ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ಜನರಿಗೆ ಕಳೆದ 20 ದಿನಗಳಿಂದ ಆಹಾರ ಪೂರೈಸುತ್ತಿರುವ ಎಎಪಿ

ಬೆಂಗಳೂರಿನ ವಿವಿಧ ವಿಧಾನ ಸಭಾ ಕ್ಷೇತ್ರ ಹಾಗೂ ವಾರ್ಡ್‌ಗಳಲ್ಲಿ ಸಂಕಷ್ಟಕ್ಕೀಡಾದ ಬಡವರಿಗೆ, ದಿನಗೂಲಿ ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಮ್ ಆದ್ಮಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಲಾಕ್ ಡೌನ್ ಆದಾಗಿನಿಂದ ಹಚ್ಚಿದ ಒಲೆ ಇದುವರೆಗೂ ಆರಿಲ್ಲ, ಪ್ರತಿ ದಿನ 200 ಕ್ಕೂ ಹೆಚ್ಚು ಕಾರ್ಯಕರ್ತರು ಹಾಗೂ 15 ಕ್ಕೂ ಹೆಚ್ಚು ಅಡುಗೆ ತಯಾರಕರು ನಗರದ ವಿವಿಧ ಭಾಗದಲ್ಲಿ ದಿನಕ್ಕೆ ಮೂರು ಪಾಳಿಯಂತೆ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 20 ಸಾವಿರ ಜನಕ್ಕೆ ಆಹಾರ, ಸುಮಾರು 1500 ಕುಟುಂಬಗಳಿಗೆ 2 ವಾರಕ್ಕೆ ಆಗುವಷ್ಟು ದಿನಸಿ ಸಾಮಾಗ್ರಿಗಳ ಪೊಟ್ಟಣಗಳನ್ನು ಪಕ್ಷದ ರಾಜ್ಯ ಕಾರ್ಯದರ್ಶಿ ಸಂಚಿತ್ ಸಹಾನಿ ಅವರ ನೇತೃತ್ವದಲ್ಲಿ ಹಂಚಿಕೆ ಮಾಡಲಾಗಿದೆ.

ಮುಖಂಡ ಮಹಮದ್ ಅಸದ್ ಸಹಕಾರದೊಂದಿಗೆ ಹಾಗೂ ಭಾರತ್ ಸಮಾಜ ಸೇವಕ ಸಂಘದ ಸಹಯೋಗದಲ್ಲಿ ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನಾಗಾವರ, ಎಚ್.ಬಿ.ಆರ್ ಲೇಔಟ್, ಲಿಂಗರಾಜಪುರಂ, ಹೆಗಡೆ ನಗರ, ಬೆಳ್ಳೆನಹಳ್ಳಿ, ಮೋದಿ ರಸ್ತೆ, ಕೆ.ಜಿ.ಹಳ್ಳಿ ಭಾಗದ ಸುಮಾರು 1,100 ಜನರಿಗೆ ಕಳೆದ 13 ದಿನಗಳಿಂದ ಊಟದ ಪೊಟ್ಟಣಗಳನ್ನು ಹಂಚಲಾಗುತ್ತಿದೆ. ಆಹಾರ ಹಂಚುವುದರ ಜತೆಗೆ ಜನರ ಸುರಕ್ಷತೆಯ ದೃಷ್ಟಿಯಿಂದ ಮಾಸ್ಕ್‌ಗಳನ್ನು ತಯಾರಿಸಿ ಹಂಚಿಕೆ ಮಾಡುತ್ತಿರುವುದು ವಿಶೇಷ ಸಂಗತಿ.

ಈ ಭಾಗದಲ್ಲಿ ವಾಸಿಸುವ ಹೆಚ್ಚಿನ ಜನರು ದಿನಗೂಲಿ ಕಾರ್ಮಿಕರು ಹಾಗೂ ಶ್ರಮಿಕ ವರ್ಗಕ್ಕೆ ಸೇರಿದವರು. ನಗರದ ಅಭಿವೃದ್ದಿಯ ಕೆಲಸಗಳಿಗೆ ಕಾರಣಕರ್ತರಾದ ಇವರುಗಳು ಹಸಿವಿನಿಂದ ಬಳಲಬಾರದು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡು ಅನೇಕ ಸ್ವಯಂಸೇವಕರ ಜತೆ ಸೇರಿಕೊಂಡು ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ.

 

ದೆಹಲಿ ಆಮ್ ಆದ್ಮಿ ಸರ್ಕಾರವು ಪ್ರತಿ ದಿನ ಸುಮಾರು 15 ಲಕ್ಷ ಕುಟುಂಬಗಳಿಗೆ ಊಟದ ವ್ಯವಸ್ಥೆ ಮಾಡಿದೆ. ಈ ಕೆಲಸವನ್ನೆ ಸ್ಪೂರ್ತಿಯಾಗಿಟ್ಟುಕೊಂಡ ನೂರಾರು ಕಾರ್ಯಕರ್ತರು ಕೆ.ಜಿ.ಹಳ್ಳಿ ಅರೇಬಿಕ್ ಶಾಲೆ ಸಮೀಪದ ಜಮ್ ಜಮ್ ಸಮುದಾಯ ಭವನ ಸೇರಿದಂತೆ ತಮ್ಮ ತಮ್ಮ ಮನೆಗಳಲ್ಲೆ ಆಹಾರ ತಯಾರಿಸಿ ಹಂಚುವುದರ ಮೂಲಕ ಆಶಕ್ತರ ನೆರವಿಗೆ ನಿಲ್ಲುತ್ತಿದ್ದಾರೆ.

ನಗರದ ಇತರೆಡೆ ಸಹಾಯ ಹಸ್ತ ಚಾಚಿರುವ ಎಎಪಿ ಮುಖಂಡರು

ಸುಬ್ರಮಣ್ಯಪುರಂ ವಾರ್ಡ್ ಅಧ್ಯಕ್ಷರಾದ ಶರತ್ ಖಾದ್ರಿ ಅವರು ಕಳೆದ 10 ದಿನಗಳಿಂದ ತಮ್ಮ ವ್ಯಾಪ್ತಿಯಲ್ಲಿ ಬರುವ ದೊಡ್ಡ ಕಲ್ಲಸಂದ್ರ, ನಾರಾಯಣನಗರದ ಸುತ್ತ ಮುತ್ತ ನೆಲೆಸಿರುವ ಸುಮಾರು 150 ಕುಟುಂಬಗಳಿಗೆ ಮನೆಯಲ್ಲೆ ಬೆಳಗಿನ ಉಪಹಾರ ತಯಾರಿಸಿ ಹಂಚುತ್ತಿದ್ದಾರೆ. ಇದುವರೆಗೂ ಸುಮಾರು 2,500 ಕುಟುಂಬಗಳಿಗೆ ಉಣಬಡಿಸಲಾಗಿದೆ.

ಅಲ್ಲದೇ ಇವರು ವಾಸವಿರುವ ಅಪಾರ್ಟ್‌ಮೆಂಟ್ ನೆಲಮಾಳಿಗೆಯಲ್ಲೆ ತರಕಾರಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು ಸ್ಥಳೀಯ ನಿವಾಸಿಗಳಿಗೆ ದಿನ ಬಳಕೆಯ ವಸ್ತುಗಳ ಅಭಾವ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಈ ಸೌಕರ್ಯ ಒದಗಿಸಿರುವುದರಿಂದ ಸುತ್ತ ಮುತ್ತಲಿನ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಹಾಗೂ ಸಾಮಾಜಿಕ ಅಂತರ ಹಾಗೂ ಸುರಕ್ಷಾ ವಿಧಾನಗಳನ್ನು ಬಳಸುತ್ತಿರುವುದರಿಂದ ಸೋಂಕಿನ ಭಯವಿಲ್ಲದೆ ಸುತ್ತಮುತ್ತಲಿನ ನಾಗರೀಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಹಸಿದ ಜನರ ನೋವಿಗೆ ಆಮ್ ಆದ್ಮಿ ಪಕ್ಷದ ನೂರಾರು ಕಾರ್ಯಕರ್ತರು ತೆರೆಮರೆಯಲ್ಲೆ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಆಟೋ ವಿಭಾಗದ ಅಧ್ಯಕ್ಷ ಅಯೂಬ್ ಖಾನ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವೆಂಕಟೇ ಗೌಡ ಹಾಗೂ ಹೆಗ್ಗನ ಹಳ್ಳಿ ವಾರ್ಡಿನ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸೇರಿಕೊಂಡು ಆಟೊ ಚಾಲಕರು ಹಾಗೂ ಮೆಕ್ಯಾನಿಕ್‌ಗಳ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಿದ್ದಾರೆ.

ಕಾಡುಗೋಡಿ ವಾರ್ಡ್ ಅಧ್ಯಕ್ಷ ಪಿ.ಮುನೇಂದ್ರ ಅವರು ಬಿಬಿಎಂಪಿ ಆರೋಗ್ಯ ಅಧಿಕಾರಿ ಅಕ್ಕಮ್ಮ ಅವರ ಸಹಕಾರದೊಂದಿಗೆ ಕಾಡುಗೋಡಿ ವಾರ್ಡಿನ ಎಲ್ಲಾ ರಸ್ತೆಗಳಲ್ಲೂ ಸೋಂಕು ನಿವಾರಕವನ್ನು ಸಿಂಪಡಿಸಲಾಗಿದೆ.

ಪುಲಕೇಶಿ ನಗರ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಶಾಸವಲಿ ಹಾಗೂ ವಾರ್ಡ್ ಅಧ್ಯಕ್ಷ ಎ.ಲಾಜರ್, ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಇಕ್ಬಾಲ್ ಅಹಮದ್, ರಕೀಬುಲ್ಲಾ ಅವರು ಸುಮಾರು 20 ಜನ ಕಾರ್ಯಕರ್ತರ ಜತೆ ಸೇರಿ ಮೋದಿ ರಸ್ತೆ, ಮುನೇಶ್ವರ ನಗರ, ಡಿ.ಜೆ.ಹಳ್ಳಿ, ಎಸ್.ಕೆ.ಗಾರ್ಡನ್, ಬ್ಯಾಡರಹಳ್ಳಿ, ಕಂಟೋನ್ಮೆಂಟ್ ರೈಲ್ವೆ ಕಾಲೋನಿ, ಪಿಲ್ಲಾನ ಗಾರ್ಡನ್ ಸುತ್ತಮುತ್ತಲಿನ ಸುಮಾರು 2 ಸಾವಿರ ಜನರಿಗೆ ಕಳೆದ 15 ದಿನಗಳಿಂದ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.

ಬಾಪೂಜಿ ನಗರ ವಾರ್ಡ್ ನಂಬರ್ 134 ರಲ್ಲಿ ಸೀಲ್ ಡೌನ್ ಮಾಡಲಾಗಿರುವುದರಿಂದ ಬಾಪೂಜಿ ನಗರ ವಾರ್ಡಿನ ಉಪಾಧ್ಯಕ್ಷರಾದ ಅಬ್ದುಲ್ ರಹೀಂ ಅವರು ಸುಮಾರು 2 ಸಾವಿರ ಜನರಿಗೆ ಆಹಾರ ಸಾಮಾಗ್ರಿಗಳು ಇರುವ ಕಿಟ್‌ಗಳನ್ನು ಒದಗಿಸಿದರು. ಇವರು ಪ್ರತಿನಿತ್ಯ 2500 ಜನರಿಗೆ ಆಹಾರ ಪೊಟ್ಟಣಗಳನ್ನು ಸರಬರಾಜು ಮಾಡುತ್ತಿದ್ದಾರೆ.

ಹೀಗೆ ನಗರದ ನಾನಾ ಭಾಗದಲ್ಲಿ ಸ್ಚಯಂಪ್ರೇರಿತರಾಗಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಜನರ ಕಷ್ಟದಲ್ಲಿ ಭಾಗಿಯಾಗಿ ಅವರ ನೋವಿಗೆ ಸ್ಪಂದಿಸುತ್ತಿದ್ದಾರೆ. ಇದಲ್ಲದೇ ರಾಜ್ಯದ ನಾನಾ ಕಡೆ ಪಕ್ಷದ ಕಾರ್ಯಕರ್ತರು ಕೊರೊನಾ ಸೈನಿಕರಾಗಿ ನೋಂದಾಯಿಸಿಕೊಂಡು, ಜನರಿಗೂ ಹಾಗೂ ಸರ್ಕಾರಕ್ಕೂ ನೆರವಾಗುತ್ತಿದ್ದಾರೆ. ಇಸ್ಕಾನ್ ಸಂಸ್ಥೆಯ ಅಕ್ಷಯ ಪಾತ್ರೆ ಜತೆಗೂಡಿ ಹಲವಾರು ಕಾರ್ಯಕರ್ತರು ಆಹಾರ ಹಾಗೂ ದಿನಸಿ ಪೊಟ್ಟಣಗಳ ಸಿದ್ಧಪಡಿಸುವಿಕೆ ಹಾಗೂ ವಿತರಣೆಯಲ್ಲಿ ಭಾಗಿಯಾಗಿದ್ದಾರೆ.

LEAVE A REPLY

Please enter your comment!
Please enter your name here