ಸ್ಯಾನಿಟೈಸರ್‌ ಬಳಕೆ ಹೇಗಿರಬೇಕು?

ಹ್ಯಾಂಡ್ ಸ್ಯಾನಿಟೈಸರ್ ಇತ್ತೀಚೆಗೆ ಬೆಳಕಿಗೆ ಬಂದ ಉತ್ಪನ್ನ. ಕೀಟಾಣುಗಳೊಂದಿಗೆ ಹೋರಾಡಿ ಸ್ವಚ್ಛತೆಯನ್ನು ಕಾಪಾಡಲು ಇರುವ ಒಂದು ಸರಳ ಸಾಧನವೂ ಹೌದು. ನೀರಿನ ಬಳಕೆಯಿಲ್ಲದೆಯೇ ಕೈಗಳನ್ನು ಸ್ವಚ್ಛಗೊಳಿಸಬಹುದಾದ ಈ ಉತ್ಪನ್ನ ಕೊರೋನಾ ಶುರುವಾದಾಗಿನಿಂದ ಇದೀಗ ಸ್ಯಾನಿಟೈಸರ್ ಇಲ್ಲದಿರುವ ಮನೆ, ಆಫೀಸ್‌ಗಳೇ ಇಲ್ಲವೇನೋ ಅನ್ನಿಸಿಬಿಟ್ಟಿದೆ.

ಹಾಗಾದರೆ ಈ ಸ್ಯಾನಿಟೈಸರ್‌ನ ಬಳಕೆ ಎಷ್ಟಿರಬೇಕು? ಬೇಕಾಬಿಟ್ಟಿಯಾಗಿ ಬಳಸುವುದರಿಂದ ಏನೇನು ಅಪಾಯಗಳಿವೆ ಎಂಬುವುದನ್ನು ನೋಡೋಣ.

ತಜ್ಞರು ಹೇಳುವ ಪ್ರಕಾರ ನಾವು ಈಗ ಬಳಕೆ ಮಾಡುವ ಆಲ್ಕೋಹಾಲ್‌ ಅಂಶವಿರುವ ಸ್ಯಾನಿಟೈಸರ್‌ ಶೇ.60 ರಿಂದ ಶೇ.70ರಷ್ಟುಮಾತ್ರ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳನ್ನು ನಾಶ ಮಾಡಬಲ್ಲದು. ಇದರಲ್ಲಿ ಆಲ್ಕೋಹಾಲ್‌ ಅಂಶ ಅಧಿಕವಾಗಿರುತ್ತದೆ. ಕೈ ತೊಳೆಯಲು ಸೋಪು ಮತ್ತು ನೀರು ಇಲ್ಲದಿದ್ದಾಗ ಮಾತ್ರ ಇದನ್ನು ಬಳಸಬೇಕು.

ಪ್ರಯಾಣ ಮಾಡುವಾಗ ಅಥವಾ ಸಿಂಕ್‌ವರೆಗೆ ನಡೆದು ಹೋಗಲು ಸಾಧ್ಯವಾಗದಿದ್ದ ಅನಾರೋಗ್ಯ ಸಮಸ್ಯೆಗಳಿದ್ದರೆ ಅನಿವಾರ್ಯವಾಗಿ ಸ್ಯಾನಿಟೈಸರ್‌ ಬಳಸಬಹುದು.

ಸ್ಯಾನಿಟೈಸರ್‌ಅನ್ನು ಕೈಗೆ ಹಾಕಿಕೊಂಡು ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ಉಜ್ಜಬೇಕು. ಇಲ್ಲವಾದರೆ ಆಲ್ಕೊಹಾಲ್‌ ಅಂಶ ಕೈಯಲ್ಲೇ ಉಳಿದು ಅಪಾಯವಾಗಬಹುದು.

ಮುಖ್ಯವಾಗಿ ಈ ಸ್ಯಾನಿಟೈಸರ್‌ ಹಚ್ಚಿ ಸರಿಯಾಗಿ ಕೈಗಳನ್ನು ಉಜ್ಜಿಕೊಳ್ಳದೇ 15 ನಿಮಿಷಕ್ಕೆಲ್ಲ ಕೈ ತೊಳೆಯದೇ ಊಟ ಮಾಡಿದರೆ ಇದು ಅಪಾಯಕಾರಿ.

ಊಟ ಮಾಡುವ ಮೊದಲು ಕೈಗೆ ಸ್ಯಾನಿಟೈಸರ್‌ ಹಚ್ಚಿಕೊಳ್ಳಲೇ ಬೇಡಿ. ಇದು ಅಪಾಯಕಾರಿ. ಮುಖ್ಯವಾಗಿ ಮಕ್ಕಳು ಈ ರೀತಿ ಮಾಡದಂತೆ ನೋಡಿಕೊಳ್ಳಿ.

ಮಕ್ಕಳಿಗೆ ಸಾಧ್ಯವಾದಷ್ಟು ಸ್ಯಾನಿಟೈಸರ್‌ ಬಳಕೆ ಕಡಿಮೆ ಮಾಡುವುದು ಉತ್ತಮ. ಅವರು ಚೆನ್ನಾಗಿ ಕೈಗಳನ್ನು ಉಜ್ಜದೇ ಕೈ ಬಾಯಿಗೆ ಹಾಕುವ, ಆ ಕೈಯಲ್ಲೇ ಏನನ್ನಾದರೂ ತಿನ್ನುವ ಸಾಧ್ಯತೆ ಇರುತ್ತದೆ. ಇದು ಆರೋಗ್ಯಕ್ಕೆ ಹಾನಿಕರ.

ಒಂದೊಮ್ಮೆ ಮಕ್ಕಳ ಕೈಗೆ ಎಟಕುವಂತೆ ಸ್ಯಾನಿಟೈಸರ್‌ ಇಟ್ಟುಕೊಂಡಿದ್ದರೆ ಅವರದನ್ನು ಕುಡಿದುಬಿಡುವ ಅಪಾಯವಿದೆ.ಒಂದು ವೇಳೆ ಹಾಗೇನಾದರೂ ಆದರೆ ತಕ್ಷಣ ವೈದ್ಯರಲ್ಲಿ ಕರೆದೊಯ್ಯಿರಿ. ಮನೆಯಲ್ಲಿ ಯಾವ ಚಿಕಿತ್ಸೆಯೂ ಬೇಡ. ಸ್ವಲ್ಪ ನೀರು ಕುಡಿಸಬಹುದಷ್ಟೇ. ವೈದ್ಯರ ಬಳಿ ಹೋಗುವಾಗ ಮಗು ಕುಡಿದ ಸ್ಯಾನಿಟೈಸರ್‌ ಬಾಟಲ್‌ಅನ್ನು ತಪ್ಪದೇ ಕೊಂಡೊಯ್ಯಿರಿ.

ಮಕ್ಕಳು ಅಥವಾ ದೊಡ್ಡವರ ಹೊಟ್ಟೆಗೆ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್‌ ಹೋದರೆ ವಾಂತಿ, ಹೊಟ್ಟೆನೋವು ಕಾಣಿಸಬಹುದು. ಆಲ್ಕೊಹಾಲ್‌ ಪಾಯಿಸನಿಂಗ್‌ ಆದರೆ ಮಗು ಪ್ರಜ್ಞಾಹೀನ ಸ್ಥಿತಿಗೆ ಹೋಗಬಹುದು. ಇದು ಬಹಳ ಅಪಾಯಕಾರಿ.

ಮನೆಯಲ್ಲಿ ಸೋಪು, ನೀರಿನ ಲಭ್ಯತೆ ಇದ್ದೂ ಸ್ಯಾನಿಟೈಸರ್‌ ಪದೇ ಪದೇ ಬಳಸೋದರಿಂದ ಕೈಗಳು ಒರಟಾಗಬಹುದು. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಅಲರ್ಜಿ ಆಗಬಹುದು. ಸ್ಯಾನಿಟೈಸರ್‌ ಹಚ್ಚಿರುವ ಕೈಯಲ್ಲಿ ಕಣ್ಣು, ಮುಖ ಮುಟ್ಟಿದರೂ ಸಮಸ್ಯೆಯಾಗುತ್ತದೆ.

LEAVE A REPLY

Please enter your comment!
Please enter your name here