ಸ್ಟಾರ್ ನಟರ ನಡುವೆ ನೇರಾನೇರ `ಮಾ’ತಿನ ಯುದ್ಧ.. ಮೆಗಾ ಸ್ಟಾರ್ ಚಿರಂಜೀವಿಗೆ ಮುಜುಗರ

ಟಾಲಿವುಡ್‍ನ ಖ್ಯಾತ ಸ್ಟಾರ್ ನಟರ ನಡುವೆ ನೇರಾನೇರ ಮಾತಿನ ಯುದ್ಧ ನಡೆದಿದೆ. ಅದು ಕಾರ್ಯಕ್ರಮದ ವೇದಿಕೆಯಲ್ಲಿ, ಮಾಧ್ಯಮಗಳ ಮುಂದೆ. ಇಷ್ಟು ದಿನ ತೆಲುಗು ನಟರ ನಡುವೆ ಸಾಮರಸ್ಯವಿದೆ. ಆಂತರಿಕವಾಗಿ ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ, ಅದನ್ನು ತೋರ್ಪಡಿಸಿಕೊಳ್ಳದೇ ಎಲ್ಲರೂ ಕಾರ್ಯಕ್ರಮ ಭಾಗಿಯಾಗಿ ನಕ್ಕು ನಲಿಯುತ್ತಾರೆ ಎಂಬ ಮಾತಿತ್ತು. ಅದೀಗ ಸುಳ್ಳಾಗಿದೆ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್(ಮಾ)ನ ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಸ್ಟಾರ್ ನಟರ ನಡುವೆ ಅಂತರ್ಯುದ್ಧ ಬೀದಿಗೆ ಬಂದಿದೆ.

ರಾಜಶೇಖರ್ ಫಿಲ್ಮಿ ಸ್ಟೈಲ್ ಡ್ರಾಮಾ

ಮೆಗಾ ಸ್ಟಾರ್ ಚಿರಂಜೀವಿ ಮತ್ತು ನಾಯಕ ನಟ ರಾಜಶೇಖರ್ ನಡುವೆ ನೇರಾನೇರ ಕಿತ್ತಾಟ ನಡೆದಿದೆ. ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಜೋರಾಗಿ ಗಲಾಟೆ ಆಗಿದೆ. ಡೈರಿ ರಿಲೀಸ್ ಕಾರ್ಯಕ್ರಮದಲ್ಲಿ ಹಿರಿಯ ನಟ ಮತ್ತು ಸ್ಕ್ರಿಪ್ಟ್ ರೈಟರ್ ಪರಚೂರಿ ಗೋಪಾಲಕೃಷ್ಣ ಮಾತನಾಡುವ ವೇಳೆ ವೇದಿಕೆ ಹತ್ತಿದ ಮಾ ಉಪಾಧ್ಯಕ್ಷ ರಾಜಶೇಖರ್ ಬಲವಂತವಾಗಿ ಮೈಕ್ ಕಿತ್ತುಕೊಂಡರು. ಫಿಲ್ಮಿ ಸ್ಟೈಲಲ್ಲಿ ವೇದಿಕೆ ಮೇಲೆ ಕುಳಿತಿದ್ದ ಮೆಗಾ ಸ್ಟಾರ್ ಚಿರಂಜೀವಿ, ಡೈಲಾಗ್ ಕಿಂಗ್ ಮೋಹನ್ ಬಾಬು, ರೆಬೆಲ್ ಸ್ಟಾರ್ ಕೃಷ್ಣಂರಾಜು ಕಾಲಿಗೆ ನಮಸ್ಕರಿಸಿದರು.

`ಮಾ’ನಲ್ಲಿ ಎಲ್ಲವೂ ಸರಿ ಇಲ್ಲ. ಗಲಾಟೆಗಳು ನಡೆಯುತ್ತಿವೆ. ಓಪನ್ ಆಗಿ ಮಾತನಾಡಲು ಯಾರಿಗೂ ಅವಕಾಶವೇ ಕೊಡುತ್ತಿಲ್ಲ. ಎಲ್ಲರೂ ಜೊತೆ ಜೊತೆಯಲ್ಲೇ ನಡೆಯಬೇಕೆಂದು ಮೆಗಾ ಸ್ಟಾರ್ ಚಿರಂಜೀವಿ ಅವರು ಹೇಳುತ್ತಾರೆ. ಆದರೆ, ಕೆಂಡವನ್ನು ಮುಚ್ಚಿಟ್ಟರೇ ಏನಾಗುತ್ತೆ. ಹೊಗೆ ಬಾರದೇ ಇರುತ್ತಾ ಎಂದು ರಾಜಶೇಖರ್ ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರ ಹಾಕಿದರು.

ಕಳೆದ ಮಾರ್ಚ್‍ನಲ್ಲಿ ಮಾ ಸಂಸ್ಥೆಗೆ ಹೊಸ ಆಡಳಿತ ಮಂಡಳಿ ರಚನೆ ಆದ ಕ್ಷಣದಿಂದ ನನಗೆ ಒಂದೇ ಒಂದು ಸಿನಿಮಾ ಮಾಡಲು ಆಗಿಲ್ಲ. ಇತ್ತೀಚಿಗೆ ನನ್ನ ಆಡಿ ಕಾರು ಅಪಘಾತಕ್ಕೂ ಇದೆ ಕಾರಣ. ನಿತ್ಯ ನನ್ನ ಮನೆಯಲ್ಲಿ ಗಲಾಟೆಗಳು ನಡೆಯುತ್ತಿವೆ. `ಮಾ’ಗಾಗಿ ಯಾಕೆ ಅಷ್ಟೊಂದು ದುಡಿಯುತ್ತಿದ್ದೀಯಾ..? ಸಿನಿಮಾ ಮಾಡಿ ಎಂದು ಬೈಯ್ಯುತ್ತಿದ್ದಾರೆ. ರಿಯಲ್ ಲೈಫ್‍ನಲ್ಲಿಯೂ ಹೀರೋ ಆಗಿ ಕೆಲಸ ಮಾಡುತ್ತಿರುವ ತಮ್ಮನ್ನು ತುಳಿಯಲಾಗುತ್ತಿದೆ ಎಂದು ಎಲ್ಲರ ಮುಂದೆಯೇ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಮಧ್ಯೆ ಮಾತನಾಡಲು ಚಿರಂಜೀವಿ ಪ್ರಯತ್ನ ಮಾಡಿದರೂ, ನಟ ರಾಜಶೇಖರ್ ಅವಕಾಶ ಕೊಡಲಿಲ್ಲ. ಮತ್ತೋರ್ವ ಹಿರಿಯ ನಟ ಮೋಹನ್ ಬಾಬು, ಮಾತು ನಿಲ್ಲಿಸಿ ಎಂದರೂ ನಟ ರಾಜಶೇಖರ್ ಸುಮ್ಮನಾಗಲಿಲ್ಲ. ತಾವಾಡಬೇಕು ಎಂದಿದ್ದ ಮಾತುಗಳನ್ನು ಪೂರ್ಣಗೊಳಿಸಿಯೇ ವೇದಿಕೆ ಇಳಿದರು.

ನಮ್ಮ ಹಿರಿತನಕ್ಕೆ ಬೆಲೆ ಇಲ್ಲ – ಚಿರಂಜೀವಿ

ನಂತರ ಮಾತನಾಡಿದ ಮೆಗಾಸ್ಟಾರ್ ಚಿರಂಜೀವಿ, ನನ್ನ ಮಾತಿಗೆ ಯಾರು ಬೆಲೆ ಕೊಡುತ್ತಿಲ್ಲ. ನಮ್ಮ ಮಾತಿಗೆ, ತಮ್ಮ ಹಿರಿತನಕ್ಕೆ ಬೆಲೆ ಇಲ್ಲ ಎಂದರೇ ನಾವೇಕೆ ಇಲ್ಲಿ ಇರಬೇಕು. ಸಭೆಗೆ ಗೌರವ ಕೊಡದೇ ರಾಜಶೇಖರ್ ಮೈಕ್ ಎಳೆದುಕೊಂಡು ಮಾತನಾಡಿದ್ದು ಸರಿಯಲ್ಲ. ಈಗಲೂ ನಾವು ಸ್ಪಂದಿಸದಿದ್ದರೇ ನಮ್ಮ ಹಿರಿತನಕ್ಕೆ ಬೆಲೆ ಇರಲ್ಲ. ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ. ಯಾರೂ ಆವೇಶಕ್ಕೆ ಒಳಗಾಗಬೇಡಿ. ಇಷ್ಟ ಇಲ್ಲದಿದ್ದರೇ ಸಭೆಗೆ ಬರಬಾರದು. ಈ ರೀತಿ ಗೊಂದಲ, ಮುಜುಗರದ ಸನ್ನಿವೇಶಗಳನ್ನು ಸೃಷ್ಟಿಸಬಾರದು. ರಾಜಶೇಖರ್ ವಿರುದ್ಧ ಮಾ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲೇಬೇಕು ಎಂದು ಚಿರಂಜೀವಿ ಆಗ್ರಹಿಸಿದರು.

LEAVE A REPLY

Please enter your comment!
Please enter your name here