ಸಂಗಾತಿಯನ್ನು ಸೇರಲು 2000 ಕಿಲೋ ಮೀಟರ್‌ ನಡೆದ ಹುಲಿರಾಯ..!

ಋತುಮಾನ ಬದಲಾದಂತೆ ಪ್ರಾಣಿ ಪಕ್ಷಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದು ಸರ್ವೇಸಾಮಾನ್ಯ. ಅದರಲ್ಲೇನಿದೆ ಅಂತೀರಾ? ಇಲ್ಲೊಂದು ಹುಲಿ ತನ್ನ ಸಂಗಾತಿಯನ್ನು ಅರಸುತ್ತಾ ಸುಮಾರು 2000 ಕಿಲೋ ಮೀಟರ್‌ ದೂರ ನಡೆದಿದೆ.

ಅಚ್ಚರಿಯಾಯಿತೇ! ಹೌದು ತನ್ನ ಸಂಗಾತಿಯನ್ನು ಹುಡುಕಿಕೊಂಡು ಹುಲಿಯೊಂದು 2000 ಕಿಲೋ ಮೀಟರ್‌ ಸವಾರಿ ಮಾಡಿದೆ.ಈ ಹುಲಿಗೆ ಮ್ಯಾಪ್‌ ಟ್ರ್ಯಾಕಿಂಗ್‌ ಸಾಧನವನ್ನು ಅಳವಡಿಸಲಾಗಿದ್ದು, ಇದರ ಮಾಹಿತಿಯ ಮೇರೆಗೆ ಅದು ಎಷ್ಟು ದೂರ ಕ್ರಮಿಸಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್‌ ಕಸ್ವಾನ್‌ ಟ್ವೀಟ್‌ ಮಾಡಿದ್ದಾರೆ. ಜ್ಞಾನಗಂಗಾ ಅರಣ್ಯ ಪ್ರದೇಶದಲ್ಲಿ ಈ ಹುಲಿ ಇದ್ದು ಸೂಕ್ತವಾದ ಸಂಗಾತಿಯನ್ನು ಸೇರಲು ರಸ್ತೆ,ಹೊಲ-ಗದ್ದೆ,ಕಾಲುವೆ, ಅರಣ್ಯದಲ್ಲಿ ಅಲೆದಾಡಿದೆ.

ವಿಶೇಷವೆಂದರೆ ಹುಲಿಗಳು ತಮ್ಮ ಸಂಗಾತಿಯನ್ನು ಸೇರಲು ರಾತ್ರಿ ಹೊತ್ತು ಮಾತ್ರ ಅಲೆದಾಡುತ್ತವಂತೆ, ಅದರಂತೆ ಈ ಹುಲಿಯೂ ಕೂಡಾ ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತಾ ರಾತ್ರಿ ವೇಳೆ ತನ್ನ ಸಂಗಾತಿಗಾಗಿ ಹುಡುಕಾಟ ನಡೆಸಿದೆ ಎಂದು ಪ್ರವೀಣ್‌ ಹೇಳಿದ್ದಾರೆ.

ಅಂದ ಹಾಗೆ ಹುಲಿಗೆ ಸಂಗಾತಿ ಸಿಕ್ಕಿದೆಯೋ ಇಲ್ಲವೋ ಎಂಬ ಮಾಹಿತಿ ಇನ್ನೂ ಖಾತರಿಯಾಗಿಲ್ಲ. ಹುಲಿಗಳ ಚಲನವಲನಗಳ ಬಗ್ಗೆ ಗಮನವಿಡಲು ಅರಣ್ಯ ಇಲಾಖೆಯು ಮಾರ್ಚ್ 2019‌ ರಲ್ಲಿ ಈ ಹುಲಿಗೆ ರೇಡಿಯೋ ಕಾಲರ್ ಟ್ಯಾಗ್‌ ಅಳವಡಿಸಲಾಗಿದೆ.

ಅಲ್ಲದೇ ವಿಹೆಚ್ ಪಿ ರೇಡಿಯೋ ಮತ್ತು ಜಿಪಿಎಸ್‌ ಟ್ರ್ಯಾಕರ್‌ ಮೂಲಕ ಅದು ಅಲೆದಾಡಿದ ಸಮಯ ಮತ್ತು ಎಷ್ಟು ದೂರ ಕ್ರಮಿಸಿದೆ ಎಂದು ಲೆಕ್ಕ ಹಾಕಬಹುದಾಗಿದೆ ಎಂದು ಪ್ರವೀಣ್‌ ತಮ್ಮ ಟ್ವೀಟ್‌ ನಲ್ಲಿ ಹೇಳಿದ್ದಾರೆ.

LEAVE A REPLY

Please enter your comment!
Please enter your name here