ಲೋಕಸಭಾ ಚುನಾವಣೆ ಗೆಲ್ಲಲು ಬಿಜೆಪಿಯಿಂದ 1,264 ಕೋಟಿ ರೂ. ಖರ್ಚು…!

2019ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಜಯಗಳಿಸಲು ಬಿಜೆಪಿ ಬರೋಬ್ಬರೀ 1,264 ಕೋಟಿ ರೂಪಾಯಿ ಹಣ ಸುರಿದಿತ್ತು. ಇದನ್ನು ಸ್ವತಃ ಭಾರತೀಯ ಜನತಾ ಪಕ್ಷವೇ ಘೋಷಿಸಿಕೊಂಡಿದೆ. ಚುನಾವಣಾ ಆಯೋಗಕ್ಕೆ ಚುನಾವಣಾ ಖರ್ಚಿನ ಬಗ್ಗೆ ಮಾಹಿತಿ ಸಲ್ಲಿಸಿದೆ.

2014ರ ಲೋಕಸಭಾ ಚುನಾವಣೆಯಲ್ಲಿ 714 ಕೋಟಿ ರೂಪಾಯಿಯನ್ನು ಬಿಜೆಪಿ ಖರ್ಚು ಮಾಡಿತ್ತು. 2014ಕ್ಕೆ ಹೋಲಿಸಿದ್ರೆ 2019ರಲ್ಲಿ ಕಮಲ ಪಾಳಯ  ಶೇಕಡಾ 77ರಷ್ಟು ಅಧಿಕ ಕಾಂಚಾಣದ ಹೊಳೆಯನ್ನೇ ಹರಿಸಿದೆ.

1,264 ಕೋಟಿ ರೂಪಾಯಿಗಳಲ್ಲಿ 1,078 ಕೋಟಿ ರೂಪಾಯಿ ಪಕ್ಷದ ಪರ ಜನಾಭಿಪ್ರಾಯ ಮೂಡಿಸಲು ಸುರಿಯಲಾಗಿದ್ರೆ, 186.5 ಕೋಟಿ ರೂಪಾಯಿಯನ್ನು ಪಕ್ಷದ ಅಭ್ಯರ್ಥಿಗಳಿಗಾಗಿ ವಿನಿಯೋಗಿಸಲಾಗಿತ್ತು. 9.91 ಕೋಟಿ ರೂಪಾಯಿಯನ್ನು ಸಾರ್ವಜನಿಕ ಸಭೆಗಳು ಮತ್ತು ಮೆರವಣಿಗೆಗಳ ಆಯೋಜನೆಗೆ ಬಳಸಲಾಗಿತ್ತು.

ಮುದ್ರಣ ಮಾಧ್ಯಮ, ಟಿವಿ, ವೆಬ್‌ಸೈಟ್‌, ಫೇಸ್‌ಬುಕ್‌-ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳು ಮತ್ತು ಎಸ್‌ಎಂಎಸ್‌ ಮೂಲಕ ಪ್ರಚಾರಕ್ಕಾಗಿ ಅತ್ಯಧಿಕ 325 ಕೋಟಿ ರೂಪಾಯಿಯನ್ನು ಉಪಯೋಗಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಸ್ಟಾರ್‌ ಪ್ರಚಾರಕರ ಪ್ರಚಾರಕ್ಕಾಗಿ 175.68 ಕೋಟಿ ರೂಪಾಯಿ ಬಳಸಲಾಗಿದೆ.

ಪೋಸ್ಟರ್‌, ಕಟೌಟ್‌, ಬ್ಯಾನರ್‌ಗಳಿಗಾಗಿ 25.80 ಕೋಟಿ ರೂಪಾಯಿ ಖರ್ಚು ಮಾಡಿದ್ದರೆ, ಇತರೆ ಖರ್ಚುಗಳ ರೂಪದಲ್ಲಿ 211 ಕೋಟಿ ರೂಪಾಯಿಯನ್ನು ತೋರಿಸಲಾಗಿದೆ.

2018-19ರ ಅವಧಿಯಲ್ಲಿ ಬಿಜೆಪಿಗೆ ಬಂದಿರುವ ದೇಣಿಗೆ 2,410 ಕೋಟಿ ರೂಪಾಯಿ ಆಗಿದ್ದರೆ, 2017-18ರಲ್ಲಿ 1,027 ಕೋಟಿ ರೂಪಾಯಿ ಹಣ ಬಿಜೆಪಿಗೆ ಸಂದಾಯವಾಗಿತ್ತು.

LEAVE A REPLY

Please enter your comment!
Please enter your name here