ಲಾಕ್ ಡೌನ್‌ ಹೊತ್ತಲ್ಲಿ ಕಾರ್ಮಿಕರಿಗೆ ಸಂಬಳ ಕೊಡಬೇಕಿಲ್ಲ, ಕೆಲಸದಿಂದ ತೆಗೆದರೆ ಮಾಲೀಕರು ಹೊಣೆಯಲ್ಲ – ಸಮಿತಿ ಶಿಫಾರಸ್ಸು

ಪ್ರಾತಿನಿಧಿಕ ಚಿತ್ರ

ಲಾಕ್‌ಡೌನ್‌ ಹೊತ್ತಲ್ಲಿ ಕೈಗಾರಿಕೆಗಳ ಮಾಲೀಕರಿಗೆ ತಮ್ಮ ನೌಕರರು ಮತ್ತು ಕಾರ್ಮಿಕರಿಗೆ ಸಂಬಳ ನೀಡುವಂತೆ ಒತ್ತಾಯಿಸಲಾಗದು ಎಂದು ಕಾರ್ಮಿಕರ ಮೇಲಿನ ಸಂಸದೀಯ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿದೆ.

ಅಲ್ಲದೇ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕೈಗಾರಿಕೆಗಳು ಮುಚ್ಚಿದ್ದಾಗ ಕಾರ್ಮಿಕರನ್ನು ಕೆಲಸದಿಂದ ತೆಗೆದರೆ ಅದಕ್ಕೆ ಮಾಲೀಕರನ್ನು ಹೊಣೆ ಮಾಡಲಾಗದೂ ಎಂದೂ ಸಲಹೆ ನೀಡಿದೆ.

ಕೈಗಾರಿಕಾ ಸಂಬಂಧಗಳ ಸಂಹಿತೆ ಸಂಬಂಧ  ಲೋಕಸಭಾ ಸ್ಪೀಕರ್‌ಗೆ ವರದಿ ಸಲ್ಲಿಸಿರುವ ಸಂಸದೀಯ ಸಮಿತಿ ʻನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಉದ್ಯಮವು ಮರು ಸ್ಥಾಪನೆಯಾಗುವವರೆಗೆ ಕಾರ್ಮಿಕರಿಗೆ ವೇತನ ಪಾವತಿಸುವುದು ನ್ಯಾಯಸಮ್ಮತವಲ್ಲʼ ಎಂದು ಶಿಫಾರಸ್ಸು ಮಾಡಿದೆ.

ಸಮಿತಿಯ ಮುಖ್ಯಸ್ಥರೂ ಆಗಿರುವ ಬಿಜ ಜನತಾ ದಳದ ಲೋಕಸಭಾ ಸಂಸದ ಭರ್ತುಹಾರಿ ಮಹತಾಬ್‌ ಸಾಂಕ್ರಾಮಿಕ ರೋಗವಾಗಿರುವ ಕೊರೋನಾ ತಡೆಗೆ ಹೇರಲಾಗಿರುವ ಲಾಕ್‌ಡೌನನ್ನೂ ನೈಸರ್ಗಿಕ ವಿಪತ್ತು ಎಂದು ಹೇಳಿದ್ದಾರೆ.

ಕೈಗಾರಿಕಾ ಸಂಹಿತೆಯ ಪ್ರಕಾರ  ವಿದ್ಯುತ್, ಕಲ್ಲಿದ್ದಲು, ಕಚ್ಚಾ ಸಾಮಗ್ರಿ ಇತ್ಯಾದಿಗಳ ಕೊರತೆಯಿಂದಾಗಿ ಕೆಲಸದಿಂದ ತೆಗೆದು ಹಾಕಲ್ಪಟ್ಟ ಕಾರ್ಮಿಕರು / ಉದ್ಯೋಗಿಗಳಿಗೆ 45 ದಿನಗಳವರೆಗೆ 50% ವೇತನವನ್ನು ಕಂಪನಿಯ ಮಾಲೀಕರು ಪಾವತಿಸಬೇಕಾಗುತ್ತದೆ. ಆದರೆ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ನೌಕರರಿಗೆ ವೇತನ ಪಾವತಿಸುವುದಕ್ಕೆ ಕಾರ್ಮಿಕರ ಮೇಲಿನ ಸಂಸದೀಯ ಸಮಿತಿಯು ಆಕ್ಷೇಪ ವ್ಯಕ್ತಪಡಿಸಿದೆ.

ಭೂಕಂಪ,ಪ್ರವಾಹ, ಚಂಡಮಾರುತ ಮುಂತಾದ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಕಂಪನಿ ಮಾಲೀಕರ ತಪ್ಪಿಲ್ಲದೇ ದೀರ್ಘಾವಧಿಗೆ ಕೈಗಾರಿಕೆಗಳನ್ನು ಮುಚ್ಚಬೇಕಾಗುತ್ತದೆ. ಹೀಗಾಗಿ ಉದ್ಯಮ ಮರು-ಸ್ಥಾಪನೆಯಾಗುವವರೆಗೂ ಕಾರ್ಮಿಕರಿಗೆ ವೇತನವನ್ನು ಪಾವತಿಸುವುದು ನ್ಯಾಯಸಮ್ಮತವಲ್ಲ ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಕೈಗಾರಿಕಾ ಸಂಬಂಧ ಸಂಹಿತೆ 2019 ಕೈಗಾರಿಕಾ ವಿವಾದ ಕಾಯ್ದೆ, 1947, ಕಾರ್ಮಿಕ ಸಂಘಗಳ ಕಾಯ್ದೆ, 1926, ಮತ್ತು ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶ) ಕಾಯ್ದೆ, 1946 ಎಂಬ ಮೂರು ಕಾನೂನುಗಳ ಸಂಯೋಜನೆಯಾಗಿದೆ. ಕಳೆದ ನವೆಂಬರ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಇದಾದ ಬಳಿಕ ಇದನ್ನು ಕಾರ್ಮಿಕರ ಸ್ಥಾಯಿ ಸಮಿತಿಗೆ ಒಪ್ಪಿಸಲಾಗಿತ್ತು. ಈಗ ಅಂತಿಮ ವರದಿಯನ್ನು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಸಲ್ಲಿಕೆ ಮಾಡಿದ್ದು, ಲೋಕಸಭೆಯ ಅನುಮೋದನೆ ಬಾಕಿ ಇದೆ.

LEAVE A REPLY

Please enter your comment!
Please enter your name here