`ವಿಧಾನ’ ರದ್ದು ಬೇಡ.. ಆಂಧ್ರ ಸಿಎಂ ಜಗನ್ ಅವರೇ ಕರ್ನಾಟಕ ನೋಡಿ…

ದೇಶದ ಎಲ್ಲೆಡೆ ಬ್ರಿಟೀಷರ ಆಡಳಿತ ಇದ್ದ ಸಂದರ್ಭವದು. ಮೈಸೂರು ಸಂಸ್ಥಾನವನ್ನು ಕೃಷ್ಣರಾಜ ಒಡೆಯರ್ ಅಳುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ಮೂಡಿದ ಪರಿಕಲ್ಪನೆಯಿಂದ ಏರ್ಪಾಟಾಗಿದ್ದೇ ಪ್ರಜಾ ಪರಿಷತ್ತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಪ್ರಜಾಪರಿಷತ್ತು ವಿಧಾನ ಪರಿಷತ್ತು ಆಗಿ ಬದಲಾಯಿತು. ಕರ್ನಾಟಕದ ವಿಧಾನ ಪರಿಷತ್ತಿನ 113 ವರ್ಷಗಳ ಇತಿಹಾಸದಲ್ಲಿ ಯಾವತ್ತು ಕೂಡ ವಿಧಾನಪರಿಷತ್‍ಗೆ ವಿರೋಧ ವ್ಯಕ್ತವಾಗಿಲ್ಲ. ಆದರೆ, ಆಂಧ್ರ ಪ್ರದೇಶದಲ್ಲಿ ಕೇವಲ ಒಂದು ವಿಧೇಯಕದ ಅನುಮೋದನೆಗಾಗಿ ವಿಧಾನ ಪರಿಷತ್ ರದ್ದತಿಯಂತಹ ಕೆಟ್ಟ ನಿರ್ಣಯಕ್ಕೆ ಅಲ್ಲಿನ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಬಂದಂತಿದೆ. ಇದು ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

ಸಮಾಜದಲ್ಲಿ ಒಂದು ವ್ಯವಸ್ಥೆ ಸಕ್ರಮವಾಗಿ ಸಾಗಲು ಮೇಧಾವಿಗಳು, ಜ್ಞಾನಿಗಳು, ವಿವಿಧ ರಂಗಗಳ ತಜ್ಞರ ಮಾರ್ಗದರ್ಶನ ಅತ್ಯವಶ್ಯಕ ಎಂದು ರಾಜಮಹಾರಾಜರ ಕಾಲದಲ್ಲಿಯೇ ನಿರ್ಣಯಿಸಲಾಗಿತ್ತು. ಮೈಸೂರು ಸಂಸ್ಥಾನದ ರಾಜ ಕೃಷ್ಣರಾಜ ಒಡೆಯರ್ ಆಡಳಿತಾವಧಿಯಲ್ಲಿ ದಿವಾನರ ನಿರ್ಣಯವೇ ಅಂತಿಮ ಆಗಬಾರದು ಎಂಬ ಕಾರಣಕ್ಕೆ, ಜನಕಲ್ಯಾಣ ಯೋಜನೆಗಳಿಗೆ ಮಾರ್ಗದರ್ಶನ ನೀಡಲು ಪ್ರಜಾ ಪರಿಷತ್ ಸ್ಥಾಪಿಸಲಾಗಿತ್ತು. ಸ್ವಾತಂತ್ರ್ಯ ಬಳಿಕ ಪ್ರಜಾ ಪರಿಷತ್, ವಿಧಾನ ಪರಿಷತ್ ಆಗಿ ಬದಲಾಯಿತು. ಎಷ್ಟೋ ಸರ್ಕಾರಗಳು ಬಂದು ಹೋದವು. ಚುನಾಯಿತ ಸದಸ್ಯರು ಅಲ್ಲದೇ ವಿವಿಧ ರಂಗಗಳ ಮೇಧಾವಿಗಳನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡುವ ಸಂಪ್ರದಾಯ ನಿಲ್ಲಲಿಲ್ಲ.

ಮೇಲ್ಮೆನೆ ಎಂದು ಕರೆಯಲ್ಪಡುವ ವಿಧಾನ ಪರಿಷತ್ ತನ್ನ 113 ವರ್ಷಗಳ ಇತಿಹಾಸದಲ್ಲಿ ಎಷ್ಟೋ ಐತಿಹಾಸಿಕ ಚರ್ಚೆಗಳಿಗೆ ಸಾಕ್ಷಿ ಆಗಿದೆ. ಎಲ್ಲಾ ರಾಜಕೀಯ ಪಕ್ಷಗಳು ವಿಧಾನ ಪರಿಷತ್‍ನ್ನು ಗೌರವಿಸುತ್ತಾ ಬಂದಿವೆ. ನಾಲ್ಕು ವರ್ಷಗಳ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಸಚಿವರೊಬ್ಬರು ಪರಿಷತ್ ರದ್ದತಿ ಬಗ್ಗೆ ಪ್ರಸ್ತಾಪಿಸಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ, ಅಂತಹ ಯಾವುದೇ ಚಿಂತನೆ ಸರ್ಕಾರದ ಮುಂದಿಲ್ಲ ಅಂತಾ ಸ್ವತಃ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು.

ಆದರೆ, ಆಂಧ್ರಪ್ರದೇಶದಲ್ಲಿ ಮಾತ್ರ ಮೂರು ರಾಜಧಾನಿಗಳ ವಿಧೇಯಕಕ್ಕೆ ವಿಧಾನಪರಿಷತ್ ಅನುಮೋದನೆ ನೀಡುತ್ತಿಲ್ಲ ಎಂಬ ಕಾರಣಕ್ಕೆ, ವಿಧಾನ ಪರಿಷತ್ತನ್ನೇ ರದ್ದು ಮಾಡಲು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಇದೊಂದು ಕೆಟ್ಟ ಆಲೋಚನೆ. ಇದು ಅಗತ್ಯ ಇರಲಿಲ್ಲ. ಟೀಕೆ, ವಿಮರ್ಷೆ ತಡೆಯಲಾಗದೇ ಜಗನ್ ಸರ್ಕಾರ ಹೀಗೆ ಮಾಡುತ್ತಿದೆ. ಈ ಹಿಂದೆ ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ವಿಧಾನಪರಿಷತ್ ರದ್ದಾಗಿದ್ದು, ಅಲ್ಲಿ ಮತ್ತೊಮ್ಮೆ ಸ್ಥಾಪಿಸುವ ಚಿಂತನೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಗನ್ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರ ಸರಿ ಕಾಣುತ್ತಿಲ್ಲ.
– ಡಿಹೆಚ್ ಶಂಕರಮೂರ್ತಿ, ಮಾಜಿ ಸಭಾಪತಿ

ಆಂಧ್ರ ಪ್ರದೇಶ ಸರ್ಕಾರ ಹೇಳುವಂತೆ ಎಲ್ಲಾ ಪ್ರದೇಶಗಳ ಅಭಿವೃದ್ಧಿಗೆ ಮೂರು ರಾಜಧಾನಿಗಳ ಅಗತ್ಯವಿಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಬೇರೆ ಬೇರೆ ಕಡೆ ಇರುವುದು ಊಹೆ ನಿಲುಕದ ವಿಷಯ. ದೇಶದಲ್ಲಿ ತುಂಬಾ ರಾಜ್ಯಗಳಲ್ಲಿ ಮೇಲ್ಮನೆ ಇಲ್ಲ. ಚಿಕ್ಕ ಚಿಕ್ಕ ರಾಜ್ಯಗಳಿಗೆ ಇದು ಆರ್ಥಿಕವಾಗಿ ಭಾರ ಕೂಡ. ಆದರೆ, ಆಂಧ್ರ ಪ್ರದೇಶಕ್ಕೆ ಮೇಲ್ಮನೆ ಅಗತ್ವಿದೆ. ಇದರ ರದ್ದತಿಗೆ ನಮ್ಮ ವಿರೋಧವಿದೆ.
– ಬಿಕೆ ಚತುರ್ವೇದಿ, ಕೇಂದ್ರ ಸಚಿವ ಸಂಪುಟದ ನಿವೃತ್ತ ಕಾರ್ಯದರ್ಶಿ

LEAVE A REPLY

Please enter your comment!
Please enter your name here