ನಿರೂಪಣೆ: ಶ್ರೀಜ್ಞ
ಸ್ಕ್ರೀನ್ಗಳ ಮೇಲೆ ಹೀರೋ, ಹೀರೋಯಿನ್, ವಿಲನ್ ಹೀಗೆ ಸಿನಿಮಾ ನಟ-ನಟಿಯನ್ನು ನೋಡಿ ನಾವೂ ಒಂದು ದಿನ ದೊಡ್ಡ ಸ್ಟಾರ್ಗಳಾಗಬೇಕು, ನಾವೂ ತೆರೆಯ ಮೇಲೆ ಮಿಂಚಬೇಕು ಅನ್ನೋ ಕನಸು ಕಾಣುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ಆದರೆ ಸಿನಿಮಾ ಲೋಕ ಅದು ಮಾಯಲೋಕ, ಬಣ್ಣದ ಲೋಕ. ಆ ಲೋಕವನ್ನು ಪ್ರವೇಶಿಸಿ ಅಲ್ಲಿ ಸೈ ಎನಿಸಿಕೊಳ್ಳುವುದು ಸುಲಭದ ಮಾತಲ್ಲ. ನೀವು ಚೆನ್ನಾಗಿ ಆಕ್ಟ್ ಮಾಡಿದ್ದೀರಿ ಎಂದು ಸಿನಿಮಾ ನೋಡಿದ ಅಭಿಮಾನಿಗಳು ಆಡುವ ಮಾತಿನ ಮುಂದೆ ಯಾವ ಬಹುಮಾನವೂ ಸಮವಿಲ್ಲ.
ಹೀಗೆ ಸಿನಿಮಾ ಲೋಕದಲ್ಲಿ ಸದ್ದು ಮಾಡುತ್ತಿರುವ ತುಳುನಾಡಿನ ನೆಚ್ಚಿನ ನಟ, ಬಹುಮುಖ ಪ್ರತಿಭೆ ಶ್ರೀ ಬಂಗೇರ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರಿನ ಮುರತ್ತಂಗಡಿಯ ಈ ಹುಡುಗ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ.
ಶ್ರೀ ಬಂಗೇರ ಅವರಿಗೆ ಬಾಲ್ಯದಿಂದಲೂ ನಟನೆಯತ್ತ ಏನೋ ಸೆಳೆತ. ಆ ಸೆಳೆತವೇ ಅವರನ್ನು ಸಿನಿಲೋಕಕ್ಕೆ ಕರೆದುಕೊಂಡು ಹೋಯಿತು ಎಂದರೆ ತಪ್ಪಲ್ಲ.
ಕನಸೊಂದಿದ್ದರೆ ಸಾಕಾಗಲ್ಲ, ಅಭ್ಯಾಸವೂ ಬೇಕು. ಕಲಿಯಬೇಕೆಂಬ ಹಠ ಬೇಕು. ಅನಿಮೇಷನ್ ಕೋರ್ಸ್ ಮುಗಿಸಿ ಮಹಾನಗರಿ ಬೆಂಗಳೂರಿಗೆ ತೆರಳಿದ ಶ್ರೀ ಬಂಗೇರ ಅವರಿಗೆ ನಟನಾ ಪಾಠ ಶಾಲೆ ಆಗಿದ್ದು ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಆಕ್ಟಿಂಗ್ ಸ್ಕೂಲ್.
ಬೆಂಗಳೂರಿನ ಫೈವ್ಸ್ಟಾರ್ ಹೋಟೆಲ್ನಲ್ಲಿ ಸೂಪರ್ವೈಸರ್ ಆಗಿ ಸೇರಿಕೊಂಡಿದ್ದ ಇವರು ಪ್ರತೀ ದಿನ ಕೆಲಸದ ಮುಗಿಸಿಕೊಂಡು ಸೀದಾ ಹೋಗ್ತಾ ಇದ್ದಿದ್ದು ಟೆಂಟ್ ಸಿನಿಮಾ ಆಕ್ಟಿಂಗ್ ಸ್ಕೂಲಿಗೆ. ಅಲ್ಲಿ ನಿರಂತರವಾಗಿ ನಟನಾ ಅಭ್ಯಾಸದಲ್ಲಿ ತೊಡಗಿಸಿಕೊಂಡರು. ದುಡಿಮೆಯ ಜೊತೆಗೆ ಸಿನಿಮಾ ನಟನೆಯ ಕಲಿಕೆಯನ್ನೂ ಮುಂದುವರಿಸಿದರು.
ಇವರು ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದು “ಮದಿಪು” ಸಿನಿಮಾದ ಮೂಲಕ. ಶ್ರೀಬಂಗೇರ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳಲ್ಲಿ ಮದಿಪು ಕೂಡಾ ಒಂದು. ಈ ತುಳು ಚಿತ್ರಕ್ಕೆ ಪ್ರಾದೇಶಿಕ ಭಾಷೆಗಳ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯೂ ದಕ್ಕಿತು.
ಬಳಿಕ ರಂಗಿತರಂಗ ಖ್ಯಾತಿಯ ನಟಿ ರಾಧಿಕಾ ಚೇತನ್ ನಟಿಸಿದ್ದ “ಅಸತೋಮಾ ಸದ್ಗಮಯ” ಚಿತ್ರದಲ್ಲಿ ಫೋಟೋಗ್ರಾಫಿಯಲ್ಲೂ ತಮ್ಮ ಕೈ ಚಳಕ ತೋರಿಸಿದರು.
ಹೀಗೆ ಇವರ ಸಿನಿ ಪಯಣ ‘ಸಾಗುತ ದೂರ ದೂರ’, ‘ತೊಟ್ಟಿಲು’, ‘ ಅನುಕ್ತ’ ಮುಂತಾದ ಚಿತ್ರಗಳವರೆಗೂ ಬೆಳೆಯಿತು.
ಇನ್ನಷ್ಟೇ ತೆರೆ ಕಾಣಬೇಕಿರುವ ಹೊಸ ತುಳು ಸಿನಿಮಾ ರಾಕೆಟ್ನಲ್ಲಿ ನಟನೆ ಜೊತೆ ಜೊತೆಗೆ ಕ್ಯಾಮರಾದಲ್ಲೂ ತಮ್ಮ ಬಹುಮುಖ ಪ್ರತಿಭೆಯನ್ನು ಅನಾವರಣ ಮಾಡುತ್ತಿದ್ದಾರೆ.
‘ತಿಳಿಯದ ಆಯಾಮ’ ‘ಅನ್ಮೋಲ್ ‘ಚಿತ್ರದಲ್ಲಿ ಕ್ಯಾಮರಾಮ್ಯಾನ್ ಆಗಿ ಕೆಲಸ ಮಾಡಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ಸದಸ್ಯರಾಗಿರುವ ಶ್ರೀಬಂಗೇರ ‘ಶಾಂಭವಿ ಕಲಾವಿದರು ಸಾಣೂರ್’ನ ಮಾರ್ಗದರ್ಶಕರಾಗಿ, ಬಾಲಾಂಜನೇಯ ಯುವಕರ ಸಂಘದಲ್ಲೂ ತೊಡಗಿಸಿಕೊಂಡಿದ್ದಾರೆ.
ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಾಗಿರುವ ಸರಿಗಮಪ ಮತ್ತು ಡ್ರಾಮಾ ಜೂನಿಯರ್ದಲ್ಲೂ ಶ್ರೀಬಂಗೇರ ಕೆಲಸ ಮಾಡಿದ್ದಾರೆ.
ಸದ್ಯಕ್ಕೆ ಕೊರೋನಾ ಲಾಕ್ಡೌನ್ ಕುರಿತ “ಕಾಡು +ಮನುಷ್ಯ” ಎನ್ನುವ ಕಿರುಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು ಶೀಘ್ರವೇ ಆ ಕಿರುಚಿತ್ರ ಬಿಡುಗಡೆ ಆಗಲಿದೆ.
All the Best Bro ❣️