ಸಾಲ ವಂಚಕ ಓಡಿಹೋದ 4 ವರ್ಷಗಳ ಬಳಿಕ ನಿದ್ದೆಯಿಂದ ಎಚ್ಚೆತ್ತ ಎಸ್‌ಬಿಐ – 411 ಕೋಟಿ ವಂಚನೆಗೆ ಈಗ ಸಿಬಿಐ ಕೇಸ್‌

ಇದು ಮತ್ತೊಂದು ವಿಜಯ್‌ ಮಲ್ಯ ರೀತಿಯ ವಂಚನೆ. ಬ್ಯಾಂಕುಗಳಿಗೆ 411 ಕೋಟಿ ರೂಪಾಯಿ ಸಾಲ ವಂಚಿಸಿರುವ ರಾಮ್‌ ದೇವ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ನ ಮಾಲೀಕರು ದೇಶ ಬಿಟ್ಟು ಓಡಿಹೋಗಿದ್ದಾರೆ.

ವಿಚಿತ್ರ ಅಂದ್ರೆ ವಂಚಕರು ದೇಶ ಬಿಟ್ಟು ಓಡಿಹೋದ ನಾಲ್ಕು ವರ್ಷಗಳ ಬಳಿಕ ಈಗ ಎಸ್‌ಬಿಐ ಇದೇ ಫೆಬ್ರವರಿ 25 ರಂದು ವಂಚಕರ ವಿರುದ್ಧ ಸಿಬಿಐಗೆ ದೂರು ನೀಡಿತ್ತು. ಕಂಪನಿಯ ಮಾಲೀಕರಾದ ಸುರೇಶ್‌ ಕುಮಾರ್‌, ನರೇಶ್‌ ಕುಮಾರ್‌ ಮತ್ತು ಸಂಗೀತಾ ವಿರುದ್ಧ ಸಿಬಿಐ ಏಪ್ರಿಲ್‌ 28ರಂದು ಎಫ್‌ಐಆರ್‌ ದಾಖಲಿಸಿದೆ.

2016ರಲ್ಲಿ ಕಂಪನಿಯನ್ನು ಎನ್‌ಪಿಎ (ಸಾಲ ಹಿಂದಿರುಗಿಸಲಾಗದ) ಕಂಪನಿಗಳ ಪಟ್ಟಿಗೆ ಸೇರಿಸಲಾಗಿತ್ತು. 2018ರಲ್ಲಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಗೆ ನೀಡಲಾದ ಮಾಹಿತಿ ಪ್ರಕಾರ ಮಾಲೀಕರು ದುಬೈಗೆ ಓಡಿಹೋಗಿದ್ದರು.

ಸದ್ಯ ಕಂಪನಿಯ ಮಾಲೀಕರ ವಿರುದ್ಧ ಸಿಬಿಐ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ.

ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್‌ ಕಂಪನಿಗಳಿಗೆ ರಾಮ್‌ ದೇವ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಬಾಸ್ಮತಿ ಅಕ್ಕಿ ರಫ್ತು ಮಾಡುತ್ತಿತ್ತು.

೪೧೦ ಕೋಟಿ ರೂಪಾಯಿ ಸಾಲ ವಂಚನೆಯಲ್ಲಿ ಎಸ್‌ಬಿಐಗೆ ಆಗಿರುವ ಮೋಸ 173.11 ಕೋಟಿ ರೂಪಾಯಿ. ಕೆನರಾ ಬ್ಯಾಂಕ್‌ಗೆ 76.09, ಯೂನಿಯನ್‌ ಬ್ಯಾಂಕ್‌ಗೆ 64.31 ಕೋಟಿ ರೂಪಾಯಿ, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 51.31 ಕೋಟಿ ರೂಪಾಯಿ, ಕಾಪೋರೇಷನ್‌ ಬ್ಯಾಂಕ್‌ಗೆ 36.91 ಕೋಟಿ ರೂಪಾಯಿ, ಐಡಿಬಿಐ ಬ್ಯಾಂಕ್‌ಗೆ 12.27 ಕೋಟಿ ರೂಪಾಯಿ ಸಾಲ ವಂಚನೆ ಆಗಿದೆ.

LEAVE A REPLY

Please enter your comment!
Please enter your name here