ಲೂಡೋ, ಚೆಸ್‌ ಬೋರ್ಡ್‌ ಹಂಚಿದ ಬಿಜೆಪಿ ಶಾಸಕ ಪ್ರೀತಂಗೌಡ..! -ಇದು ಲಾಕ್‌ಡೌನ್‌ ಸಮಾಜಸೇವೆಯಂತೆ..!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನ ಮನೆಯಲ್ಲಿದ್ರೆ ಶಾಸಕರು, ಸಂಸದರು ಹೀಗೆ ರಾಜಕಾರಣಿಗಳು ಬೀದಿಯಲ್ಲಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಮಾಸ್ಕ್‌ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೆಂಬಲಿಗರ ಗುಂಪಿನೊಂದಿಗೆ ಮನೆ ಮನೆಗೆ ಏರಿಯಾ ಏರಿಯಾಗಳೆಲ್ಲ ಸುತ್ತಾಡುತ್ತಿದ್ದಾರೆ.

ಹಾಸನ ನಗದ ಬಿಜೆಪಿ ಶಾಸಕ ಪ್ರೀತಂಗೌಡ. ಇವತ್ತು ಶಾಸಕ ಪ್ರೀತಂಗೌಡರು ನಗರದಲ್ಲಿ ಮನೆ ಮನೆಗಳಿಗೆ ಭೇಟಿ ನೀಡಿದ್ದರು. ಆ ಭೇಟಿಯಲ್ಲಿ ಆ ಮನೆಗಳಿಗೆ ಕೊಟ್ಟಿದ್ದು ಮಾಸ್ಕ್‌, ಜೊತೆಗೆ ಲೂಡೋ ಮತ್ತು ಚೆಸ್‌ ಬಾಕ್ಸ್‌.

ಶಾಸಕರ ಈ ಅಪರೂಪದ ಕಾರ್ಯದ ಗುರಿ ೨೦ ಸಾವಿರ ಮನೆಗಳಿಗೆ ಲೂಡೋ ಮತ್ತು ಚೆಸ್‌ ಬಾಕ್ಸ್‌ ಹಂಚುವುದು. ಉದ್ದೇಶ ಇಷ್ಟೇ, ಜನ ಮನೆಯಿಂದ ಹೊರಬಾರದಂತೆ ತಡೆಯುವುದು. ಮನೆಗಳವರಿಗೆ ಒಳಾಂಗಣ ಆಟಗಳನ್ನು ಆಡುವಂತೆ ಪ್ರೋತ್ಸಾಹಿಸುವುದು.

ಶಾಸಕರು ಒಬ್ಬರೇ ಹೋಗಿ ಹಂಚಲಿಲ್ಲ. ತಮ್ಮ ಜೊತೆಗೆ ಒಂದಿಷ್ಟು ಬೆಂಬಲಿಗರು ಕರೆದುಕೊಂಡು ಹೋದರು. ಆದರೆ ಮಾನ್ಯ ಶಾಸಕರು ಲೂಡೋ ಮತ್ತು ಚೆಸ್‌ ಬೋರ್ಡ್‌ ಕೊಟ್ಟ ಮನೆಯವರ ಮನೆಯ ಫೋಟೋಗಳನ್ನು ನೋಡಿದರೆ ಅವರೇನು ಲೂಡೋ, ಚೆಸ್‌ ಬೋರ್ಡ್‌ ತೆಗೆದುಕೊಳ್ಳದಷ್ಟು ಅಸಹಾಯಕ ಸ್ಥಿತಿಯಲ್ಲಿದ್ದರೆ ಎಂದೇನು ಅನ್ನಿಸುವುದಿಲ್ಲ.

ಅಂದಹಾಗೆ ಈ ಬಾಕ್ಸ್‌ಗಳ ಮೇಲೆ ತಮ್ಮ ಹೆಸರು ಮತ್ತು ಫೋಟೋವನ್ನು ಹಾಕೋದನ್ನು ಶಾಸಕರು ಮರೆತಿರಲಿಲ್ಲ. ಆಡುವಾಗ್ಲೆಲ್ಲ ಯಾರು ಕೊಟ್ಟಿದ್ದು ಎಂದು ಗೊತ್ತಾಗಬೇಕಲ್ವಾ..!

ಆದರೆ ಕ್ಷೇತ್ರದ ಶಾಸಕರೊಬ್ಬರು ಮನೆಬಾಗಿಲಿಗೆ ಲೂಡೋ ಮತ್ತು ಚೆಸ್‌ಬಾಕ್ಸ್‌ ತಂದುಕೊಟ್ಟಾಗ ಬೇಡ ಎಂದು ಹೇಳುವುದು ಸೌಜನ್ಯವೂ ಅಲ್ಲ, ಹೀಗಾಗಿ ಜನ ಸ್ವೀಕರಿಸಿದರು.

ಶಾಸಕರ ಈ ಸಾಮಾಜಿಕ ಸೇವೆಯ ಆಟ ಸದ್ಯಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೇ ಸುದ್ದಿ ಆಗಿದೆ. ಬೆಂಬಲಿಗರು ನಮ್ಮ ನಾಯಕ ನೋಡಿ ಎಂಥ ಒಳ್ಳೆ ಕೆಲ್ಸ ಮಾಡಿದ್ದಾರೆ ಎಂದು ಹೇಳ್ತಿದ್ದಾರೆ, ಅತ್ತ ವಿರೋಧಿ ನಾಯಕರು ನೋಡ್ರಿ ಬಡವರ ಮನೆಗೆ ಅಕ್ಕಿ, ದವಸ-ಧಾನ್ಯ ಕೊಡೋದು ಬಿಟ್ಟು ಶ್ರೀಮಂತರ ಮನೆಗೆ ಆಟಿಕೆ ಸಾಮಾನು ಹಂಚ್ತಿದ್ದೀರಲ್ಲ ಅಂತ ವ್ಯಂಗ್ಯವಾಡಿದ್ದಾರೆ.

ಛೇ ಇಂತಹ ಐಡಿಯಾ ನನಗೆ ಹೊಳೆದೇ ಇರಲಿಲ್ವಲ್ಲ..? ಎಂದು ಕೆಲವೊಂದಿಷ್ಟು ರಾಜಕಾರಣಿಗಳು ಬೇಸರಿಸಿಕೊಂಡರೂ ತಪ್ಪಿಲ್ಲ.

LEAVE A REPLY

Please enter your comment!
Please enter your name here