ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಖಾಸಗೀಕರಣ.. ವ್ಯಾಪಕ ವಿರೋಧ

ಸರ್ಕಾರಿ ಸ್ವಾಮ್ಯದ ಏರ್‍ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಶೇಕಡಾ 100ರಷ್ಟು ಶೇರುಗಳನ್ನು ಮಾರಾಟ ಮಾಡಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಸರ್ಕಾರ ಪ್ರಕಟಣೆಯೊಂದನ್ನು ಹೊರಡಿಸಿದೆ. ಏರ್ ಇಂಡಿಯಾ ಖರೀದಿಸಲು ಇಚ್ಛಿಸುವವರು ಮಾರ್ಚ್ 17ರೊಳಗೆ ಬಿಡ್ಡಿಂಗ್‍ನಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಕೆ ಮಾಡಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೊತೆಗೆ 3.26 ಬಿಲಿಯನ್ ಡಾಲರ್ ಸಾಲದ ಹೊರೆಯನ್ನು ಸ್ವೀಕರಿಸಲು ಸಿದ್ಧವಾಗಿರಬೇಕೆಂದು ಸೂಚಿಸಲಾಗಿದೆ.

ಅಂತಾರಾಷ್ಟ್ರೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇಕಡಾ18.6ರಷ್ಟು ಪಾಲುದಾರಿಕೆ ಹೊಂದಿರುವ ಏರ್ ಇಂಡಿಯಾದಲ್ಲಿ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 2018ರಲ್ಲಿಯೂ ಏರ್ ಇಂಡಿಯಾದಲ್ಲಿನ ಅಧಿಕ ಪಾಲುದಾರಿಕೆಯನ್ನು ಸಿಂಗಲ್ ಬಿಡ್‍ನಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ವಿಫಲ ಯತ್ನ ನಡೆಸಿತ್ತು.

ಕೇಂದ್ರದ ನಿರ್ಧಾರಕ್ಕೆ ಬಿಜೆಪಿಯಲ್ಲೇ ತೀವ್ರ ವಿರೋಧ
ಏರ್ ಇಂಡಿಯಾ ಖಾಸಗೀಕರಣಕ್ಕೆ ಮತ್ತೆ ಪ್ರಯತ್ನಗಳು ಶುರುವಾಗಿದೆ. ಇದು ದೇಶದ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿದೆ. ಇದನ್ನು ಮಾರಾಟ ಮಾಡಲು ನಾವು ಬಿಡುವುದಿಲ್ಲ. ಕೋರ್ಟ್ ಮೊರೆ ಹೋಗುತ್ತೇವೆ

ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ, ಆರ್ಥಿಕ ತಜ್ಞ ಸುಬ್ರಹ್ಮಣ್ಯನ್ ಸ್ವಾಮಿ ಟ್ವಿಟ್ಟರ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏರ್ ಇಂಡಿಯಾದ ನಷ್ಟದ ಪ್ರಮಾಣ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ, ಅದಕ್ಕೆ ಪ್ರೋತ್ಸಾಹ ನೀಡುವುದು ಬಿಟ್ಟು ಮಾರಾಟ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನೆ ಮಾಡಿದ್ದಾರೆ.

ಕಾಂಗ್ರೆಸ್‍ನಿಂದಲೂ ವಿರೋಧ
ಕೇಂದ್ರ ಸರ್ಕಾರದ ಖಜಾನೆ ಖಾಲಿ ಆಗಿದೆ. ಹೀಗಾಗಿಯೇ ಇಂತಹ ಕೆಲಸಕ್ಕೆ ಕೈ ಹಾಕಿದೆ ಎಂದು ಮಾಜಿ ಸಚಿವ ಕಪಿಲ್ ಸಿಬಲ್ ಆರೋಪಿಸಿದ್ದಾರೆ.

LEAVE A REPLY

Please enter your comment!
Please enter your name here