ಸನ್ನಾಫ್‍ಗೆ ಸ್ವಸ್ತಿ.. ಆಧಾರ್ ಕಾರ್ಡ್‍ನಲ್ಲಿ ಮಹತ್ವದ ಬದಲಾವಣೆ

ಆಧಾರ್ ಕಾರ್ಡ್‍ನಲ್ಲಿ ಕಂಡು ಬರಲ್ಲ ರಿಲೇಶನ್‍ಶಿಪ್..
ಸನ್ನಾಫ್, ಡಾಟರಾಫ್, ವೈಫ್ ಆಫ್ ಬದಲು ಕೇರ್ ಆಫ್..
ಸದ್ದಿಲ್ಲದೇ ನಿರ್ಣಯ ಕೈಗೊಂಡ ಆಧಾರ್..
ಹೊಸ ಕಾರ್ಡ್ ತೆಗೆದುಕೊಂಡ್ರೂ, ಅಪ್‍ಡೇಟ್ ಮಾಡಿಸಿದರೂ ಆಟೋಮ್ಯಾಟಿಕ್ ಆಗಿ ಬದಲಾವಣೆ

ನಿಮ್ಮ ಮೊಬೈಲ್ ನಂಬರ್ ಬದಲಾಗಿದೆ. ಅದನ್ನು ಆಧಾರ್ ಕಾರ್ಡ್‍ನಲ್ಲಿ ಅಪ್‍ಡೇಟ್ ಮಾಡಿಸಲು ಆಧಾರ್ ಕೇಂದ್ರಕ್ಕೆ ಹೋಗುತ್ತೀರಿ. ನಿಮ್ಮ ಮೊಬೈಲ್ ನಂಬರ್ ಅಪ್‍ಡೇಟ್ ಆಗುತ್ತೆ.. ಆದರೆ, ಸನ್ನಾಫ್, ಡಾಟರಾಫ್ ಅಂತಾ ಇರೋ ಕಡೆಯೆಲ್ಲಾ ಕೇರಾಫ್ ಅಂತಾ ಆಗಿಬಿಟ್ಟಿರುತ್ತೆ. ಎಂದಿನಂತೆ ಇದು ಆಧಾರ್ ಕೇಂದ್ರದವರು ಮಾಡಿದ ಯಡವಟ್ಟು ಅಂತಾ ಭಾವಿಸಿದ್ರೆ ಅದು ನಿಮ್ಮ ತಪ್ಪಾಗುತ್ತೆ. ಅದನ್ನು ಬದಲಿಸಿ ಎಂದರೂ ಅವರು ಬದಲಿಸಲ್ಲ. ಇದಕ್ಕೆ ಕಾರಣ ಆಧಾರ್ ಸಾಫ್ಟ್‍ವೇರ್‍ನಲ್ಲಿ ಮಾಡಲಾದ ಬದಲಾವಣೆ.

ಆಧಾರ್ ಕಾರ್ಡ್‍ನಲ್ಲಿ ಬಂಧುತ್ವಕ್ಕೆ ಮಂಗಳ ಹಾಡಲಾಗಿದೆ. ಸನ್ನಾಫ್, ವೈಫಾಫ್, ಡಾಟರಾಫ್ ಜಾಗದಲ್ಲಿ ಕೇರಾಫ್ ಬಂದಿದೆ. 1 ಸೆಪ್ಟೆಂಬರ್ 2018ನಿಂದಲೇ ಈ ಬದಲಾವಣೆ ತರಲಾಗಿದೆ. ಆದರೆ, ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಿಸಿದವರಿಗಷ್ಟೇ ಈ ವಿಷಯ ಗೊತ್ತಾಗುತ್ತಿದೆ. ಈ ಸಂಬಂಧ ಹಲವು ಅನುಮಾನಗಳು ಈಗ ಉದ್ಭವಿಸುತ್ತಿವೆ.

ಭವಿಷ್ಯದಲ್ಲಿ ನಮ್ಮ ತಂದೆಯೋ, ಹೆಂಡತಿಯೋ, ಪತ್ನಿಯೋ, ತಾಯಿಯೋ.., ನಾನು ಸಹ ಭಾರತೀಯ ಅನ್ನೋದಕ್ಕೆ ಭವಿಷ್ಯದಲ್ಲಿ ಸಾಕ್ಷಿ ಇಲ್ಲವಾಗಬಹುದು.. ಎನ್‍ಆರ್‍ಸಿ ಜಾರಿ ಬಳಿಕ ತಮಗೆ ತಾವೇ ತಮ್ಮ ಪೌರತ್ವವನ್ನು ನಿರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿ ಆಗುತ್ತದೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಲಾಗುತ್ತಿದೆ. ಆಧಾರ್ ಕಾರ್ಡ್‍ನಲ್ಲಿ ಮಾತ್ರವಲ್ಲ, ಶೀಘ್ರ ಪಾಸ್‍ಪೋರ್ಟ್‍ನಲ್ಲಿ ಸಂಬಂಧಗಳಿಗೆ ಸ್ವಸ್ತಿ ಹೇಳಲು ಪ್ಲಾನ್ ಮಾಡಲಾಗಿದೆ. ವಾಸ್ತವದಲ್ಲಿ ಪೌರತ್ವ ಹೊಂದಲು ನಮ್ಮ ದೇಶ ಸೇರಿದಂತೆ ವಿದೇಶಗಳಲ್ಲೂ ಆಧಾರ್ ಕಾರ್ಡ್, ಪಾಸ್‍ಪೋರ್ಟ್‍ಗಳನ್ನು ಆಧಾರವಾಗಿ ಬಳಸಲಾಗುತ್ತದೆ. ಈ ಎರಡು ದಾಖಲೆಗಳ ಆಧಾರದ ಮೇಲೆಯೇ ಭಾರತೀಯ ಪೌರ ಎಂಬುದನ್ನು ದೃಡೀಕರಿಸಲಾಗುತ್ತದೆ.

ಸದ್ದಿಲ್ಲದೇ ಏಕೆ ಈ ಬದಲಾವಣೆ..?

ಸಾಮಾನ್ಯವಾಗಿ ಆಧಾರ್ ಕಾರ್ಡ್‍ಗೆ ಅಪ್ಲಿಕೇಷನ್ ಹಾಕುವಾಗ ತಂದೆ/ಪತಿಗೆ ಸಂಬಂಧಿಸಿದ ವಿವರಗಳನ್ನು ಕೇಳಲಾಗುತ್ತದೆ. ಅದರ ಆಧಾರದ ಮೇಲೆ ಆಧಾರ್ ಕಾರ್ಡ್‍ನಲ್ಲಿ ಬಂಧುತ್ವ ನಮೂದಿಸಲಾಗುತ್ತದೆ. ಈಗ ಹೊಸದಾಗಿ ಅಪ್ಲಿಕೇಷನ್ ಹಾಕಿದರೂ, ಈ ಹಿಂದೆ ನೀಡಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಲೇಬೇಕು. ಆದರೆ, ಸಂಬಂಧಗಳ ವಿವರ ಮಾತ್ರ ಆಧಾರ್ ಕಾರ್ಡ್‍ನಲ್ಲಿ ದಾಖಲಾಗಲ್ಲ. ಕೇರಾಫ್ ಎಂದು ನಮೂದಿಸಲಾಗುತ್ತದೆ. ಅಪ್‍ಡೇಟ್ ಮಾಡಿಸಲು ಹೋದಾಗ ಸಹ ಆಟೋಮ್ಯಾಟಿಕ್ ಆಗಿ ಸನ್ನಾಫ್, ಡಾಟರಾಫ್, ವೈಫಾಫ್ ಜಾಗದಲ್ಲಿ ಕೇರಾಫ್ ಬಂದುಬಿಟ್ಟಿರುತ್ತದೆ. ಈಗಾಗಲೇ ದೇಶದಲ್ಲಿ ಸಿಎಎ,ಎನ್‍ಆರ್‍ಸಿ, ಎನ್‍ಪಿಆರ್ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಪೌರತ್ವವನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀಡಲ್ಲ ಎಂದು ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಸಿಎಎ, ಎನ್‍ಆರ್‍ಸಿಗೆ ಭೂಮಿಕೆ ಸಿದ್ದಪಡಿಸುವ ಸಲುವಾಗಿಯೇ ಆಧಾರ್‍ನಲ್ಲಿ ಈ ಬದಲಾವಣೆ ಮಾಡಲಾಗಿತ್ತಾ ಎಂಬ ಪ್ರಶ್ನೆಗಳು ಈಗ ಮೂಡುತ್ತಿವೆ.

ಸಾಮಾನ್ಯವಾಗಿ ನಿರ್ದಿಷ್ಟವಾದ ಅಡ್ರೆಸ್ ಇಲ್ಲದ ಸಂದರ್ಭಗಳಲ್ಲಿ, ಮತ್ತೊಬ್ಬರ ಅಡ್ರೆಸ್ ಬಳಸುವಾಗ ಮಾತ್ರ ಕೇರಾಫ್ ಪದವನ್ನು ಬಳಸಲಾಗುತ್ತದೆ. ತಾತ್ಕಾಲಿಕ ವಿಳಾಸಕ್ಕೆ ಮಾತ್ರ ಕೇರಾಫ್ ಬಳಸಲಾಗುತ್ತದೆ. ಪರ್ಮನೆಂಟ್ ಅಡ್ರೆಸ್‍ಗೆ ಇದನ್ನು ಬಳಸುತ್ತಿರಲಿಲ್ಲ. ಈಗ ಆಧಾರ್ ಕಾರ್ಡ್‍ನಲ್ಲಿ ಕೇರಾಫ್ ಅಡ್ರೆಸ್ ಕಾಣಿಸಿಕೊಂಡಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದೆ.

ಕೆಲವರು, ಏನಿದು ಕೇರಾಫ್ ಅಂತಾ ಬಳಸಿದ್ದಾರೆ. ನಾವು ಹೇಳಿಯೇ ಇಲ್ಲವಲ್ಲ.. ವೈಫಾಫ್ ಇಲ್ಲ.. ಸನ್ನಾಫ್ ಇಲ್ಲ ಎಂದು ಸ್ಪಷ್ಟನೆ ಕೇಳಿಕೊಂಡು ನಮ್ಮ ಬಳಿ ಬರುತ್ತಾರೆ. ಆಗ ಇದು ಆಧಾರ್ ತಂತ್ರಾಂಶದಲ್ಲಿಯೇ ಆದ ಬದಲಾವಣೆ ಎಂದು ಹೇಳಿಕಳಿಸುತ್ತೇವೆ ಎನ್ನುತ್ತಾರೆ ಬೆಂಗಳೂರಿನ ದೊಡ್ಡಬಿದರಕಲ್ಲಿನ ಆಧಾರ್ ಕೇಂದ್ರದಲ್ಲಿ ಉದ್ಯೋಗಿ ಆಗಿರುವ ಅನಿಲ್ ಕುಮಾರ್.

ನಮ್ಮ ದೇಶದಲ್ಲಿ ಬಂಧುತ್ವಕ್ಕೂ, ಜನ ಕಲ್ಯಾಣ ಯೋಜನೆಗಳಿಗೂ ಅವಿನಾಭಾವ ಸಂಬಂಧವಿದೆ. ವಿಧವೆಯರಿಗೆ ಪಿಂಚಣಿ ಬರಬೇಕಂದ್ರೆ ಪತಿ ಹೆಸರು, ವಿವರ ನಮೂದಿಸುವುದು ಕಡ್ಡಾಯ. ಶಾಲೆಗಳಿಗ ಮಕ್ಕಳನ್ನು ಸೇರಿಸಬೇಕೆಂದರೇ, ಮೀಸಲಾತಿ ಪಡೆಯಬೇಕೆಂದರೆ, ಫೀ ರಿಯಮೆಂಬರ್ಸ್‍ಮೆಂಟ್.. ಮತ್ತಿತ್ತರ ಸೌಲಭ್ಯಗಳಿಗೆ ತಂದೆಯ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ಇದಕ್ಕೆ ಆಧಾರ್ ಕಾರ್ಡ್ ನೀಡಲೇಬೇಕಾಗುತ್ತದೆ. ಮುಂದೆ ಈ ಸೌಲಭ್ಯಗಳನ್ನು ಪಡೆಯುವಾಗ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವುದು ವಿದ್ಯಾರ್ಥಿಗಳ ಮಾತು.

ಎಫೆಕ್ಟ್ ಏನು..?

ನಿಮ್ಮ ತಂದೆಗೂ ನಿಮಗೂ ಆಸ್ತಿ ವಿವಾದ ಇದೆ ಎಂದಿಟ್ಟುಕೊಳ್ಳಿ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ ತಂದೆ ಇವರೇ ಎಂದು ಆಧಾರ ತೋರಿಸಬೇಕಾಗುತ್ತದೆ. ನಿಮ್ಮ ಬಳಿ ಬರ್ತ್ ಸರ್ಟಿಫಿಕೇಟ್ ಇದ್ದರೇ ಸರಿ. ಇಲ್ಲದಿದ್ದರೇ ಆಧಾರ್ ಕಾರ್ಡ್ ಆಧಾರವಾಬೇಕಾಗುತ್ತದೆ. ಆದರೆ, ಆಧಾರ್ ಕಾರ್ಡ್‍ನಲ್ಲಿ ಸನ್ನಾಫ್ ಹೋಗಿ ಕೇರಾಫ್ ಬಂದಿದೆ. ಹೀಗಾಗಿ ನಿಮಗಿದ್ದ ಏಕೈಕ ಆಧಾರವೂ ಇಲ್ಲದಂತೆಯೇ ಸರಿ. ಇದು ಕೇವಲ ಆಸ್ತಿ ವಿವಾದಕ್ಕೆ ಮಾತ್ರ ಸೀಮಿತವಾಗಿಲ್ಲ. ನಿತ್ಯ ಇಂತಹ ಎಷ್ಟೋ ಸಮಸ್ಯೆಗಳನ್ನು ಆಧಾರ್ ಕಾರ್ಡ್‍ನಲ್ಲಿ ಆದ ಬದಲಾವಣೆಯಿಂದ ಎದುರಿಸಬೇಕಾಗಿ ಬರುತ್ತದೆ.

LEAVE A REPLY

Please enter your comment!
Please enter your name here