ಸಂಚಾರಕ್ಕೆ ಮುಕ್ತವಾದ ಪಂಪ್ ವೆಲ್‌ ಫ್ಲೈಓವರ್-‌ ಟ್ರೋಲ್‌ ಪೇಜ್ ಗಳಿಗೆ ಧನ್ಯವಾದ ಹೇಳಿದ ನಳಿನ್‌ ಕುಮಾರ್

ಕಳೆದ ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ ಮಂಗಳೂರಿನ ಪಂಪ್ ವೆಲ್ ಫ್ಲೈ ಓವರ್ ಕೊನೆಗೂ ಪೂರ್ಣಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಫ್ಲೈ ಓವರ್ ನ್ನು ಉದ್ಘಾಟನೆಗೊಳಿಸಿದ್ದು, ವಾಹನ ಸಂಚಾರಕ್ಕೆ ಇಂದಿನಿಂದ ಫ್ಲೈ ಓವರ್ ಮುಕ್ತವಾಗಿದೆ.

ಪಂಪ್ ವೆಲ್ ಫ್ಲೈ ಓವರ್ ಉದ್ಘಾಟನೆ ಬಳಿಕ ಸುಧೀರ್ಘವಾಗಿ ಭಾಷಣ ಮಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಫ್ಲೈ ಓವರ್ ಕೆಲಸ ನಿಧಾನಗತಿಗೆ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.‌

ಕಾಂಗ್ರೆಸ್ ಮೇಲೆ ನೇರ ಆರೋಪಗಳನ್ನು ಮಾಡಿದ ಕಟೀಲ್, ಫ್ಲೈ ಓವರ್ ತಡವಾಗಲು ಈ ಹಿಂದಿನ ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಆಡಳಿತ ಮತ್ತು ಹಿಂದಿನ ಶಾಸಕ ಜೆ ಅರ್ ಲೋಬೋ ಮತ್ತು ಸಚಿವ ರಮಾನಾಥ್ ರೈ ಎಂದು ದೂರಿದ್ದಾರೆ.

ಪಂಪ್ವೆಲ್ ಫ್ಲೈ ಓವರ್ ಹತ್ತು ವರ್ಷಗಳ ಪ್ರಾಜೆಕ್ಟ್ ಅಲ್ಲ. 2016 ರಲ್ಲಿ ಮಹಾವೀರ ವೃತ್ತದಲ್ಲಿ ಕಲಶ ತೆಗೆದು 2017ರಲ್ಲಿ ಕಾಮಗಾರಿ ಆರಂಭವಾಯಿತು.‌ ಪಂಪ್ವೆಲ್ ಫ್ಲೈ ಓವರ್ ಕೇವಲ 2 ವರ್ಷ 2 ತಿಂಗಳಿನಲ್ಲಿ ಪೂರ್ಣಗೊಂಡಿದೆ ಎಂದು ಕಟೀಲ್ ಹೇಳಿದ್ದಾರೆ.

ಇದೇ ವೇಳೆ ಪಂಪ್ವೆಲ್ ವಿಚಾರವಾಗಿ ಟ್ರೋಲ್ ಮಾಡಿದ ಟ್ರೋಲ್ ಪೇಜ್ ಗಳಿಗೆ ಅಭಿನಂದನೆ ಸಲ್ಲಿಸಿದ ಕಟೀಲ್,ಖರ್ಚಿಲ್ಲದೆ ಟ್ರೋಲ್ ಪೇಜ್ ಗಳು ನನಗೆ ಪ್ರಚಾರ ನೀಡಿದೆ. ಇಡೀ ದೇಶಕ್ಕೆ‌ ನನ್ನ ಬಗ್ಗೆ ಮತ್ತು ಪಂಪ್ವೆಲ್ ಫ್ಲೈ ಓವರ್ ಬಗ್ಗೆ ತಿಳಿಸಿದೆ ಇದಕ್ಕಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಕಟೀಲ್ ವ್ಯಂಗ್ಯ ಮಾಡಿದ್ದಾರೆ

LEAVE A REPLY

Please enter your comment!
Please enter your name here