ಸೀಲ್‍ಡೌನ್ ವೇಳೆ ರೌಡಿಸಂ.. ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆ

ಕಳೆದ ಎರಡು ವಾರಗಳಿಂದ ಸೀಲ್‍ಡೌನ್ ಆಗಿದ್ದ ಕೊರೋನಾ ಹಾಟ್ ಸ್ಪಾಟ್ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ದಾಳಿ ನಡೆದಿದೆ. ಪೊಲೀಸರಿಗೆ ಹಾಕಿದ್ದ ಪೆಂಡಾಲ್ ಕಿತ್ತೆಸೆದು, ಬ್ಯಾರಿಕೇಡ್ ಉರುಳಿಸಿ, ರಸ್ತೆಗೆ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ ಶೀಟ್‍ಗಳನ್ನು ಉರುಳಿಸಿ ಅಟ್ಟಹಾಸ ಮೆರೆದಿದ್ದಾರೆ.

ರಾತ್ರಿ ಸುಮಾರಿಗೆ 8.30ರ ಸುಮಾರಿನಲ್ಲಿ ಪಾದರಾಯನಪುರದ ಗುಡ್ಡದಹಳ್ಳಿ, ಅರ್ಫತ್ ನಗರದಲ್ಲಿ ಏಕಾಏಕಿ ಬೀದಿಗಿಳಿದ ನೂರಾರು ಮಂದಿ, ಕೈಯಲ್ಲಿ ಕಲ್ಲು, ದೊಣ್ಣೆ, ಬ್ಯಾಟ್.. ಹೀಗೆ ಕೈಗೆ ಸಿಕ್ಕ ವಸ್ತುಗಳಿಂದ ದಾಳಿಗೆ ಮುಂದಾದರು. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಎದ್ನೋ ಬಿದ್ನೋ ಅಂತಾ ಕಾಲಿಗೆ ಬುದ್ದಿ ಹೇಳಿದರು. ನೋಡನೋಡುತ್ತಿದ್ದಂತೆ ಅಲ್ಲಿನ ಪರಿಸ್ಥಿತಿ ರಣಾಂಗಣ ಆಗಿತ್ತು.

ಘರ್ಷಣೆಗೆ ಕಾರಣ ಏನು..?

ಕಾರಣ 1. ಕೊರೋನಾ ಸೋಂಕಿತರು ಪಾದರಾಯನಪುರ ವಾರ್ಡ್‍ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ವಾರ್ಡ್‍ನ್ನು ಕಳೆದ ಎರಡು ವಾರಗಳಿಂದ ಸೀಲ್‍ಡೌನ್ ಮಾಡಲಾಗಿತ್ತು. ಜನ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಆದರೂ, ಜನ ಇದನ್ನು ಕೇರ್ ಮಾಡಿರಲಿಲ್ಲ. ಹೀಗಾಗಿ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿತ್ತು. ಗಲ್ಲಿಗಲ್ಲಿ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಹೊರಗೆ ಹೋಗಲು ಆಗ್ತಿಲ್ಲ. ತಮ್ಮನ್ನು ನಿರ್ಬಂಧಿಸಿ ಇಡಲಾಗಿದೆ. ಊಟ, ಆಹಾರ ವಸ್ತುಗಳು ಸಿಗುತ್ತಿಲ್ಲ ಎಂದು ಸ್ಥಳೀಯರು, ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ನಿನ್ನೆ ರಾತ್ರಿ ತಾರಕಕ್ಕೆ ಏರಿದೆ.

ಕಾರಣ 2. ಪಾದರಾಯನಪುರ ವಾರ್ಡ್‍ನಲ್ಲಿ ಒಬ್ಬರು ಕೊರೋನಾ ಸೋಂಕಿತರು, 58 ವ್ಯಕ್ತಿಗಳ ಜೊತೆ ದ್ವಿತೀಯ ಸಂಪರ್ಕ ಹೊಂದಿದ್ದರು. 58 ಮಂದಿಯನ್ನು ಪತ್ತೆ ಹಚ್ಚದಿದ್ದರೇ ಮತ್ತಷ್ಟು ಮಂದಿಗೆ ಸೋಂಕು ಹರಡಬಹುದು ಎನ್ನುವ ದೃಷ್ಟಿಯಿಂದ ಕೊರೋನಾ ವಾರಿಯರ್ಸ್, ಅವರ ಪತ್ತೆಗೆ ಮುಂದಾಗಿದ್ದರು. ಮನೆ ಮನೆಗೆ ತೆರಳಿ ಪರೀಕ್ಷೆ ಮಾಡುತ್ತಿದ್ದ ಕೊರೋನಾ ವಾರಿಯರ್ಸ್, 15 ಮಂದಿ ಶಂಕಿತರನ್ನು ಆಸ್ಪತ್ರೆಗೆ ಕಳುಹಿಸಿ ಕ್ವಾರಂಟೇನ್ ಮಾಡಲಾಗಿತ್ತು. ಇನ್ನುಳಿದ 33 ಮಂದಿ ಶಂಕಿತರನ್ನು ಕ್ವಾರಂಟೇನ್‍ಗೆ ಕಳುಹಿಸುವ ಸಂದರ್ಭದಲ್ಲಿ ಆಕ್ರೋಶ ಭುಗಿಲೆದ್ದಿದೆ. ಕೊರೋನಾ ಲಕ್ಷಣಗಳು ಇಲ್ಲದಿದ್ದರೂ ನಮ್ಮನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಲವರು ಆಕ್ಷೇಪಿಸಿ ಗಲಾಟೆ ಎಬ್ಬಿಸಿದ್ದರು. ಇದು ವಿಕೋಪಕ್ಕೆ ತಿರುಗಿದೆ.

ಗೂಂಡಾಗಿರಿ ಮಾಡಿದವರ ಬಂಧನಕ್ಕೆ 8 ಟೀಂ

ಪಾದರಾಯನಪುರದಲ್ಲಿ ನಡೆದ ಗೂಂಡಾಗಿರಿ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ರಾತ್ರೋರಾತ್ರಿ 8 ಖಡಕ್ ಇನ್ಸ್‍ಪೆಕ್ಟರ್‍ಗಳ ನೇತೃತ್ವದಲ್ಲಿ 8 ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಘಟನೆ ನಡೆದ ಪ್ರದೇಶದ ಸ್ಥಳೀಯರ ನೆರವಿನಿಂದ ದಾಳಿ ನಡೆಸಿದವರನ್ನು ಬಂಧಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಇಂದು ಸಂಪುಟ ಸಭೆ.. ನಿರ್ಣಯ ಹೊರಬೀಳುತ್ತಾ..?

ಇದನ್ನು ರಾಜ್ಯ ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ. ಇಂದು ನಡೆಯುವ ಸಂಪುಟ ಸಭೆಯಲ್ಲಿ ಪಾದರಾಯನಪುರ ಘರ್ಷಣೆ ಪ್ರಕರಣದ ಬಗ್ಗೆ ಚರ್ಚೆ ಆಗಲಿದೆ. ಪಾದರಾಯನಪುರ ಸೇರಿದಂತೆ ಕೆಲವೊಂದು ಸೂಕ್ಷ್ಮ ಪ್ರದೇಶಗಳಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳು ಅಧಿಕವಾಗಿವೆ. ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿದ ಸಚಿವ ಸಿ.ಟಿ.ರವಿ, ಇದನ್ನು ಸಹಿಸಲು ಸಾಧ್ಯವೇ ಇಲ್ಲ. ಕಂಡಲ್ಲಿ ಗುಂಡಿಕ್ಕುವ ಆದೇಶ ನೀಡಿಯಾದರೂ ಸರಿ, ಪರಿಸ್ಥಿತಿ ನಿಯಂತ್ರಣಕ್ಕೆ ತರುತ್ತೇವೆ. ತಪ್ಪು ಮಾಡಿದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ. ಸಂಪುಟ ಸಭೆಯಲ್ಲಿ ಚರ್ಚಿಸಿದ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ದಾಳಿ ಖಂಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಘಟನೆ ಸಂಬಂಧ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಉಗ್ರವಾಗಿ ಖಂಡಿಸಿದ್ದಾರೆ. ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಆಡಳಿತ ವ್ಯವಸ್ಥೆಯ ನೈತಿಕ ಬಲ ಕುಗ್ಗಿಸುವ ಮತ್ತು ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡಿದ ದಂಗೆ ಏಳುವವರ ಹೆಡೆಮುರಿ ಕಟ್ಟಬೇಕು ಎಂದು ಆಗ್ರಹಿಸಿದ್ದಾರೆ.

ದೇಶದ ಕಾನೂನಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವವರನ್ನು ಮುಲಾಜಿಲ್ಲದೇ ಬಲಿ ಹಾಕಬೇಕು. ಕೊರೋನಾ ವಿರುದ್ಧ ಇಡೀ ಜಗತ್ತು ಸಂಘರ್ಷ ನಡೆಸುತ್ತಿದೆ.ಧರ್ಮದ ಗುರಾಣಿಯನ್ನು ಅಡ್ಡ ತಮದು ವ್ಯವಸ್ಥೆ ಬುಡಮೇಲು ಮಾಡುವುದನ್ನು ಅತ್ಯಗ್ರವಾಗಿ ಖಂಡಿಸುತ್ತೇನೆ. ಗುಂಪು ಹಲ್ಲೆ ನಡೆಸಿದವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕಾನೂನು ಅಸ್ತ್ರ ಪ್ರಯೋಗಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here