ಬಿಗ್‌ ಬ್ರೇಕಿಂಗ್‌ – ಸರ್ಕಾರಿ ನೌಕರರಿಗೆ ಒಂದೂವರೆ ವರ್ಷದ ಬಿಗ್‌ ಶಾಕ್‌..!

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ತಡೆಹಿಡಿದು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 2021ರ ಜೂನ್‌ವರೆಗೂ ತುಟ್ಟಿಭತ್ಯೆ ಜಾಸ್ತಿ ಮಾಡದಿರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೀರ್ಮಾನಿಸಿದೆ. ಈ ಆದೇಶ ಇದೇ ವರ್ಷದ ಜನವರಿಯಿಂದ ಪೂರ್ವಾನ್ವಯವಾಗಲಿದೆ.

ಕೇಂದ್ರ ಸರ್ಕಾರ ನಿರ್ಧಾರದಿಂದ 48.34 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು  65.26 ಲಕ್ಷ ಪಿಂಚಣಿದಾರರಿಗೆ ಅನ್ವಯ ಆಗಲಿದೆ. ಸದ್ಯಕ್ಕೆ ಒಟ್ಟು ವೇತನದಲ್ಲಿ ಶೇಕಡಾ 17ರಷ್ಟನ್ನು ತುಟ್ಟಿಭತ್ಯೆಯಾಗಿ ನೀಡಲಾಗುತ್ತಿದೆ.

ಒಂದು ವೇಳೆ ರಾಜ್ಯ ಸರ್ಕಾರಗಳು ಕೂಡಾ ಕೇಂದ್ರ ಸರ್ಕಾರದ ಹಾದಿಯಲ್ಲೇ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ತಡೆ ಹಿಡಿದರೆ ಆಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೊಕ್ಕಸಕ್ಕೆ ಬರೋಬ್ಬರೀ 1.20 ಲಕ್ಷ ಕೋಟಿ ರೂಪಾಯಿ (ಕರ್ನಾಟಕ ಬಜೆಟ್‌ನ ಅರ್ಧದಷ್ಟು) ಉಳಿತಾಯವಾಗಲಿದೆ. ಕೇಂದ್ರ ಸರ್ಕಾರದ ಪಾಲಿಗೆ  37,350 ಕೋಟಿ ರೂಪಾಯಿ ಉಳಿತಾಯವಾಗಲಿದೆ. ರಾಜ್ಯಗಳು ಇದೇ ನಿರ್ಧಾರ ಕೈಗೊಂಡರೆ ಆಗ ಅವುಗಳಿಗೆ 82,566 ಕೋಟಿ ರೂಪಾಯಿ ಉಳಿತಾಯ ಆಗಲಿದೆ.

ಜುಲೈ 1, 2021ರಿಂದ ತುಟ್ಟಿ ಭತ್ಯೆ ಮತ್ತೆ ಹೆಚ್ಚಳವಾಗಲಿದೆ. ಆದರೆ ಆಗ ಪೂರ್ವಾನ್ವಯ ಮಾಡಿ ಬಾಕಿ ಪಾವತಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ. ಉಳಿಕೆ ಹಣವನ್ನು ಆರೋಗ್ಯ ಕ್ಷೇತ್ರದಲ್ಲಿ ಬಳಸಿಕೊಳ್ಳುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here