ವಿರೋಧಿ ಗುಂಪಲ್ಲಿದ್ದ ಸಂಬಂಧಿಗೆ ವಿಧಾನಸೌಧದಲ್ಲಿ ಕುರ್ಚಿ ಕೊಟ್ಟ ಯಡಿಯೂರಪ್ಪ..! – ಕಾಲಿಗೆ ಬಿದ್ದ ಸಂತೋಷ್‌..!

ಬಿಜೆಪಿಯಲ್ಲಿನ ರಾಜಕೀಯ ಬೇಗುದಿಯ ನಡುವೆ ಕೆಲ ದಿನಗಳಿಂದ ದೂರವಾಗಿದ್ದ ತಮ್ಮ ಸಂಬಂಧಿಯೂ ಆಗಿರುವ ಆಪ್ತ ಎನ್‌ ಆರ್‌ ಸಂತೋಪ್‌ರನ್ನು ಸಿಎಂ ಯಡಿಯೂರಪ್ಪ ತಮ್ಮ ರಾಜಕೀಯ ಕಾರ್ಯದರ್ಶಿ ಆಗಿ ನೇಮಿಸಿ ಅಚ್ಚರಿ ಮೂಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಇವತ್ತು ಸಿಎಂ ಬಿಎಸ್‌ವೈರನ್ನು ಭೇಟಿ ಆದ ಸಂತೋಷ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.

ತುಮಕೂರು ಮೂಲದ ಎನ್‌ ಆರ್‌ ಸಂತೋಷ್‌ ಯಡಿಯೂರಪ್ಪರ ಸಹೋದರಿಯ ಮಗಳ ಮಗ. ಯಡಿಯೂರಪ್ಪರ ಆರೋಗ್ಯ ನೋಡಿಕೊಳ್ಳಲೆಂದೇ ಬಂದ ಸಂತೋಷ್‌ ಬಳಿಕ ಬಿಎಸ್‌ವೈ ಪಾಳಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಬೆಳೆದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್‌ ಈಶ್ವರಪ್ಪ ಆಪ್ತರಾಗಿದ್ದ ವಿನಯ್‌ ಅಪಹರಣ ಪ್ರಕರಣದಲ್ಲಿ ಆರೋಪಿ ಆಗಿರುವ ೩೦ ವರ್ಷದ ಸಂತೋಷ್‌ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಲು ನಡೆದಿದ್ದ ಆಪರೇಷನ್‌ ಕಮಲದಲ್ಲಿ ಮುಂಚೂಣಿಯಲ್ಲಿದ್ದರು.

ಆದರೆ ಆಪರೇಷನ್‌ ಕಮಲ ಮುಗಿದ ಬಳಿಕ ಯಡಿಯೂರಪ್ಪ ಕುಟುಂಬಕ್ಕೂ ಸಂತೋಷ್‌ಗೂ ಸಂಬಂಧ ಬಿಗಾಡಿಯಿಸಿತು. ಬಿಎಸ್‌ವೈ ಅವರ ಪುತ್ರ ಬಿ ವೈ ವಿಜಯೇಂದ್ರ ಸಂತೋಷ್‌ರನ್ನ ಮನೆಯಿಂದಲೇ ದೂರ ಇಟ್ಟು ಆಟಕ್ಕೆಲ್ಲ ಕತ್ತರಿ ಹಾಕಿದ್ದರು.

ಸಿಎಂ ಆದ ಬಿಎಸ್‌ವೈ ಹುಟ್ಟುಹಬ್ಬ ಆಚರಿಸಿಕೊಳ್ಳುವ ವೇಳೆ ಸೋಷಿಯಲ್‌ ಮೀಡಿಯಾಗಳಲ್ಲಿ ಪತ್ರವೊಂದು ವೈರಲ್‌ ಆಗಿ ಆ ಬಳಿಕ ಅದು ದೊಡ್ಡ ಸುದ್ದಿಯೂ ಆಯಿತು. ಯಡಿಯೂರಪ್ಪ ಅವರ ವಯಸ್ಸಿನ ಬಗ್ಗೆ ಪ್ರಶ್ನೆ ಎತ್ತಿದ್ದ ಆ ಪತ್ರದಲ್ಲಿ ಬಿಎಸ್‌ವೈರನ್ನು ಅಧಿಕಾರದಿಂದ ಕೆಳಗಿಳಿಸಿ ನಾಯಕತ್ವ ಬದಲಾಯಿಸಬೇಕೆಂಬ ಆಗ್ರಹವನ್ನು ಹೈಕಮಾಂಡ್‌ಗೆ ಮಾಡಲಾಗಿತ್ತು. ಆ ರಹಸ್ಯ ಓಲೆಯ ಹಿಂದೆ ಸಂತೋಷ್‌ ಕೈ ಚಳಕ ಇತ್ತು ಎನ್ನುವುದು ಬಳ್ಳವರ ಮಾಹಿತಿ.

ಅಷ್ಟೇ ಅಲ್ಲದೇ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಶಾಸಕರ ಬಣದಲ್ಲೂ ಸಂತೋಷ್‌ ಕಾಣಿಸಿಕೊಂಡಿದ್ದರು. ಹೀಗಿದ್ದರೂ ಈಗ ಸಂತೋಷ್‌ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಮಾನ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.

ಮುನಿಸಿಕೊಂಡಿರುವ ಒಂದು ಕಾಲದ ಶಿಷ್ಯನನ್ನು ಸಮಾಧಾನಪಡಿಸಿ ಮತ್ತೆ ಆಪ್ತ ವಲಯಕ್ಕೆ ಸೇರಿಸಿಕೊಳ್ಳಲು ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನುವ ಮಾತು ಒಂದ್ಕಡೆಯಾದ್ರೆ ಮತ್ತೊಂದೆಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಾಯಕರ ಮೂಲಕ ಒತ್ತಡ ಹಾಕಿಸಿ ಸಂತೋಷ್‌ ವಿಧಾನಸೌಧದ ಮಹಡಿಯಲ್ಲಿ ಕುರ್ಚಿ ಗಿಟ್ಟಿಸಿಕೊಂಡಿದ್ದಾರೆ ಎನ್ನುವುದು ಮತ್ತೊಂದು ಮಾತು.

ಈಗಾಗಲೇ ಮೂವರು ಶಾಸಕರಾದ ರೇಣುಕಾಚಾರ್ಯ, ಎಸ್‌ ಆರ್‌ ವಿಶ್ವನಾಥ್, ಶಂಕ್ರಣ್ಣ ಮುನವಳ್ಳಿ ಸಿಎಂ ಅವರ ರಾಜಕೀಯ ಕಾರ್ಯದರ್ಶಿಗಳಾಗಿದ್ದಾರೆ.‌

LEAVE A REPLY

Please enter your comment!
Please enter your name here