ಕೊರೋನಾ ಸಾಂಕ್ರಾಮಿಕ ನಿಯಂತ್ರಿಸುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿ, ಸಾರ್ವಜನಿಕರಿಗೆ ಷರತ್ತುಬದ್ಧ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೋಮವಾರ ಆದೇಶ ಹೊರಡಿಸಿದ್ದಾರೆ.
ಸವದತ್ತಿ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನ ಮತ್ತು ಜೋಗಳಭಾವಿ ಸತ್ತೆಮ್ಮ, ರಾಮದುರ್ಗದ ಗೊಡಚಿ ವೀರಭದ್ರೇಶ್ವರ, ರಾಯಬಾಗದ ಚಿಂಚಲಿ ಮಾಯಕ್ಕದೇವಿ, ಬೆಳಗಾವಿ ತಾಲ್ಲೂಕಿನ ಪಂತಬಾಳೇಕುಂದ್ರಿ ದತ್ತ ಮಂದಿರ, ಹುಕ್ಕೇರಿಯ ಬಡಕುಂದ್ರಿ ಹೊಳೆಮ್ಮದೇವಿ, ಕಾಗವಾಡದ ಮಂಗಸೂಳಿ ಮಲ್ಲಯ್ಯ, ಅಥಣಿ ತಾಲ್ಲೂಕಿನ ಖಿಳೇಗಾಂವ ಬಸವೇಶ್ವರ ಮತ್ತು ಕೊಕಟನೂರ ರೇಣುಕಾ ಯಲ್ಲಮ್ಮ ದೇವಸ್ಥಾನಗಳಿಗೆ ಕೊರೋನಾ ನಿಯಮಾವಳಿ ಅನುಸಾರ ಭಕ್ತರಿಗೆ ಪ್ರವೇಶ ನೀಡಬಹುದಾಗಿದೆ.
ಈ ಮೊದಲು ಫೆ.28 ರವರೆಗೆ ದೇವಸ್ಥಾನಗಳಿಗೆ ನಿರ್ಬಂಧ ವಿಧಿಸಿ ಮಾಡಿದ್ದ ಆದೇಶದಲ್ಲಿ ಸಡಿಲಿಕೆ ನೀಡಲಾಗಿದೆ. ದೇವಾಲಯಗಳಲ್ಲಿ ಜನಸಂದಣಿ ಸೇರುವಂತಹ ಎಲ್ಲ ಸೇವೆ, ವಿಶೇಷ ಉತ್ಸವ, ಜಾತ್ರೆ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಲಾಗಿದೆ. ದರ್ಶನಕ್ಕೆ ಬರುವವರು ಅಂತರದೊಂದಿಗೆ ಸರದಿ ಸಾಲಿನಲ್ಲಿ ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಸರ್ಕಾರದ ಮಾರ್ಗಸೂಚಿ ಅನ್ವಯ ಲಸಿಕೆ ಪಡೆದ 50 ಜನರನ್ನು ಮೀರಬಾರದು. ದೇವಾಲಯಗಳ ಪ್ರಾಂಗಣ ಪ್ರವೇಶ ಪೂರ್ವದಲ್ಲಿ ಸಾರ್ವಜನಿಕರ/ಭಕ್ತರ ದೇಹದ ಉಷ್ಣಾಂಶ ಪರಿಶೀಲಿಸಿ, ಸುಸ್ಥಿತಿಯಲ್ಲಿರುವವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು.
ದಿನ ನಿತ್ಯ ಜನಜಂಗುಳಿಗೆ ಅವಕಾಶ ಇರುವುದಿಲ್ಲ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದರ್ಶನಕ್ಕೆ ಮುಕ್ತಗೊಳಿಸಿದ ನಂತರ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ ಆದೇಶ ರದ್ದುಪಡಿಸಿ ದರ್ಶನ ನಿರ್ಬಂಧಿಸಲಾಗುವುದು. ಕೊರೋನಾ ಮಾರ್ಗಸೂಚಿ ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ನಿಯಮಗಳಂತೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹಿರೇಮಠ ಆದೇಶದಲ್ಲಿ ತಿಳಿಸಿದ್ದಾರೆ.
https://youtu.be/Jy4_u1fTxR0