ಸಚಿವ ಮಾಧುಸ್ವಾಮಿ ಖಾತೆ ಮತ್ತೆ ಬದಲಾವಣೆ – 9 ದಿನದಲ್ಲಿ 4 ಬಾರಿ ಖಾತೆ ಬದಲಾವಣೆ..!

ಒಂದೇ ದಿನದಲ್ಲಿ ಸಿಎಂ ಯಡಿಯೂರಪ್ಪ 2 ಬಾರಿ ಖಾತೆ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದು, ಪದೇ ಪದೇ ಖಾತೆ ಬದಲಾವಣೆಯಿಂದ ನೊಂದು ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದ್ದ ಸಚಿವ ಜೆ ಸಿ ಮಾಧುಸ್ವಾಮಿಗೆ ಆರಂಭದಲ್ಲಿ ಅವರ ಬಳಿಯಿದ್ದ ಸಣ್ಣ ನೀರಾವರಿ ಖಾತೆಯನ್ನೇ ಮತ್ತೆ ಕೊಡಲಾಗಿದೆ. ಇದರೊಂದಿಗೆ 9 ದಿನಗಳಲ್ಲಿ 4 ಬಾರಿ ಸಿಎಂ ಬಿಎಸ್​​ವೈ ಖಾತೆಗಳ ಮರುಹಂಚಿಕೆ ಮಾಡಿದ್ದಾರೆ.

ಹೊಸದಾಗಿ ಸಚಿವರಾದ ಸಿ ಪಿ ಯೋಗೇಶ್ವರ್​ಗೆ ಹಂಚಿಕೆ ಆಗಿದ್ದ ಸಣ್ಣ ನೀರಾವರಿ ಖಾತೆಯನ್ನು ವಾಪಸ್​ ಪಡೆದು ಮಾಧುಸ್ವಾಮಿ ಅವರಿಗೆ ನೀಡಲಾಗಿದೆ. ಮಾಧುಸ್ವಾಮಿ ಅವರಿಗೆ ನೀಡಲಾಗಿದ್ದ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ಯೋಗೇಶ್ವರ್​ಗೆ ಹಂಚಿಕೆ ಮಾಡಲಾಗಿದೆ.

ಸಿಎಂ ಯಡಿಯೂರಪ್ಪ ಸಿಎಂ ಆದ ಆರಂಭದಲ್ಲಿ ಮಾಧುಸ್ವಾಮಿಗೆ ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ನೀಡಲಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ 7 ಸಚಿವರು ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಖಾತೆ ಮರು ಹಂಚಿಕೆ ಮಾಡಲಾಗಿತ್ತು. ಈ ವೇಳೆ ಮಾಧುಸ್ವಾಮಿ ಬಳಿಯಿದ್ದ ಎರಡೂ ಖಾತೆಗಳನ್ನು ವಾಪಸ್​ ಪಡೆದು ವೈದ್ಯಕೀಯ ಶಿಕ್ಷಣ ಖಾತೆ ಮತ್ತು ಕನ್ನಡ-ಸಂಸ್ಕೃತಿ ಖಾತೆ ನೀಡಲಾಗಿತ್ತು.

ಆದರೆ ಸಣ್ಣ ನೀರಾವರಿ ಖಾತೆ ಕೈ ತಪ್ಪಿದ್ದರಿಂದ ಮಾಧುಸ್ವಾಮಿ ಕುಪಿತಗೊಂಡಿದ್ದರು. ಈ ನಡುವೆ ವೈದ್ಯಕೀಯ ಶಿಕ್ಷಣ ಖಾತೆ ವಾಪಸ್​ ಪಡೆದ ಕಾರಣ ಆರೋಗ್ಯ ಸಚಿವ ಡಾ ಕೆ ಸುಧಾಕರ್​ ಮುನಿಸಿಕೊಂಡಿದ್ದರು. ಖಾತೆ ಭಿನ್ನಮತ ಸರಿಪಡಿಸುವ ಸಲುವಾಗಿ ಸುಧಾಕರ್​ಗೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ವಾಪಸ್​ ನೀಡಲಾಯಿತು. ಮಾಧುಸ್ವಾಮಿಗೆ ಆನಂದ್​ ಸಿಂಗ್ ಬಳಿ ಇದ್ದ ಪರಿಸರ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಯಿತು.

ಆದರೆ ಪದೇ ಪದೇ ತಮ್ಮ ಖಾತೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಮಾಧುಸ್ವಾಮಿ ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣ ಬಳಿಕ ರಾಜೀನಾಮೆ ನೀಡಬಹುದು ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧುಸ್ವಾಮಿ ಖಾತೆ ನಾಲ್ಕನೇ ಬಾರಿ ಬದಲಾಗಿ ಈಗ ಮತ್ತೆ ಹಳೇ ಖಾತೆಗೆ ಬಂದು ನಿಂತಿದೆ.

LEAVE A REPLY

Please enter your comment!
Please enter your name here