಹಲಾಲ್ ಎನಿಸುತ್ತವೆ. ವಧಿಸುವ ಮುಂಚೆಯೇ ಸತ್ತಿದ್ದ ಪ್ರಾಣಿಗಳು, ವಧಿಸುವ ವೇಳೆ ರೋಗ, ಅನಾರೋಗ್ಯದಿಂದ ಬಳಸುತ್ತಿರುವ ಪ್ರಾಣಿಗಳನ್ನು ಮುಸ್ಲಿಮರು ತಿನ್ನುವಂತಿಲ್ಲ ಎಂದು ಶರಿಯತ್‌ ಹೇಳುತ್ತದೆ.

LEAVE A REPLY

Please enter your comment!
Please enter your name here