ಸೆಂಚುರಿಸ್ಟಾರ್‌ ಶಿವಣ್ಣ ಭಜರಂಗಿ ಸಿನಿಮಾಕ್ಕೆ ಭೂತಕೋಲದ ದೋಷವೇ..? – ಕ್ಷಮೆ ಕೇಳಿದ್ರಾ ಶಿವಣ್ಣ..?

ಮೊದಲ ಪೋಸ್ಟರ್‌ ಮೂಲಕ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಸೆಂಚುರಿ ಸ್ಟಾರ್‌ ಡಾ ಶಿವರಾಜ್‌ಕುಮಾರ್‌ ಅಭಿನಯದ ಭಜರಂಗಿ-೨ ಸಿನಿಮಾಕ್ಕೆ ವಿಘ್ನಗಳ ಮೇಲೆ ವಿಘ್ನ. ಅದರಲ್ಲೂ ವಾರದೊಳಗೆ ಸತತ ಎರಡನೇ ಬಾರಿ ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಿನಿಮಾ ಶೂಟಿಂಗ್‌ ವೇಳೆ ಘಟಿಸಿದ ಮೂರನೇ ಅವಘಡ ಇದಾಗಿದೆ.

ಅವಘಢ ೩:

ಬೆಂಗಳೂರಿನ ಚಿಕ್ಕಮಾರನಹಳ್ಳಿಯಲ್ಲಿರುವ ಕೆ ಬಿ ಕೆರೆ ಸ್ಟುಡಿಯೋದಲ್ಲಿ ಭಜರಂಗಿ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಸೆಟ್‌ನಲ್ಲಿದ್ದ ಶಾರ್ಟ್‌ ಸರ್ಕ್ಯೂಟ್‌ ಆಗಿ ಬೆಂಕಿ ಹೊತ್ತಿಕೊಂಡಿದೆ. ಸೆಟ್‌ನಲ್ಲಿ ಹಾಕಲಾಗಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಸೆಟ್‌ನಿಂದ ದಟ್ಟ ಹೊಗೆ ಆಕಾಶವನ್ನು ಆವರಿಸಿತು. ಈ ವೇಳೆ ೪೦೦ ಮಂದಿ ಸೆಟ್‌ನಲ್ಲಿದ್ದರು. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.

ಅವಘಢ ೨:

ಜನವರಿ ೧೬ ಅಂದರೆ ಶುಕ್ರವಾರದಂದು ಭಜರಂಗಿ -೨ ಕಲಾವಿದರನ್ನು ಕರೆದುಕೊಂಡು ಹೋಗುತ್ತಿದ್ದ ಬಸ್‌ನ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ನೆಲಮಂಗಲ ಬಳಿಯ ಮೊಸರಹಳ್ಳಿಯ ಬಳಿ ವೇಗದಲ್ಲಿ ಹೋಗುತ್ತಿದ್ದ ಬಸ್‌ ಮೊದಲಿಗೆ ಕಾರನ್ನು ಉಜ್ಜಿಕೊಂಡು ಹೋಗಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯಿತು. ಆದರೆ ಈ ವೇಳೆ ರಿಪೇರಿ ಕೆಲ್ಸ ಹಿನ್ನೆಲೆಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗಿತ್ತು. ಹೀಗಾಗಿ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿತು.

ಅವಘಡ_೧:

ಜನವರಿ ೧೪ರಂದೂ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲೇ ಮೊದಲ ಬಾರಿಗೆ ಬೆಂಕಿ ಅವಘಢ ನಡೆದಿತ್ತು.

ಭೂತಕೋಲದ ತೊಂದರೆಯೇ..?

ಶಿವರಾಜ್‌ಕುಮಾರ್‌ ಅಭಿನಯದ ಆಯುಷ್ಮಾನ್‌ಭವ ಸಿನಿಮಾದ ಶೂಟಿಂಗ್‌ಗಾಗಿ ಪೊಳಲಿಯ ರಾಜರಾಜೇಶ್ವರಿ ಸನ್ನಿಧಿಯಲ್ಲಿ ನೈಜ ಒತ್ತೆಕೋಲವನ್ನು ಮಾಡಲಾಗಿತ್ತು. ಆದರೆ ಇದು ದೈವಕ್ಕೆ ಮಾಡಲಾಗಿರುವ ಅಪಚಾರ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಆಯುಷ್ಮಾನ್‌ಭವದಲ್ಲಿನ ಒತ್ತೆಕೋಲ ದೃಶ್ಯದಿಂದ ಭಜರಂಗಿ -೨ ಸಿನಿಮಾದ ಚಿತ್ರೀಕರಣಕ್ಕೆ ವಿಘ್ನಗಳ ಮೇಲೆ ವಿಘ್ನಗಳು ಬರುತ್ತಿವೆ ಎನ್ನುವುದು ಆಯುಷ್ಮಾನ್‌ಭವದ ನಿರ್ದೇಶಕ ಯೋಗಿ ದ್ವಾರಕೀಶ್‌ ಒಪ್ಪಿಕೊಳ್ಳುತ್ತಿಲ್ಲ.

ಅನಾಹುತ ಯಾರೂ ಮಾಡಲ್ಲ, ಅದು ಅವಘಡ ಅಷ್ಟೇ. ಯಾರೂ ಅದನ್ನು ಮಾಡಲ್ಲ. ಕೆಲವೊಂದು ಸಲ ನಿರ್ಲಕ್ಷ್ಯವೂ ಕಾರಣವಾಗಿರಬಹುದು. ನಾನು ಮೂಢನಂಬಿಕೆಗಳನ್ನು ನಂಬಲ್ಲ. ಆಯುಷ್ಮಾನ್‌ಭವದಲ್ಲಿ ಕೇವಲ ಸಿನಿಮಾ ಶೂಟಿಂಗ್‌ಗಾಗಿ ಭೂತಕೋಲ ಮಾಡಿಲ್ಲ. ಅದು ಸಂಪ್ರದಾಯ ಪ್ರಕಾರವೇ ಮಾಡಿದ ಭೂತಕೋಲ.

ಆಪ್ತಮಿತ್ರ ಸಿನಿಮಾ ಮಾಡಿದ್ದಾಗಲೂ ಎಲ್ಲರೂ ಇದೇ ರೀತಿ ಮಾತಾಡಿದ್ದರು. ಆಪ್ತಮಿತ್ರ ಮಲಯಾಳಂ ಸಿನಿಮಾದ ರಿಮೇಕ್‌. ಆ ಸಿನಿಮಾ ಮಾಡಿದ ಮೋಹನ್‌ಲಾಲ್‌, ಶೋಭನಾ ಅವರೆಲ್ಲ ಚೆನ್ನಾಗಿದ್ದಾರೆ. ತಮಿಳಲ್ಲಿ ರಜನಿಕಾಂತ್‌, ಹಿಂದಿಯಲ್ಲಿ ಅಕ್ಷಯ್‌ ಕುಮಾರ್‌ ಮಾಡಿದ್ರು. ಯಾರಿಗೂ ಏನೂ ಆಗ್ಲಿಲ್ಲ. ಕನ್ನಡದಲ್ಲಿ ರಿಮೇಕ್‌ ಮಾಡಿದಾಗ ಕನ್ನಡದಲ್ಲಿ ಮಾತ್ರ ತೊಂದರೆ ಆಗುತ್ತಾ..? ಹೀಗಾಗಿ ಈ ಥರದ ಮೂಢನಂಬಿಕೆ ಇರಬಾರದು. 

ಭಜರಂಗಿ ಶೂಟಿಂಗ್‌ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಅವಘಢಕ್ಕೆ ಬೇರೆ ಕಾರಣ ಇರಬಹುದು. ಯಾರದ್ದೋ ನಿರ್ಲಕ್ಷ್ಯದಿಂದ ಬೆಂಕಿ ಹೊತ್ತಿಕೊಂಡಿರಬಾರದು. ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಹೊರಗೆ ಭೂತಕೋಲ ಮಾಡಿದ್ವಿ. ದೇವಸ್ಥಾನದವರೇ ಇಲ್ಲಿ ಮಾಡಿ ಎಂದು ಜಾಗ ಕೊಟ್ಟಿದ್ದರು. ಸಂಪ್ರದಾಯ ಪ್ರಕಾರ ಯಾರು ಭೂತಕೋಲ ಮಾಡುತ್ತಾರೋ ಅವರ ಕೈಯಲ್ಲೇ ಭೂತಕೋಲ ಮಾಡಿಸಿದ್ವಿ. ನಾನೇ ಉಪವಾಸದಲ್ಲಿದ್ದು ಸೇವೆ ಮಾಡಿಸಿದ್ದೆ. ಆದ್ದರಿಂದ ಯಾವ ಅನಾಹುತವೂ ನಮಗೆ ಆಗಲಿಲ್ಲ. ಸಿನಿಮಾಗೋಸ್ಕರ ಮತ್ತು ನನಗೋಸ್ಕರ ಭೂತಕೋಲ ಮಾಡಿಸಿದ್ದೆ. ಇದು ಸಿನಿಮಾದಲ್ಲಿ ಅತ್ಯಂತ ಪ್ರಮುಖ ದೃಶ್ಯ ಆಗಿತ್ತು. ಆಗ ಯಾವ ಸ್ಥಳೀಯರೂ ವಿರೋಧ ವ್ಯಕ್ತಪಡಿಸಲಿಲ್ಲ

ಎಂದು ಯೋಗಿ ದ್ವಾರಕೀಶ್‌ ಹೇಳಿದ್ದಾರೆ.

ದೇವರಲ್ಲಿ ಕ್ಷಮೆ ಕೇಳೋಣ:

ಶಾರ್ಟ್‌ ಸರ್ಕ್ಯೂಟ್‌ ಆದಾಗ ಸ್ಟಂಟ್‌ ಶೂಟಿಂಗ್‌ ನಡೆಯುತ್ತಿತ್ತು. ಯಾರಿಗೂ ಏನೂ ಆಗಿಲ್ಲ. ಆದರೆ ಅವಘಢದಿಂದ ಬೇಸರ ಆಗಿದೆ. ಅವಘಢದಿಂದ ಪ್ರೊಡ್ಯೂಸರ್‌ಗೆ ನಷ್ಟ ಆಗಿದೆ. ಆದರೆ ಅವರು ಏನೂ ಆಗಿಲ್ಲ ಎಂದು ಹೇಳುತ್ತಿದ್ದಾರೆ. ಆಯುಷ್ಮಾನ್‌ ಭವ ಸಂದರ್ಭದಲ್ಲೂ ಏನೂ ಆಗಿಲ್ಲ. ಭೂತಕೋಲಕ್ಕೂ ಇದಕ್ಕೂ ಏನೂ ಸಂಬಂಧ ಇಲ್ಲ. ಇದು ಒಂದು ಅವಘಢ ಅಷ್ಟೇ. ಅಗೋಚರ ಶಕ್ತಿ ಎನ್ನುವಂಥದ್ದು ಏನೂ ಇಲ್ಲ. 

ನಾವು ದೇವರ ಪೂಜೆ, ಹೋಮ-ಹವನ ಮಾಡಿಕೊಂಡೇ ಬಂದಿದ್ದೇವೆ. ದೇವರಿಗಿಂತ ದೊಡ್ಡವರು ಯಾರೂ ಇಲ್ಲ. ದೇವರಿಗೆ ಪ್ರಾರ್ಥನೆ ಮಾಡಿ ಕ್ಷಮೆ ಕೇಳೋಣ. ಭಜರಂಗಿ ಸಿನಿಮಾದಿಂದ ಯಾರಿಗೂ ಕೆಟ್ಟ ಹೆಸರು ಬರಬಾರದು

ಎಂದು ನಟ ಶಿವಣ್ಣ ಹೇಳಿದ್ದಾರೆ.

ಸೆಟ್ಟೇ ಇಲ್ಲವಾಯ್ತು:

ಇವತ್ತು ಶಾರ್ಟ್‌ ಸರ್ಕ್ಯೂಟ್‌ನಿಂದ ಹೆಚ್ಚು ಹಾನಿ ಆಗಿದೆ. ಮಧ್ಯಾಹ್ನ ೩ ಗಂಟೆಯಷ್ಟೊತ್ತಿಗೆ ಅವಘಡ ಸಂಭವಿಸಿದೆ. ಮೊನ್ನೆ ಶಾರ್ಟ್‌ ಸರ್ಕ್ಯೂಟ್‌ ಆಗಿದ್ದರಿಂದ ಮುನ್ನೆಚ್ಚರಿಕೆ ವಹಿಸಿದ್ವಿ. ಇವತ್ತೇ ಸೆಟೇ ಇಲ್ಲವಾಗಿದೆ. ಮೊನ್ನೆ ಮೇಲ್ಭಾಗದಲ್ಲಷ್ಟೇ ಅವಘಢ ಆಗಿತ್ತು. ದೇವರ ದಯೆಯಿಂದ ಯಾರಿಗೂ ಹಾನಿ ಆಗಿಲ್ಲ. ೩೫೦ ಮಂದಿ ಟೆಕ್ನಿಷಿಯನ್‌, ೨೦೦ ಮಂದಿ ಜ್ಯೂನಿಯರ್‌ ಕಲಾವಿದರು ಇದ್ದರು. ೧೫ ನಿಮಿಷದಲ್ಲಿ ಸೆಟ್ಟೇ ಇಲ್ಲವಾಯ್ತು. ಬಸ್‌ ಆಕ್ಸಿಡೆಂಟ್‌ನಲ್ಲೂ ದೇವರ ದಯೆಯಿಂದ ಯಾರಿಗೂ ಏನೂ ಆಗಿಲ್ಲ .ಇದು ತಾಂತ್ರಿಕ ಕಾರಣದಿಂದಷ್ಟೇ ಆಗಿರುವ ಅನಾಹುತ. ಬೇರೆ ಏನೂ ಕಾರಣಗಳಿಲ್ಲ

ಎಂದು ಭಜರಂಗಿ ಸಿನಿಮಾದ ನಿರ್ದೇಶಕ ಹರ್ಷ ಹೇಳಿದ್ದಾರೆ.

LEAVE A REPLY

Please enter your comment!
Please enter your name here