ಸಂಕಷ್ಟದಲ್ಲಿರುವ ಖಾಸಗಿ ಬಸ್ಸು ನೌಕರರಿಗೆ ಮಾಲಕರು ಪರಿಹಾರ ಧನ ನೀಡಲಿ : ಡಿವೈಎಫ್ಐ

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿಯಾಗಿರುವ ಖಾಸಗಿ ಬಸ್ಸುಗಳಲ್ಲಿ ಕನಿಷ್ಟ ಹದಿನೈದು ಸಾವಿರದಷ್ಟು ಚಾಲಕರು, ನಿರ್ವಾಹಕರು ಸೇರಿದಂತೆ ವಿವಿಧ ರೀತಿಯ ಕಾರ್ಮಿಕರಿದ್ದಾರೆ. ಲಾಕ್ ಡೌನ್ ನಿಂದ ಕಳೆದ ಎರಡು ತಿಂಗಳ ಅವಧಿಯಲ್ಲಿ ಉದ್ಯೋಗ ಇಲ್ಲದೆ ಮನೆಯಲ್ಲಿ ಉಳಿದಿರುವ ಈ ವಿಭಾಗಕ್ಕೆ ಯಾವುದೇ ವೇತನ, ಸರಕಾರದ ಪ್ಯಾಕೇಜುಗಳು ದೊರಕಿಲ್ಲ. ಇದರಿಂದ ಬಸ್ಸು ನೌಕರ, ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿದ್ದು ಬಸ್ಸು ಮಾಲಕರು ತಕ್ಷಣವೇ ತಿಂಗಳಿಗೆ ತಲಾ ಐದು ಸಾವಿರದಂತೆ ಒಟ್ಟು ಹತ್ತು ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ ಒದಗಿಸಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಬಸ್ಸು ಮಾಲಕರ ಸಂಘವನ್ನು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ನಿಂದ ಉಂಟಾದ ಬಿಕ್ಕಟ್ಟು ಖಾಸಗಿ ಬಸ್ಸು ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದರಲ್ಲಿ ದುಡಿಯುವ ಹದಿನೈದು ಸಾವಿರದಷ್ಟು ಕಾರ್ಮಿಕರು ದುಡಿಮೆ ಇಲ್ಲದೆ ಮನೆಗಳಲ್ಲಿ ಉಳಿದಿದ್ದಾರೆ. ಖಾಸಗಿ ಸಾರಿಗೆ ಉದ್ಯಮಪತಿಗಳ ಗೊಂದಲಗಳಿಂದಾಗಿ ಬಹುತೇಕ ಬಸ್ಸು ನೌಕರರು ಕಾರ್ಮಿಕ ಇಲಾಖೆಗಳಲ್ಲಿ ನೊಂದಾವಣೆಗೊಂಡಿಲ್ಲ.

ದಶಕಗಳ ಕಾಲದ ದುಡಿಮೆಯ ಹೊರತಾಗಿಯು ಕಾರ್ಮಿಕ ಕಾಯ್ಧೆಯ ಯಾವ ಸವಲತ್ತುಗಳೂ ಅವರಿಗೆ ದೊರಕುತ್ತಿಲ್ಲ. ಲಾಕ್ ಡೌನ್ ಹಿನ್ನಲೆಯಲ್ಲಿ ಸರಕಾರ ಘೋಷಿಸಿದ ಪ್ಯಾಕೇಜುಗಳಲ್ಲಿಯೂ ಇವರನ್ನು ಹೊರಗಿಡಲಾಗಿದೆ. “ಎಲ್ಲಾ ನೌಕರರಿಗೂ ಲಾಕ್ ಡೌನ್ ಅವಧಿಯಲ್ಲಿ ರಜೆ ಸಹಿತ ಪೂರ್ಣ ವೇತನ ನೀಡಬೇಕು” ಎಂದು ಸರಕಾರದ ಆದೇಶ ಇದ್ದರೂ ಬಸ್ಸು ಮಾಲಕರು ಆರ್ಥಿಕ ಸಂಕಷ್ಟದ ಕಾರಣ ಮುಂದಿಟ್ಟು ಸರಕಾರದ ಆದೇಶವನ್ನು ಪೂರ್ಣವಾಗಿ ತಿರಸ್ಕರಿಸಿದ್ದಾರೆ.

ಇದರಿಂದಾಗಿ ಅಸಂಘಟಿತ ವಲಯದ ಬಸ್ಸು ಚಾಲಕ, ನಿರ್ವಾಹಕ ಸಹಿತ ಸಿಬ್ಬಂದಿಗಳು ವೇತನ ಸೇರಿದಂತೆ ಯಾವುದೇ ಆದಾಯ ಇಲ್ಲದೆ ಕಠಿಣ ಪರಿಸ್ಥಿತಿಗೆ ಈಡಾಗಿದ್ದಾರೆ. ಅವರ ಕುಟುಂಬಗಳು ಹಸಿವಿನಿಂದ ಕಂಗೆಟ್ಟಿವೆ. ದಿನದ ಹದಿನೈದು, ಹದಿನಾರು ತಾಸು ಯಾವುದೇ ಭದ್ರತೆ ಇಲ್ಲದೆ ದುಡಿಯುವ ಶ್ರಮ ಜೀವಿಗಳಾದ ಬಸ್ಸು ನೌಕರರನ್ನು ಈ ರೀತಿ ಕಡೆಗಣಿಸುವುದು ಸಲ್ಲದು‌.

ರಸ್ತೆ ತೆರಿಗೆ, ಆಸನ ತೆರಿಗೆ ವಿನಾಯತಿ, ಟಿಕೇಟ್ ದರ ಏರಿಕೆ ಸಹಿತ ಮಾಲಕರ ಪರವಾದ ಬೇಡಿಕೆಗಳನ್ನು ಸರಕಾರದ ಮುಂದಿಟ್ಟಿರುವ ಖಾಸಗಿ ಬಸ್ಸು ಮಾಲಕ ಸಂಘಗಳು ಅದೇ ಸಂದರ್ಭ ತಮ್ಮ ಬಸ್ಸುಗಳಲ್ಲಿ ದುಡಿಯುವ ಕಾರ್ಮಿಕರನ್ನು ಪೂರ್ಣವಾಗಿ ಕಡೆಗಣಿಸಿರುವುದು ಸರಿಯಲ್ಲ‌ ತಕ್ಷಣಕ್ಕೆ ತಿಂಗಳಿಗೆ ತಲಾ ಐದು ಸಾವಿರದಂತೆ ಎರಡು ತಿಂಗಳ ಒಟ್ಟು ಮೊತ್ತ ಹತ್ತು ಸಾವಿರ ರೂಪಾಯಿಗಳನ್ನು ಮಧ್ಯಾವಧಿ ಪರಿಹಾರವಾಗಿ ಬಸ್ಸು ನೌಕರರಿಗೆ ತಕ್ಷಣವೆ ಮಾಲಕರು ವಿತರಿಸುವಂತೆ ಮಾಲಕರ ಸಂಘಗಳು ಕ್ರಮ ಕೈಗೊಳ್ಳಬೇಕು.

ನಂತರ ಲಾಕ್ ಡೌನ್ ಅವಧಿಯ ಅವರ ವೇತನ, ಮುಂದಿನ ದಿನಗಳ ದುಡಿಮೆಯ ವಿಧಾನದ ಕುರಿತು ಒಂದು ನಿರ್ಧಾರಕ್ಕೆ ಬರಬೇಕು. ಸರಕಾರದ ಜೊತೆಯ ಮಾತುಕತೆಗಳ ಸಂದರ್ಭ ನೌಕರರ ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಬೇಕು ಎಂದು ಡಿವೈಎಫ್ಐ ಮಾಲಕರ ಸಂಘಟನೆಗಳನ್ನು ಒತ್ತಾಯಿಸುತ್ತದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here