ಸಹಾಯ ವಂಚಿತ ಮುಂಬಯಿಯ ತ್ರಿಶಂಕು ಜೀವಿಗಳು

ಕೊರೊನಾ ಲಾಕ್ ಡೌನ್ ಎರಡು ತಿಂಗಳನ್ನು ಸಮೀಪಿಸುತ್ತಿದೆ. ಉದ್ಯೋಗ ಕಳಕೊಳ್ಳುವ ಭೀತಿಯ ಜತೆಗೆ ಬದುಕು‌ ದುಸ್ತರವಾಗತೊಡಗಿದೆ. ವಲಸೆ ಕಾರ್ಮಿಕರು ಪಲಾಯನ ಮಾಡುತ್ತಿರುವ ವೇಗವೂ ಹೆಚ್ಚುತ್ತಿದೆ.ಮುಂಬಯಿ ಕನ್ನಡಿಗರ ಬದುಕು ಈಗ ಹಳಿ ತಪ್ಪುವ ಕಡೆಗೆ ವಾಲುತ್ತಿರುವುದು ಸುಳ್ಳಲ್ಲ.

ಮುಂಬಯಿ ಕನ್ನಡಿಗರೆಂದರೆ ಹೊಟೇಲ್ ಉದ್ಯಮ ಮೊದಲ ಸಾಲಲ್ಲಿ ನಿಲ್ಲುತ್ತದೆ. ಕೊರೊನಾ ಮಾರಣ ಹೋಮ ಮಹಾರಾಷ್ಟ್ರದಲ್ಲಿ ಅದರಲ್ಲೂ ಮುಂಬಯಿಯಲ್ಲಿ ಎಗ್ಗಿಲ್ಲದೆ ಸಾಗುತ್ತಿದೆ. ಈ ಕಾರಣಕ್ಕಾಗಿ ಮೇ ಅಂತ್ಯದವರೆಗೆ ಲಾಕ್ ಡೌನ್ ಮುಂದುವರಿದಿದೆ. ಜೂನ್ ನಲ್ಲೂ‌ ಮುಂದುವರಿದರೆ ಆಶ್ಚರ್ಯವಿಲ್ಲ. ಹೊಟೇಲು ಉದ್ಯಮ ಅಕ್ಷರಶಃ ಧರಾಶಾಯಿಯಾಗುವ ಆತಂಕದಲ್ಲಿದೆ.

ಕಾನಡಿ(ಕನ್ನಡಿಗ) /ಮದ್ರಾಸಿ/ಶೆಟ್ಟಿ ( ತುಳುವರು/ಉಡುಪಿ-ಮಂಗಳೂರಿಗರು) ಗಳು ಇಲ್ಲಿ ಬಡವರ ಸಾಲಲ್ಲಿ ಬರುವುದೇ ಇಲ್ಲ.ಕಾರಣ ಎಲ್ಲರೂ ಹಣವಂತರೆಂದು ಅಲ್ಲ. ನಾವುಗಳು ಬಡತನವನ್ನು ಹೊರಗಿನವರಿಗೆ ತೋರಿಸುತ್ತಿಲ್ಲ. ನಮಗೆ ಆತ್ಮಗೌರವ ಮುಖ್ಯವಾಗಿರುತ್ತದೆ. ಆದ್ದರಿಂದ ಕೈಯೊಡ್ಡುವುದಿಲ್ಲ.

ಹಾಗಾದರೆ ಎರಡು ತಿಂಗಳ ಗೃಹಬಂಧನದ ಬಳಿಕವೂ ನಮ್ಮವರ ಸ್ಥಿತಿಗತಿ ಮೊದಲಿನಂತೆಯೇ ಇದೆಯೇ? ಖಂಡಿತಾ ಇಲ್ಲ.ಹಾಗಂತ ಈಗಲೂ ನಾವು ಯಾರ ಮುಂದೆಯೂ ಸ್ಥಿತಿಯ ಬಗ್ಗೆ ಹೇಳಿಕೊಳ್ಳಲಾರೆವು. ಸರಕಾರ ಮೊನ್ನೆಯಿಂದ ಹಲವು ಕಲ್ಯಾಣ ಯೋಜನೆಗಳನ್ನು ಘೋಷಿಸಿತ್ತು. ಇಪ್ಪತ್ತು ಲಕ್ಷಕೋಟಿಯ ಪ್ಯಾಕೇಜ್. ಹೆಚ್ಚಿನವರು ಎರಡು ಸಂಖ್ಯೆಯ ಪಕ್ಕದಲ್ಲಿ ಎಷ್ಟು ಶೂನ್ಯ ಬರುತ್ತದೆ. ಅದರಲ್ಲಿ ತಮ್ಮ ಪಾಲಿನದು ಎಷ್ಟು ಎಂದು ಲೆಕ್ಕ ಹಾಕುತ್ತಿದ್ದರೆ ಮುಂಬಯಿ ಕನ್ನಡಿಗನ ಪಾಲಿಗೆ ದಕ್ಕಿದ್ದು ಶೂನ್ಯ ವೇ ಎಂದು ಹೇಳಿದರೂ ತಪ್ಪಲ್ಲ.

ಅತ್ತ ಊರಿನ ದಾಖಲೆಗಳಲ್ಲಿ ಹೆಸರಿಲ್ಲ ಇತ್ತ ಮುಂಬಯಿಯಲ್ಲಿ ತನ್ನ ಹೆಸರಿನ ದಾಖಲೆಗಳನ್ನು‌ ಹೊಂದಿರದ ನಾನ್ ರೆಸಿಡೆನ್ಟ್ ಆಫ್ ಕರ್ನಾಟಕ ಸರಕಾರದ ಯಾವ ಲಾಭಗಳನ್ನೂ ಪಡೆಯಲು ಯೋಗ್ಯನಲ್ಲವಾಗಿರುತ್ತಾನೆ.

ಊರಿನಲ್ಲಿ ಪಿತ್ರಾರ್ಜಿತ ಆಸ್ತಿಗಳಿದ್ದರೂ ಕೇಂದ್ರ-ರಾಜ್ಯ ಸರಕಾರದ ಕೃಷಿಕರಿಗೆ ನೀಡುವ ಯಾವ ನೆರವಿನಲ್ಲೂ ಮುಂಬಯಿಯ ಪಾಲುದಾರ ಬಂಧುವಿಗೆ ಸಿಗುವುದೂ ಇಲ್ಲ. ಆತ ಕೇಳುವ ಮನಸ್ಸನ್ನೂ ಹೊಂದಿರುವುದಿಲ್ಲ. ವರ್ಷಕ್ಕೊಮ್ಮೆ ಊರಿಗೆ ಹೋಗಿ ಬರುವಾಗ ಸಿಕ್ಕ ಇಪ್ಪತ್ತೈದು ತೆಂಗಿನಕಾಯಿಯಷ್ಟೇ ಲಾಭ.

ಇಲ್ಲಿ ಹೊಟೇಲು,ಕ್ಯಾಂಟೀನ್, ಪಾನ್ ಶಾಪ್ ಗಳಲ್ಲಿ ದುಡಿಯುವವರು ಅಥವಾ ನಡೆಸುವವರು ಯಾವ ದಾಖಲೆಗಳ ಆಧಾರದಲ್ಲಿ ಸರಕಾರಿ ಸವಲತ್ತುಗಳನ್ನು ಪಡಕೊಂಡಾರು? ಮುಂಬಯಿಯಲ್ಲಿರುವ ತುಳುವ ಕನ್ನಡಿಗರು ವಲಸೆ ಕಾರ್ಮಿಕರ ಪಟ್ಟಿಯಡಿಯಲ್ಲೂ ಪರಿಗಣಿಸಲ್ಪಡುತ್ತಿಲ್ಲ. ಒಂದು ವೇಳೆ ಪರಿಗಣಿಸಲ್ಪಡುತ್ತಿದ್ದರೆ ತಮ್ಮನ್ನು ಊರಿಗೆ ಕಳುಹಿಸಿಕೊಡಿ ಎನ್ನುವ ಬೇಡಿಕೆ ಅರಣ್ಯ ರೋದನವಾಗುತ್ತಿರಲಿಲ್ಲ.

ಯಾಕೆ ಊರಿಗೆ ಹೋಗುತ್ತಿಲ್ಲವೇ …ಊರವರು ಉತ್ತಮ ಕ್ವಾರನ್ಟೈನ್ ವ್ಯವಸ್ಥೆ ಮಾಡಿ ಅಹ್ವಾನಿಸುತ್ತಿದ್ದಾರಲ್ಲಾ…ಎಂದು ನೀವು ಕೇಳಬಹುದು. ‘ನಾವು ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಬಸ್ಸು ಇದೆ….’ಎಂದೆಲ್ಲಾ ಹೇಳಿ ಸಮಾಜಸೇವಕರಾಗಿ ಈಗ ಹಲವರು ಮೂಡಿಬಂದಿದ್ದಾರೆ. ಬಹಳ ಸಂತೋಷದ ಸಂಗತಿ.ಇವರೆಲ್ಲರ ಪ್ರಯತ್ನದಿಂದಾಗಿ ಹಲವರು ಊರು ಸೇರುವಂತಾಗಿದೆ.

ಆದರೆ ಬೇಸರದ ಸಂಗತಿ ಎಂದರೆ ಇದಕ್ಕಾಗಿ ಕನಿಷ್ಠ ಆರು ಸಾವಿರ ರೂಪಾಯಿವರೆಗೆ ಪಾವತಿಸಬೇಕಾಗಿರುವುದು. ದೇಶದ ಎಲ್ಲಾ ಕಡೆ ಎಲ್ಲಾ ರಾಜ್ಯಗಳು ಉಚಿತ ಪ್ರಯಾಣ ಕ್ಕೆ ವ್ಯವಸ್ಥೆ ಮಾಡಿದ್ದರೆ ಕನ್ನಡಿಗರಿಗೇಕೆ ಈ ರೀತಿಯ ಅನ್ಯಾಯ? ಇದ್ದ ಪುಡಿಗಾಸನ್ನು ಪ್ರಯಾಣ ಕ್ಕೆ ವ್ಯಯಿಸಿ ಮತ್ತೆ ಊರಲ್ಲಿ ಬದುಕುವುದಾದರೂ ಹೇಗೆ?

ಹೆಚ್ಚಿನ ನಮ್ಮವರು ಚಾಳ್ ಗಳಲ್ಲಿ ವಾಸಿಸುತ್ತಿರುವುದರಿಂದ ಕೊರೊನಾ ಭೀತಿ‌ ಹೆಚ್ಚಾಗಿ ಕಾಡತೊಡಗಿದೆ. ಕ್ಯಾಂಟೀನ್, ಪಾನ್ ಶಾಪ್ ನಡೆಸುತ್ತಿದ್ದವರು ಎರಡು ತಿಂಗಳು ಮನೆಯಲ್ಲಿ ಕೂತು ಉಂಡಿದ್ದರಿಂದ , ಇತ್ತ ವ್ಯಾಪಾರವೂ ನಡೆಸಲಾಗದೆ,ಅತ್ತ ಸರಕಾರದ ಲಾಭದಿಂದಲೂ ವಂಚಿತನಾಗಿ ಒದ್ದಾಡುತ್ತಿರುವುದು ಯಾರ ಕಣ್ಣಿಗೂ ಗೋಚರಿಸುವುದಿಲ್ಲ. ಆತ 10×10 ಕತ್ತಲ ರೂಮ್ ನೊಳಗೆ ಬಂಧಿಯಾಗಿ ಕಣ್ಣೀರು ಹಾಕುತ್ತಿರುವುದು ಆ ಕತ್ತಲಲ್ಲಿ ಕಾಣದಿರಬಹುದು.

ಮತ್ತೊಂದೆಡೆ ವೈಟ್ ಕಾಲರ್ ಜಾಬ್ ಎಂದು ಬೀಗುತ್ತಿದ್ದ ಹೆಚ್ಚಿನವರಿಗೆ ಸಂಬಳದಲ್ಲೂ ಭಾರೀ ಕಡಿತವಾಗಿದೆ. ಕೆಲವರಿಗೆ ಸಂಬಳದ ಬದಲು‌ ಕಿಂಚಿತ್ತು ಮುಂಗಡ ಹಣ ಎಂದು ನೀಡಲಾಗಿದೆ.ಈ ಮೊತ್ತವನ್ನು ಮುಂದೆ ಸಿಗಲಿರುವ ಸಂಬಳದಲ್ಲಿ ‌ಕಡಿತಗೊಳಿಸುವ ಇರಾದೆ ಮಾಲಕರದ್ದು ಇದ್ದರೂ ಇರಬಹುದು. ಈ ಕಿಂಚಿತ್ತ್ ಮೊತ್ತದಲ್ಲಿ ಮನೆ ಬಾಡಿಗೆ(ಅಥವಾ ಗೃಹಸಾಲದ ಇಎಮ್ ಐ),ಮಕ್ಕಳ ಟ್ಯೂಷನ್ ಫೀಸ್,ಎಲೆಕ್ಟ್ರಿಕ್ ಬಿಲ್,ಕೇಬಲ್,ಹಾಲು,ಗ್ಯಾಸ್,ದಿನಸಿ,ಬಿಪಿ-ಶುಗರ್ ಮಾತ್ರೆ ಎಂದೆಲ್ಲಾ ಖರ್ಚು ತೆಗೆಯಬೇಕು.

ಈ ಹಿಂದೆ ಸಂಪಾದಿಸಿಟ್ಟದ್ದು ಇಲ್ಲವೇ ಎಂದು ಕೇಳಬೇಡಿ…ಇಲ್ಲಿನ ಬದುಕಲ್ಲಿ ಉಳಿತಾಯ ಮಾಡಿದರೂ ವರ್ಷಕ್ಕೊಮ್ಮೆ ಊರಿಗೆ ಬರುವಾಗ ಅಥವಾ ಅಚಾನಕ್ಕಾಗಿ ಬರುವ ಅಸೌಖ್ಯ ಎಲ್ಲವನ್ನೂ ನುಂಗಿ ಹಾಕುತ್ತದೆ. ಕೋಟಿಗಳಲ್ಲಿ ಸಂಪಾದಿಸಿಟ್ಟ ಮಾಲಕನೇ ಒಂದು ತಿಂಗಳಿನಿಂದ ಉದ್ಯಮ(ಕಚೇರಿ) ಬಂದ್ ಇದೆ. ಸಂಪಾದನೆ ಇಲ್ಲ ಎಂಬ ಕಾರಣ ನೀಡಿ ಸಂಬಳ ನೀಡದಿರುವಾಗ ಬಡಪಾಯಿಗಳ ಬದುಕು ಹೇಗಾಗಬೇಡ.

ಕೆಲಸ ಸ್ಥಗಿತಗೊಂಡಿದೆ ಎಂಬ ಕಾರಣ ನೀಡಿ ಕಾರ್ಮಿಕರಿಗೆ ಸಂಬಳ ನೀಡದಿರಲಾಗದು ಎಂದು ಮೊನ್ನೆ ಮೊನ್ನೆ ಮುಂಬಯಿ ಹೈಕೋರ್ಟ್ ತೀರ್ಪು ನೀಡಿದ್ದರೂ ಯಾವನೇ ಉದ್ಯೋಗದಾತ ಅದನ್ನು ‌ಕಿವಿಗೆ ಹಾಕಿಕೊಳ್ಳಲಾರ.

ಸರಿ,ಲಘು,ಮಧ್ಯಮ ಉದ್ಯಮಗಳ ಪುನಶ್ಚೇತನಕ್ಕಾಗಿ ಸರಕಾರ ಆರ್ಥಿಕ ಸಹಾಯ ಘೋಷಿಸಿದ ಪರಿಣಾಮ ಉದ್ಯಮಗಳು ಉಳಿದು ಕೆಲಸ ಕಳಕೊಳ್ಳುವ ಭೀತಿ ಏನೋ ಕಡಿಮೆಯಾಗಬಹುದು. ಉದ್ಯೋಗಗಳಲ್ಲೂ 15 ಸಾವಿರಕ್ಕಿಂತ ಹೆಚ್ಚು ಸಂಬಳ ಇರುವವ,ಇಎಸ್ ಐ ಸೌಲಭ್ಯ ‌ಇಲ್ಲದವನಿಗೆ ಲಾಭಕ್ಕಿಂತ ನಷ್ಟವೇ. ಉದ್ಯೋಗದಾತನ ಪರವಾಗಿ ಹೋಗುತ್ತಿದ್ದ ಪಿಎಫ್ ನಲ್ಲಿ 2% ಕಡಿತದ ನಷ್ಟ ಅವನಿಗೆ.

ಮುಂಬಯಿಯಲ್ಲಿ‌ ವಿಡಿಯೋಗೇಮ್ ಸೆಂಟರ್ ಗಳಲ್ಲಿ ಕೆಲಸ ಮಾಡುವ ಒಂದು ವರ್ಗವೂ ಇದೆ. ಈ ಉದ್ಯಮ ಇನ್ನೂ ಕೆಲ ಸಮಯ ಆರಂಭ ಗೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ.ಇವರ ಮುಂಂದಿನ ಬದುಕು ಏನು, ಹೇಗೆ? ಒಂದೆಡೆ ಉದ್ಯೋಗವಿಲ್ಲದೆ ಸಂಬಳವಿಲ್ಲ, ಆದರೂ‌ ತಿಂಗಳ ಖರ್ಚುಗಳು ಮಾತ್ರ ಮೊದಲಿನಂತೆಯೇ ಸಾಗುತ್ತವೆ.

ಬೇಡಿ ತಿನ್ನುವಂತೆಯೂ ಇಲ್ಲ, ಸರಕಾರದ ಸೌಲಭ್ಯಗಳೂ ಇಲ್ಲ.ಆಹಾರಕಿಟ್ ಗಳನ್ನು ನೀಡುವ ಭರಾಟೆಯೂ ಕಡಿಮೆಯಾಗತೊಡಗಿದೆ. ಯಾರಲ್ಲಿ ಹೇಳೋಣ ಈ ಬದುಕಿನ ವೈಪರೀತ್ಯವ?

-ಏಳಿಂಜೆ ನಾಗೇಶ್,ಮುಂಬಯಿ

LEAVE A REPLY

Please enter your comment!
Please enter your name here