ವೀರ್‌ ಸಾವರ್ಕರ್‌ ಹೆಸರು ಬದಲು ಸೋನಿಯಾ ಗಾಂಧಿ ಹೆಸರಿಡಬೇಕಿತ್ತಾ..? – ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು

ಬೆಂಗಳೂರಿನ ಯಲಹಂಕ ಮೇಲ್ಸೇತುವೆಗೆ ವೀರ್‌ ಸಾವರ್ಕರ್‌ ಹೆಸರು ಬದಲು ಸೋನಿಯಾ ಗಾಂಧಿ ಹೆಸರಿಡಬೇಕಿತ್ತೇ ಎಂದು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.

ಯಲಹಂಕ ಮೇಲ್ಸೇತುವೆ ವೀರ್‌ ಸಾವರ್ಕರ್‌ ನಾಮಕರಣ ಸಂಬಂಧ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ನಡುವೆ ಮಾತಿನ ಯುದ್ಧ ತೀವ್ರಗೊಂಡಿದೆ.

ಸ್ವಾತಂತ್ರ್ಯ ಸೇನಾನಿಗಳಾಗಿದ್ದ ಶ್ರೀ ವೀರ ಸಾವರ್ಕರ್ ಅವರ ಹೆಸರನ್ನು ಬೆಂಗಳೂರಿನ ಮೇಲ್ಸೇತುವೆಯೊಂದಕ್ಕೆ ನಾಮಕರಣ ಮಾಡುವ ಸಂಬಂಧ ನಮ್ಮ ಸರ್ಕಾರ ಸೂಕ್ತವಾದ ನಿರ್ಧಾರ ಕೈಗೊಂಡಿದೆ.

ಈ ನಿರ್ಧಾರವನ್ನು ವಾಸ್ತವವಾಗಿ ಎಲ್ಲ ಪಕ್ಷಗಳೂ ಸ್ವಾಗತಿಸ ಬೇಕಾಗಿತ್ತು. ಆದರೆ ದುರದೃಷ್ಟವಶಾತ್ ವಿರೋಧಪಕ್ಷಗಳು ಇದರಲ್ಲಿಯೂ ರಾಜಕೀಯದ ಅಪಸ್ವರ ಎತ್ತುತ್ತಾ ಮೊಸರಲ್ಲಿ ಕಲ್ಲು ಹುಡುಕುವ ಯತ್ನ ನಡೆಸುತ್ತಿರುವುದು ಖಂಡನೀಯ.

ವೀರ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಡಿ ಸೆರೆವಾಸ ಅನುಭವಿಸಿದ ರಾಷ್ಟ್ರ ಭಕ್ತರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದಿದ್ದರೆ ಸಾವರ್ಕರ್ ಅವರು ಎಷ್ಟೊಂದು ಧೀರ, ಅಪ್ರತಿಮ ಹೋರಾಟಗಾರ ಎಂಬುದು ಇವರಿಗೆ ಅರ್ಥವಾಗುತ್ತಿತ್ತು ಇಂತಹ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನಿಡದೆ ಮತ್ತೆ ಶ್ರೀಮತಿ ಸೋನಿಯಾ ಗಾಂಧಿಯವರ ಹೆಸರನ್ನಿಡಬೇಕಿತ್ತೇ?
ವಿರೋಧ ಪಕ್ಷದವರಿಗೆ ರಾಜಕೀಯ ಮಾಡಲು ಬೇಕಾದಷ್ಟು ಇತರ ವಿಷಯಗಳಿವೆ. ಆದರೆ ಸ್ವಾತಂತ್ರ ಹೋರಾಟಗಾರರ ವಿಷಯದಲ್ಲೂ ರಾಜಕೀಯ ಬೆರೆಸುತ್ತಿರುವುದು ಯಾರ ಓಲೈಕೆಗೆ?

ಇನ್ನಾದರೂ ರಾಷ್ಟ್ರಭಕ್ತರ ವಿಚಾರದಲ್ಲಿ, ಸ್ವಾತಂತ್ರ್ಯ ಹೋರಾಟಗಾರರ ವಿಚಾರದಲ್ಲಿ ವಿರೋಧಪಕ್ಷಗಳ ಮುಖಂಡರು ರಾಜಕೀಯ ಮಾಡದೇ ಗೌರವಪೂರ್ವಕವಾಗಿ ನಡೆದುಕೊಳ್ಳುವುದನ್ನು ಕಲಿಯುತ್ತಾರೆ ಎಂದು ನಿರೀಕ್ಷಿಸಬಹುದೇ? ಎಂದು ಲಕ್ಷ್ಮಣ ಸವದಿ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here