ಸಿಎಎ ವಿರೋಧಿ ಹೋರಾಟ ಹಾದಿ ತಪ್ಪಿದ್ದೆಲ್ಲಿ..?

ಅಬ್ದುಲ್‌ ಮುನೀರ್‌ ಕಾಟಿಪಳ್ಳ- ಡಿವೈಎಫ್‌ಐ ರಾಜ್ಯಾಧ್ಯಕ್ಷ

ಅಮೂಲ್ಯ ಘೋಷಣೆ ಪ್ರಕರಣದ ನಂತರ NRC, CAA ಹೋರಾಟದ ಸ್ವರೂಪದ ಕುರಿತು ಚರ್ಚೆ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳ ಪ್ರತಿಭಟನಾ ಸಭೆಗಳ ವಿಧಾನದ ಕುರಿತು ನನಗೆ ಆರಂಭದಲ್ಲೆ ಆತಂಕ ಉಂಟಾಗಿತ್ತು. ಆ ಆತಂಕದಿಂದಲೆ ದಕ್ಷಿಣ ಕ‌ನ್ನಡ ಜಿಲ್ಲೆಯಲ್ಲಿ‌ ಜಾತ್ಯಾತೀತ ಪಕ್ಷ, ಸಂಘಟನೆಗಳನ್ನು ಒಂದು ವೇದಿಕೆಗೆ ತಂದು ಹೋರಾಟ ನಡೆಸುವ ಪ್ರಯತ್ನ ನಡೆಸಿದ್ದೆವು. ಅವಿಭಜಿತ ದಕ್ಷಿಣ ಕನ್ನಡದಲ್ಲಿ NRC, CAA ವಿರೋಧಿ ಸಭೆಗಳನ್ನು ಆಯೋಜಿಸಿದ್ದು ಮುಸ್ಲಿಂ ಸಮುದಾಯ. ಭಾಷಣಕಾರರು ಮಾತ್ರ ಎಲ್ಲಾ ಸಮುದಾಯಗಳಿಗೆ ಸೇರಿದವರು ಇರುತ್ತಿದ್ದರು. ರಾಷ್ಟ್ರ ಧ್ವಜ, ದೇಶಪ್ರೇಮಿ ಘೋಷಣೆಗಳು ಸಭೆಗಳಲ್ಲಿ ಎದ್ದು ಕಾಣುವ ಮೂಲಕ‌ ಮುಸ್ಲಿಮೇತರರು ಭಾಗವಹಿಸುತ್ತಿಲ್ಲ ಎಂಬ ಕೊರತೆಯನ್ನು ಅಲ್ಪಸ್ವಲ್ಪ ನೀಗಿಸುತ್ತಿದ್ದವು.

NRCಯಿಂದ ಭೀತಿಗೊಂಡಿದ್ದ ಮುಸ್ಲಿಂ ಸಮುದಾಯ ಸಹಜವಾಗಿಯೇ ಈ ಹೋರಾಟವನ್ನು ಕಟ್ಟಲು ತನ್ನ ಎಲ್ಲಾ ಶ್ರಮವನ್ನು ವಿನಿಯೋಗಿಸಿದೆ. ಆದರೆ ಹೋರಾಟ, ಚಳವಳಿಗಳ ಅನುಭವ, ರಾಜಕೀಯ ತಿಳುವಳಿಕೆ, ಮುಂದಾಗಬಹುದಾದ ಪರಿಣಾಮಗಳ ದೂರದೃಷ್ಟಿಯ ಕೊರತೆ ಇದ್ದ ಸಮುದಾಯ ಸಭೆಗಳ ವಿಧಾನ, ಭಾಷಣಕಾರರ ಆಯ್ಕೆಗಳಲ್ಲಿ ಎಡವುತ್ತಾ ಬಂತು. ಸಭೆಯ ಖರ್ಚು ವೆಚ್ಚಗಳಿಗೆ ಸಮುದಾಯದ ಜನ ಮುಂದಾಗಿ ದೇಣಿಗೆಯನ್ನು ಉದಾರವಾಗಿ ನೀಡತೊಡಗಿದರು.ಅದರಿಂದ ಹೋರಾಟ, ಸಮಾವೇಶಗಳೂ ಒಂದಿಷ್ಟು ಐಶಾರಾಮಿ ಸ್ವರೂಪ ಪಡೆಯಿತು.

ಒಂದೆಡೆ ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳಿಗೆ ವೇದಿಕೆಗಳಲ್ಲಿ ಅವಕಾಶ ನೀಡುವುದು,ಮತ್ತೊಂದೆಡೆ ಜನಪ್ರಿಯ ಭಾಷಣಕಾರರನ್ನು ಆಯ್ಕೆ ಮಾಡುವುದು ಆಯೋಜಕರಿಗೆ ಸವಾಲಿನ ಕೆಲಸ ಆಗಿತ್ತು. ಭಾಷಣಕಾರರನ್ನು ಆಯ್ಕೆ ಮಾಡುವಾಗ ಅನುಭವ ಇಲ್ಲದ ಆಯೋಜಕರು ಅಪರಿಚಿತರಾದ, ವಾಟ್ಸಪ್ ಗಳಲ್ಲಿ ವೈರಲ್ ಆದ ಭಾಷಣಕಾರರನ್ನು, ಅವರ ಹಿನ್ನಲೆ ಮುನ್ನಲೆ ಅರಿಯದೆ ಆಯ್ಕೆ ಮಾಡುವ ತಪ್ಪುಗಳನ್ನೂ ಮಾಡಿದರು. ಇದರಿಂದ ಕೋಮುವಾದ, ವ್ಯವಸ್ಥೆಯ ವಿರುದ್ದ ದಶಕಗಳ ಕಾಲ ಸೈದ್ದಾಂತಿಕ ಸ್ಪಷ್ಟತೆಯಿಂದ ಹೋರಾಟ ನಢೆಸಿದವರ ಜೊತೆಗೆ ಅಮೂಲ್ಯನಂತಹ ತೀರಾ ಅನನುಭವಿಗಳೂ, ಎಳೆಯರೂ ಸ್ಟಾರ್ ಭಾಷಣಕಾರರಾಗಿ ಕಾಣಿಸಿಕೊಂಡರು.

ಇಂತವರ ಮಾತುಗಳು ಮೊದಲೇ “ಯುದ್ದಗ್ರಸ್ತ” ತುಳುನಾಡಿನಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಸೃಷ್ಟಿಯಾಗುವ ಸಾಧ್ಯತೆಗಳು ಗೋಚರಿಸತೊಡಗಿತು. ಆದರಿಂದ ನಾನು ಸೇರಿದಂತೆ ಒಂದಿಬ್ಬರು ಇಂತಹ ವೇದಿಕೆಗಳಿಂದ ಬಹುತೇಕ ದೂರ ಉಳಿದೆವು.ನಾನಂತು ದಕ್ಷಿಣ ಕನ್ನಡದಲ್ಲಿ ಇಂತಹ ಕೇವಲ ಒಂದು ಸಭೆಯಲ್ಲಿ ಮಾತ್ರ ಭಾಗವಹಿಸಿದ್ದೆ. ಕನಿಷ್ಟ 10 ಕಡೆ ಆಹ್ವಾನ ನಿರಾಕರಿಸಿದೆ.

ಈ ಮಧ್ಯೆ ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿ ಒಂದು ಕೆಟ್ಟ ಅನುಭವ ನನಗಾಯಿತು.ಅಂದು ವೇದಿಕೆಯಲ್ಲಿನನಗಿಂತ ಮೊದಲು ಮುಸ್ಲಿಮರ ಒಂದು ಪಂಗಡಕ್ಕೆ ಸೇರಿದ, ಇನ್ನೂ ಇಪ್ಪತ್ತೈದರ ಹರೆಯದ ಓರ್ವ ಎಳೆಯ ಧಾರ್ಮಿಕ ಗುರು ಭಾಷಣ ಮಾಡಿದರು‌ (ಆ ಸಭೆಯಲ್ಲಿ ಮಾಜಿ ಮಂತ್ರಿ ಸೊರಕೆ ಸೇರಿದಂತೆ ಹಲವು ಹಿರಿಯರಿದ್ದರು) ಆ ಹುಡುಗನ ಭಾಷಣದ ಆವೇಶ ಹೇಗಿತ್ತು ಅಂದರೆ, ಬಿಜೆಪಿ ಬಿಡಿ, ಹಿಂದುಗಳೇ…ಎಂದು ಅಬ್ಬರಿಸತೊಡಗಿದ.

ವೇದಿಕೆಯಲ್ಲಿ ಇದ್ದ ಹಿರಿಯರು ಸೇರಿದಂತೆ ಇನ್ನುಳಿದ ಧಾರ್ಮಿಕ ಗುರುಗಳು ಆತನ ಭಾಷಣ ಮುಗಿಯುವವರೆಗೂ ಚಡಪಡಿಸತೊಡಗಿದರು. (ಆತನ ನಂತರ ನಾನು‌ ಭಾಷಣ ಮಾಡಿದೆ. ಅದರ ವೀಡಿಯೊ ಇಲ್ಲಿ ಹಾಕಿದ್ದೇನೆ) ಅಂದು ಆತನ ಅಪಾಯಕಾರಿ ಭಾಷಣದ ಕುರಿತು ಸಮುದಾಯದ ಹಲವು ಮುಖಂಡರಿಗೆ ಎಚ್ಚರಿಸಿದೆ.

ಇಂತಹ ಹುಡುಗರಿಗೆ ವೇದಿಕೆ ನೀಡದಂತೆ ಮನವಿ ಮಾಡಿದೆ.‌NRC ಹೋರಾಟಗಳಲ್ಲಿ ಭಾಷಣಕಾರರಾಗಿ ತೆರಳುವ ಹಿರಿಯ ಭಾಷಣಕಾರರಿಗೂ ಜಾಗ್ರತೆ ವಹಿಸುವಂತೆ ಸೂಚಿಸಿದ್ದೆ. ಇಂದು ಅಮೂಲ್ಯ ಒಬ್ಬಳು ಚರ್ಚೆಯಾಗುತ್ತಿದ್ದಾಳೆ. ಆದರೆ ಇದು ಒಟ್ಟು ಆಯೋಜಕರ ಅನುಭವದ,ದೂರದೃಷ್ಟಿಯ ಕೊರತೆ. ಇನ್ನಾದರು ತಿದ್ದಿಕೊಳ್ಳಲು ಸಾಧ್ಯ ಆಗಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಪ್ರಭುತ್ವದ ವಿರುದ್ದದ ಚಳವಳಿ,ಹೋರಾಟ ಅಂದರೆ ಅದೊಂದು ತಪಸ್ಸು. ಭಾಷಣಗಳೆಂದರೆ ಪ್ರಭುತ್ವದಿಂದ ಬ್ರೈನ್ ವಾಶ್ ಮಾಡಲ್ಪಟ್ಟ ಜನ ಸಮೂಹವನ್ನು ಕನ್ವಿನ್ಸ್ ಮಾಡುವುದು‌. ಇಂತಹ ಹೋರಾಟ ಕಟ್ಟಲು ತೊಡಗಿಸಿಕೊಳ್ಳುವವರು ಕಷ್ಟ ನಷ್ಟಗಳಿಗೆ ಒಡ್ಡಿಕೊಳ್ಳಲು ಸಿದ್ದರಿರಬೇಕು.ಹೋರಾಟಗಳು, ಸಮಾವೇಶಗಳು ಐಶಾರಾಮಿ ಆದ ಕ್ಷಣ ಅದು ತನ್ನ ಕ್ರಾಂತಿಕಾರಿ ಗುಣ ಕಳೆದುಕೊಳ್ಳುತ್ತದೆ. ಮತ್ತದು ಒಂದು ಸಾಮಾನ್ಯ ಉತ್ಸವದಂತೆ ಕೊನೆಗೊಳ್ಳುತ್ತದೆ‌.

NRC, CAA ವಿರೋಧಿ ಹೋರಾಟ ಇಂತಹ ಸಭೆ, ಭಾಷಣಗಳಿಂದ ಆರಂಭಗೊಂಡದ್ದೂ ಅಲ್ಲ, ಕೊನೆಗೊಳ್ಳುವುದೂ ಇಲ್ಲ. ಮುಂದೆ ಇನ್ನಷ್ಟು ಗಟ್ಟಿಯಾಗಿ ದೃಢವಾಗಿ ಮುನ್ನಡೆಯಲಿದೆ. ಫ್ಯಾಸಿಸಂ ವಿರುದ್ದದ ಸಮರವಾಗಿ ಪರಿವರ್ತನೆಗೊಳ್ಳಲಿದೆ. ಗೆಲ್ಲಲಿದೆ. ಅದರ ಭಾಗವಾಗಲು ಸಿದ್ದರಾಗೋಣ. ಜನತೆಯ ಮನಪರಿವರ್ತನೆಯ ಮಾತುಗಳನ್ನು ಆಡೋಣ.

ನಾನು ಆರಂಭದಲ್ಲೆ ಈ ಅಪಾಯದ ಕುರಿತು ಎಚ್ಚರಿಸಿದ್ದೆ. ಹಿರಿಯರು, ಸಾಧಕರುಗಳು ಇರುವ ವೇದಿಕೆಗಳಲ್ಲಿ ಆವೇಶಗೊಂಡು ಈ ಎಳೆ ಪ್ರಾಯದ ಹಡುಗರು ಅತಿಯಾಗಿ ಭಾಷಣ ಮಾಡುವುದು ಕಂಡು ಆತಂಕಗೊಂಡಿದ್ದೆ. ಕನಿಷ್ಟ ಹತ್ತು ಕಡೆಯಲ್ಲಾದರು ಇಂತಹ ಭಾಷಣಕಾರರ ಹೆಸರಿರುವುದು ಕಂಡು ಕಾರ್ಯಕ್ರಮದಿಂದ ತಪ್ಪಿಸಿಕೊಂಡಿದ್ದೆ, ಭಾಗವಹಿಸಲು ನಿರಾಕರಿಸಿದ್ದೆ.

ಆಯೋಜಕರಿಗೂ ಈ ಕುರಿತು ಸ್ಪಷ್ಟವಾಗಿ ಕಾರಣ ಹೇಳಿ ಅಪಾಯದ ಕುರಿತು ಜಾಗೃತರಾಗುವಂತೆ ಸೂಚಿಸಿದ್ದೆ. ಉಡುಪಿಯ ಮೂಳೂರಿನಲ್ಲಿ ಇದೇ ಭಾನುವಾರ ನಡೆಯುವ ಸಭೆಗೆ ಅಮೂಲ್ಯ ಹೆಸರಿರುವುದು ಕಂಡು “ನಾನು ಭಾಗವಹಿಸಲಾರೆ” ಎಂದು ಮೊನ್ನೆಯಷ್ಟೆ ಹೇಳಿದ್ದೆ.

ಚಳವಳಿಯ, ಹೋರಾಟದ ಯಾವುದೇ ಕಷ್ಟ ಸುಖಗಳ ಅನುಭವ ಇಲ್ಲದ, ಒಂದೆರಡು ವೈರಲ್ ಭಾಷಣಗಳಿಂದಲೇ ಸಭೆಯ ಆಯೋಜಕರ ಗಮನ ಸೆಳೆದ ಈ ಎಳೆ ಹುಡುಗರು, ಕೇವಲ ಯುವ ಸಭಿಕರ ಚಪ್ಪಾಳೆ, ಶಿಳ್ಳೆಗಳಿಗೆ ಪೂರಕವಾಗಿ ಭಾಷಣ ಮಾಡುತ್ತಾರೆ. NRC ವಿರೋಧಿ ಸಮಾವೇಶಗಳ ಸ್ಟಾರ್ ಆಕರ್ಷಣೆಯಾಗಿ ಕಾಣಿಸಿಕೊಳ್ಳುತ್ರಿದ್ದಾರೆ.

ಸಹಜವಾಗಿ ದಿಢೀರ್ ಜನಪ್ರಿಯತೆ ಈ ಹುಡುಗರ ತಲೆ ತಿರುಗಿಸಿದೆ. ಈಗ ಅಮೂಲ್ಯ ಮಾತುಗಳು ಆಳುವ ಸರಕಾರದ,ಕೋಮುವಾದಿ ಶಕ್ತಿಗಳ ಕೈಗೆ ಅಪಪ್ರಚಾರಕ್ಕೆ, NRC ವಿರೋಧಿ ಹೋರಾಟದ ನೈತಿಕ ಶಕ್ತಿ ಕುಂದಿಸುವ ಆಯುಧವಾಗಿ ದೊರಕಿದೆ.

ಫ್ಯಾಸಿಸಂ ವಿರುದ್ದದ ಹೋರಾಟ ಫ್ಯಾಷನ್ ಆಗಬಾರದು. ವೇದಿಕೆ ಎಂಬುದು ಅಪ್ರಬುದ್ದರ, ಪ್ರತಿಗಾಮಿ ಶಕ್ತಿಗಳ ಪ್ರಚಾರ ಕಾರ್ಯಕ್ರಮವೂ ಆಗಬಾರದು.

LEAVE A REPLY

Please enter your comment!
Please enter your name here