ಲಾಕ್‍ಡೌನ್ 4 ಆಗುತ್ತಾ ಇಲ್ವಾ..? – ನಾಳೆ ಪ್ರಧಾನಿಯಿಂದ ಮೆಗಾ ಮೀಟಿಂಗ್

ಕೊರೋನಾ ಲಾಕ್‍ಡೌನ್-3 ಮುಗಿಯುವ ದಿನಗಳು ಹತ್ತಿರವಾಗುತ್ತಿವೆ. ಮುಂದೇನು ಮಾಡಬೇಕು..? ಲಾಕ್‍ಡೌನ್4 ಮಾಡಬೇಕೋ..? ಬೇಡವೋ..? ಎಂಬುದನ್ನು ಚರ್ಚಿಸಿ ನಿರ್ಧರಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.

ಸೋಮವಾರದ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕೇಂದ್ರ ಗೃಹ ಸಚಿವ, ಆರ್ಥಿಕ ಸಚಿವೆ, ಆರೋಗ್ಯ ಸಚಿವರು ಸಹ ಪಾಲ್ಗೊಳ್ಳಲಿದ್ದಾರೆ. ಕಳೆದ ಸಭೆಗಳಲ್ಲಿ ಕೇವಲ ಪ್ರಧಾನಮಂತ್ರು, ಗೃಹ ಮಂತ್ರಿಗಳು ಮಾತ್ರವೇ ಪಾಲ್ಗೊಂಡಿದ್ದರು.

ಐದನೇ ಬಾರಿಗೆ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿರುವ ಪ್ರಧಾನಮಂತ್ರಿಗಳು, ಲಾಕ್‍ಡೌನ್‍ನಿಂದ ನಿರ್ಗಮಿಸುವ ಕುರಿತಂತೆ, ಆರ್ಥಿಕತೆಯ ಚೇತರಿಕೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.

ಎರಡು ಸೆಷನ್‍ಗಳಲ್ಲಿ ಪ್ರಧಾನಿ ಮೀಟಿಂಗ್..!?
ಕಳೆದ ಬಾರಿಯ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಕೇವಲ 9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾತನಾಡಿದ್ದರು. ಅವರ ಅಭಿಪ್ರಾಯವನ್ನು ಸಂಗ್ರಹಿಸಿದ್ದರು. ಆದರೆ, ಈ ಬಾರಿಯ ಸಮಾವೇಶದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶ ನೀಡಲಾಗುತ್ತದೆ. ಸುದೀರ್ಘ ಅವಧಿಯವರೆಗೂ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಎರಡು ಸೆಷನ್‍ಗಳಲ್ಲಿ ವಿಡಿಯೋ ಕಾನ್ಫರೆನ್ಸ್ ನಡೆಸಲು ತಯಾರಿ ನಡೆದಿದೆ ಎನ್ನಲಾಗಿದೆ. ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಮೊದಲ ಸೆಷನ್ ನಡೆಯಲಿದೆ. ಅರ್ಧ ಗಂಟೆ ವಿರಾಮದ ಬಳಿಕ ಸಂಜೆ ಆರು ಗಂಟೆಯಿಂದ ಆರಂಭ ಆಗಬಹುದು ಎನ್ನಲಾಗುತ್ತಿದೆ.

ಚರ್ಚೆಯಾಗಬಹುದಾದ ವಿಚಾರಗಳು
# ವಲಸೆ ಕಾರ್ಮಿಕರ ಆಗಮನ-ನಿರ್ಗಮನದಿಂದ ಉಂಟಾಗಿರುವ ಕೊರೋನಾ ಆತಂಕ
# ಅಂತರ್ ರಾಜ್ಯ, ಅಂತರ್ ಜಿಲ್ಲೆಗಳ ನಡುವೆ ಸಂಚಾರಕ್ಕೆ ಅನುಮತಿ ನೀಡಿದ್ದರಿಂದ ಹೆಚ್ಚಿರುವ ಕೊರೋನಾ ಪ್ರಕರಣಗಳು
# ದೇಶದಲ್ಲಿ ನಿಯಂತ್ರಣಕ್ಕೆ ಬಾರದ ಕೊರೋನಾ.. ಕೆಂಪು ವಲಯಗಳ ಸಂಖ್ಯೆ ಹೆಚ್ಚಳ
# ತಬ್ಲಿಘಿಗಳಿಂದ ಎದುರಾಗಿರುವ ಕೊರೋನಾ ಭೀತಿ
# ಕುಸಿದಿರುವ ಆರ್ಥಿಕತೆಗೆ ಬೂಸ್ಟ್ ನೀಡಲು ವಿಶೇಷ ಪ್ಯಾಕೇಜ್ ಬೇಕು ಎಂದು ರಾಜ್ಯ ಸರ್ಕಾರಗಳ ಬೇಡಿಕೆ
# ಎಷ್ಟು ಕಾಲ ಲಾಕ್‍ಡೌನ್.. ಇದನ್ನು ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಚರ್ಚೆ

LEAVE A REPLY

Please enter your comment!
Please enter your name here