ರಾಜ್ಯ ಸರ್ಕಾರ ಸ್ಯಾಂಡಲ್ ವುಡ್ ಗೆ ಶುಭ ಸುದ್ದಿ ನೀಡಿದೆ. ಇದುವರೆಗೂ ಚಿತ್ರಮಂದಿರಗಳ ಮೇಲೆ ವಿಧಿಸಿದ್ದ 50% ರಷ್ಟು ಸೀಟು ಭರ್ತಿ ನಿರ್ಬಂಧವನ್ನು ಹಿಂತೆಗೆದುಕೊಂಡು ಪೂರ್ಣ ಭರ್ತಿಗೆ ಅವಕಾಶ ನೀಡಿದೆ.
ಫೆಬ್ರವರಿ 5 ಶನಿವಾರದಿಂದ ರಾಜ್ಯದಲ್ಲಿನ ಚಿತ್ರಮಂದಿರಗಳು 100 ಪ್ರತಿಶತದಷ್ಟು ಪೂರ್ಣ ಭರ್ತಿಯೊಂದಿಗೆ ಕಾರ್ಯನಿರ್ವಹಿಸಬಹುದು ಎಂದು ಕಂದಾಯ ಸಚಿವ ಅರ್.ಅಶೋಕ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಕೊರೋನಾ 3 ನೇ ಅಲೆಯ ನಿಯಂತ್ರಣಕ್ಕಾಗಿ ವಾರಂತ್ಯ ಕರ್ಪ್ಯೂ ಸಮೇತ ಹಲವು ನಿರ್ಬಂಧಗಳನ್ನು ಜಾರಿ ಮಾಡಿತ್ತು. ಕೊರೋನಾ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆ ವಾರಾಂತ್ಯ ಕರ್ಪ್ಯೂ ಹಾಗೂ ಇತರೆ ನಿರ್ಬಂಧಗಳನ್ನು ಹಿಂಪಡೆದಿತ್ತು. ಆದರೆ, ಚಿತ್ರಮಂದಿರಗಳ ಮೇಲಿನ ನಿರ್ಬಂಧ ಮುಂದುವರೆಸಿತ್ತು.
ಸರ್ಕಾರದ ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದ ಚಿತ್ರರಂಗದ ಪ್ರಮುಖರು ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯವರು ಸಚಿವ ಆರ್.ಅಶೋಕ್ ಅವರಿಗೆ ಚಿತ್ರರಂಗಕ್ಕೂ ಪೂರ್ಣ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೆ, ನಿರ್ಧಾರ ಕೈಗೊಂಡಿರುವ ಸರ್ಕಾರ ಚಿತ್ರಮಂದಿರಗಳು ಪೂರ್ಣ ಭರ್ತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.